ಬೆಂಗಳೂರು:''ಮುಂಬರುವ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಸೋಲು ಅನುಭವಿಸಲಿದೆ ಎಂದು ಅರಿತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಹತಾಶರಾಗಿ, ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕೆ ಮಾಡುತ್ತಿದ್ದಾರೆ'' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ಗುರುವಾರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಸುಳ್ಳು, ಅವು ಮುಂದಿನ ಪೀಳಿಗೆಗೆ ಮಾರಕ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯಕರ್ತರ ಸಭೆಯಲ್ಲಿ ಹೇಳಿರುವುದರ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ ಉತ್ತರಿಸಿದರು. ''ಪ್ರಧಾನಮಂತ್ರಿಗಳಿಗೆ ಬಿಜೆಪಿ ಭರವಸೆಗಳ ಬಗ್ಗೆ ಗೊತ್ತಿಲ್ಲವೇ. ನಾವು ಬಿಜೆಪಿಯವರಂತೆ ಎಲ್ಲರ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದು ನಾವು ಹೇಳಿಲ್ಲ. ಬಿಜೆಪಿ ಪ್ರಣಾಳಿಕೆ ತೆಗೆದು ನೋಡಿ. ಅವರು 1 ಲಕ್ಷದವರೆಗೂ ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದರು. ರೈತರ ಪಂಪ್ಸೆಟ್ಗೆ ನೀಡುವ ವಿದ್ಯುತ್ ಅನ್ನು 7 ತಾಸಿನಿಂದ 10 ತಾಸಿಗೆ ಹೆಚ್ಚಳ ಮಾಡುವುದಾಗಿ ಹೇಳಿದ್ದರು. ಜನವರಿ 16ರಂದು ಬೊಮ್ಮಾಯಿ ಅವರ ಸರ್ಕಾರ ಪತ್ರಿಕೆಗಳಿಗೆ ಕೊಟ್ಟಿರುವ ಜಾಹೀರಾತು ನೋಡಿ. ಕಾಂಗ್ರೆಸ್ ಗ್ಯಾರಂಟಿ ಯೋಜನೆ ಮಾದರಿಯಲ್ಲಿ ಮಹಿಳೆಯರಿಗೆ ಪ್ರೋತ್ಸಾಹಧನ ನೀಡುವ ಭರವಸೆ ನೀಡಿದ್ದಾರೆ'' ಎಂದರು.
''ಇಂದು ಪ್ರಧಾನಮಂತ್ರಿಗಳು ನಮ್ಮ ಗ್ಯಾರಂಟಿ ಬಗ್ಗೆ ಮಾತನಾಡಿರುವುದು ಬಹಳ ಸಂತೋಷವಾಗಿದೆ. ನಮ್ಮ ಗ್ಯಾರಂಟಿ ಯೋಜನೆ ಬಗ್ಗೆ ಮಾತನಾಡುವ ಮೂಲಕ ಮೋದಿ ಅವರು ತಮ್ಮ ಸರ್ಕಾರ ಜನರ ವಿಶ್ವಾಗಳಿಸಲು ವಿಫಲವಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಬಿಜೆಪಿ ಡಬಲ್ ಇಂಜಿನ್ ಸರ್ಕಾರ ಬೆಲೆ ಏರಿಕೆ ನಿಯಂತ್ರಿಸಲು ವಿಫಲವಾಗಿವೆ. ಅವರು 2014ರ ಚುನಾವಣೆ ಸಮಯದಲ್ಲಿ ದೇಶದ ಮತದಾರರಿಗೆ ಮತದಾನ ಮಾಡುವ ಮುನ್ನ ಅಡುಗೆ ಅನಿಲ ಸಿಲಿಂಡರ್ಗೆ ನಮಿಸಿ ಮತ ಹಾಕಿ ಎಂದಿದ್ದರು. ಈಗ ಅದನ್ನೇ ಮಾಡಬೇಕು ಎಂದು ರಾಜ್ಯದ ಜನರಿಗೆ ಹೇಳುತ್ತಿದ್ದೇವೆ'' ಎಂಬ ಮಾಹಿತಿ ನೀಡಿದರು.
