ಬೆಂಗಳೂರು:ಬಿಜೆಪಿಯ ಹಾಲಿ ಶಾಸಕರು ಕಾಂಗ್ರೆಸ್ಗೆ ಬರಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಬಿಜೆಪಿಯ ಹಾಲಿ ಶಾಸಕರು ಬಿಜೆಪಿಗೆ ಬರಲಿದ್ದಾರಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಹೌದು ಬರುತ್ತಾರೆ. ಪ್ರಸ್ತುತ ಬಿಜೆಪಿಯಲ್ಲಿರುವ ಶಾಸಕರು ನಮ್ಮ ಪಕ್ಷ ಕಾಂಗ್ರೆಸ್ಗೆ ಬರಲಿದ್ದಾರೆ ಎಂದರು. ನಮ್ಮ ಪಕ್ಷಕ್ಕೆ ಬರುತ್ತೇವೆ ಎಂದು ಹೇಳಿರುವ ಶಾಸಕರು ಯಾರು, ಅವರ ಹೆಸರು ಇತ್ಯಾದಿ ಯಾವುದನ್ನೂ ಈಗ ಬಹಿರಂಗ ಮಾಡಲ್ಲ ಎಂದು ಸೂಚ್ಯವಾಗಿ ತಿಳಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯ, ಹಳೆ ಮೈಸೂರಿನ ಹೆಚ್.ವಿಶ್ವನಾಥ್ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೆ ದಿನಾಂಕ ಕೂಡ ನಿಗದಿ ಆಗಿದೆ. ಬಿಜೆಪಿಯವರು ಯಾರೆಲ್ಲ ನಮ್ಮ ಪಕ್ಷ ಸೇರುತ್ತಾರೆ ಎನ್ನುವುದನ್ನು ಈಗಲೇ ಹೇಳಲು ಸಾಧ್ಯವಿಲ್ಲ ಎಂದರು. ಆ ಮೂಲಕ ಕೆಲ ಬಿಜೆಪಿ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಹೋಗಲಿದ್ದಾರೆ ಎಂಬ ಸುದ್ದಿಗೆ ಮತ್ತೆ ಪುಷ್ಠಿ ಸಿಕ್ಕಿದೆ. ಬಿಜೆಪಿ ನಾಯಕರ ವಿರುದ್ಧ ಪದೇ ಪದೇ ಹೇಳಿಕೆಗಳನ್ನು ನೀಡುತ್ತಿದ್ದ ಹೆಚ್. ವಿಶ್ವನಾಥ್ ಅವರು ಈಗಾಗಲೇ ನನ್ನ ರಕ್ತನೇ ಕಾಂಗ್ರೆಸ್, ನಾನು ಕಾಂಗ್ರೆಸ್ ಪಕ್ಷ ಸೇರುತ್ತಿರುವುದು ನಿಜ ಎಂದು ಹೇಳಿಕೆ ನೀಡಿದ್ದರು.
ನಾನು, ಸಿದ್ದರಾಮಯ್ಯ ಪ್ರಜಾಧ್ವನಿ ಯಾತ್ರೆಯಲ್ಲಿ ಬ್ಯುಸಿ ಆಗಿದ್ದೆವು. ಇವತ್ತು ನೆಲಮಂಗಲದ ಮುಖಂಡರು ಪಕ್ಷಕ್ಕೆ ಸೇರ್ಪಡೆ ಆಗ್ತಿದ್ದಾರೆ. ಬೆಮೆಲ್ ಕಾಂತರಾಜು ಅವರ ಬಹಳ ದೊಡ್ಡ ಬಳಗ ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ. ನೆಲಮಂಗಲದಲ್ಲೂ ದೊಡ್ಡ ಸಭೆ ಇದೆ. ಪ್ರಮುಖರನ್ನೆಲ್ಲ ಜೆಡಿಎಸ್ನಿಂದ ಕಾಂಗ್ರೆಸ್ ಬಳಗಕ್ಕೆ ಸೇರಿಸಿಕೊಂಡಿದ್ದೇವೆ. ನೆಲಮಂಗಲ ಹಾಲಿ ಶಾಸಕರಿಂದ ಮುನಿಸಿಪಾಲಿಟಿ ಅಸ್ತಿತ್ವವನ್ನೇ ತೆಗೆದುಹಾಕಲು ಹೊರಟಿದ್ದರು. ರಾಜ್ಯದಲ್ಲಿ ಬದಲಾವಣೆ ಪರ್ವ ಶುರುವಾಗಿದೆ. ಜೆಡಿಎಸ್ನಿಂದ ಮಾತ್ರವಲ್ಲ, ಬಿಜೆಪಿಯಿಂದಲೂ ಅನೇಕರು ನಮ್ಮ ಪಕ್ಷ ಸೇರ್ತಾ ಇದ್ದಾರೆ. ಹಳಬರು ಹೊಸಬರು ಅನ್ನೋ ಹಾಗಿಲ್ಲ, ಎಲ್ಲರೂ ಒಟ್ಟಿಗೆ ಕೆಲಸ ಮಾಡ್ತಾರೆ ಎಂದರು.