ಗ್ಯಾರಂಟಿ ಯೋಜನೆಗಳಿಗೆ ಮುದ್ರೆ ಹಾಕುವ ದಿನ:''ಕಾಂಗ್ರೆಸ್ ಪಕ್ಷದ ನಾಲ್ಕು ಯೋಜನೆಗಳಾದ ಗೃಹಜ್ಯೋತಿ, ಗೃಹಲಕ್ಷಿ, ಅನ್ನಭಾಗ್ಯ, ಯುವನಿಧಿ ಯೋಜನೆ ಜಾರಿ ಮಾಡುವುದು ನಿಶ್ಚಿತ. ಮೇ 10ರಂದು ಕೇವಲ ಮತದಾನದ ದಿನವಲ್ಲ, ರಾಜ್ಯದ ಭವಿಷ್ಯ ಬದಲಿಸುವ ದಿನ, ಈ ಗ್ಯಾರಂಟಿ ಯೋಜನೆಗಳಿಗೆ ಮುದ್ರೆ ಹಾಕುವ ದಿನ. ಅಧಿಕಾರಕ್ಕೆ ಬಂದ ಮೊದಲ ಸಚಿವ ಸಂಪುಟದಲ್ಲಿ ಈ ಯೋಜನೆ ಜಾರಿ ಮಾಡುತ್ತೇವೆ. ಇದು ಕಾಂಗ್ರೆಸ್ ಪಕ್ಷದ ಸಂಕಲ್ಪ. ಮೋದಿ ಅವರ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲ. ಅವರು ಆತಂಕಪಡುವ ಅಗತ್ಯವಿಲ್ಲ. ನಾವು ಈ ಯೋಜನೆ ಜಾರಿ ಮಾಡದಿದ್ದರೆ ನಾವು ಮತ್ತೆ ಜನರ ಮುಂದೆ ಮತಯಾಚಿಸುವುದಿಲ್ಲ'' ಎಂದು ತಿಳಿಸಿದರು. ಚನ್ನಪಟ್ಟಣ ಕಡೆಯಿಂದ ಬಿಜೆಪಿ ನಾಯಕರು ಪಕ್ಷಕ್ಕೆ ಬರುತ್ತಿದ್ದಾರಾ ಎಂದು ಕೇಳಿದ ಪ್ರಶ್ನೆಗೆ, ''ಈಗ ಆ ವಿಚಾರ ಹೇಳುವುದಿಲ್ಲ. ಚುನಾವಣೆ ಮಾಡುವವರು ಚುನಾವಣೆ ಮಾಡಲಿ'' ಎಂದರು.
ಕಳೆದ ಲೋಕಸಭೆ ಚುನಾವಣೆಯಲ್ಲಿ ನನಗೆ ಕಣ್ಣೀರು ಹಾಕಿಸಿದವರಿಗೆ ನೀವು ಕಣ್ಣೀರು ಹಾಕಿಸಿ ಎಂಬ ದೇವೇಗೌಡರ ಹೇಳಿಕೆ ಬಗ್ಗೆ ಕೇಳಿದಾಗ, ''ಅವರು ಹಿರಿಯರು, ಅವರ ಅನುಭವ, ಚಾಣಕ್ಯತೆ ಜತೆ ನಾವು ಸ್ಪರ್ಧೆ ಮಾಡಲು ಆಗುವುದಿಲ್ಲ. ಅವರಿಗೆ ಒಳ್ಳೆಯದಾಗಲಿ, ಅವರ ಆರೋಗ್ಯ ಉತ್ತಮವಾಗಿರಲಿ, ಇಷ್ಟು ಇಳಿವಯಸ್ಸಾದರೂ ಅವರು ಚುನಾವಣೆಯಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಅವರ ಛಲ, ಹೋರಾಟವನ್ನು ನಾವು ನೋಡಿ ಕಲಿಯಬೇಕಿದೆ'' ಎಂದು ತಿಳಿಸಿದರು.