ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ಬಿಜೆಪಿಗೆ ವಿಧಾನ ಪರಿಷತ್ ನಲ್ಲೂ ಹಿನ್ನಡೆ ಸನ್ನಿಹಿತವಾಗಿದೆ. ಸದ್ಯಕ್ಕೆ ಸಭಾಪತಿ ಸ್ಥಾನ ಬಿಜೆಪಿ ಬಳಿಯೇ ಉಳಿಯಲಿದ್ದರೂ ಕೆಲ ತಿಂಗಳಲ್ಲೇ ಬಿಜೆಪಿ ಕೈತಪ್ಪುವುದು ಬಹುತೇಕ ಖಚಿತವಾಗಿದೆ. ಸಂಖ್ಯಾಬಲದ ಲೆಕ್ಕಾಚಾರದಲ್ಲಿ ಬಿಜೆಪಿ ಕುಸಿತ ಕಂಡಿದ್ದು, ಸದ್ಯದಲ್ಲೇ ಸಭಾಪತಿ ಸ್ಥಾನ ಆಡಳಿತ ಪಕ್ಷದ ಪಾಲಾಗುವ ಸಾಧ್ಯತೆ ಹೆಚ್ಚಿದೆ.
ಚುನಾವಣೆಗೆ ಮುನ್ನ ಬಿಜೆಪಿಯಿಂದ ವಿಧಾನ ಪರಿಷತ್ ಸದಸ್ಯರಾಗಿದ್ದ ಬಾಬುರಾವ್ ಚಿಂಚನಸೂರು, ಪುಟ್ಟಣ್ಣ ಅವರು ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ಪಕ್ಷದ ಟಿಕೆಟ್ ವಂಚಿತರಾದ ಲಕ್ಷ್ಮಣ ಸವದಿ, ಆರ್. ಶಂಕರ್, ಆಯನೂರು ಮಂಜುನಾಥ್ ರಾಜೀನಾಮೆ ಸಲ್ಲಿಸಿದ್ದರು. ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಐವರ ಪೈಕಿ ಮೂವರು ನಾಮ ನಿರ್ದೇಶಿತರು. ಶಿಕ್ಷಕರ ಕ್ಷೇತ್ರದಿಂದ ಪುಟ್ಟಣ್ಣ, ಪದವೀಧರ ಕ್ಷೇತ್ರದಿಂದ ಆಯನೂರು ಮಂಜುನಾಥ್ ಚುನಾಯಿತರಾದವರು.
ಇದೀಗ ಕಾಂಗ್ರೆಸ್‌ನ ಇಬ್ಬರು ನಾಮನಿರ್ದೇಶಿತ ಸದಸ್ಯರಾದ ಮೋಹನ್‌ಕುಮಾರ್ ಕೊಂಡಜ್ಜಿ ಹಾಗೂ ಪಿ. ಆರ್. ರಮೇಶ್ ಅವಧಿ ಮುಕ್ತಾಯಗೊಂಡಿದೆ. ಹೀಗಾಗಿ ಒಟ್ಟು ಖಾಲಿ ಉಳಿದಿರುವ ಏಳು ಸ್ಥಾನಗಳಲ್ಲಿ ಐದು ಸ್ಥಾನ ನಾಮನಿರ್ದೇಶನ ಸ್ಥಾನಗಳಾಗಿದ್ದು, ಎರಡು ಸ್ಥಾನಕ್ಕೆ ಮಾತ್ರ ಚುನಾವಣೆ ನಡೆಯಬೇಕಿದೆ. ಹಾಗಾಗಿ ಆ ಐದು ನಾಮನಿರ್ದೇಶನ ಸ್ಥಾನಗಳು ಸದ್ಯದಲ್ಲೇ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ದಕ್ಕಲಿವೆ.
75 ಸದಸ್ಯ ಬಲದ ವಿಧಾನ ಪರಿಷತ್ ನಲ್ಲಿ ಸದ್ಯ 7 ಸ್ಥಾನ ಖಾಲಿ ಇದ್ದು, 68 ಬಲ ಹೊಂದಿರುವ ಪರಿಷತ್ ನಲ್ಲಿ 34 ಸದಸ್ಯ ಬಲ ಇರುವ ಬಿಜೆಪಿ ಸಭಾಪತಿ ಸ್ಥಾನವನ್ನು ತಾತ್ಕಾಲಿಕವಾಗಿ ತನ್ನ ಬಳಿಯೇ ಇರಿಸಿಕೊಂಡರೂ ಸದ್ಯದಲ್ಲೇ ಸಭಾಪತಿ ಸ್ಥಾನ ಕಳೆದುಕೊಳ್ಳಲಿದೆ. ಸಭಾಪತಿ ಹುದ್ದೆಯಲ್ಲಿರುವ ಬಸವರಾಜ ಹೊರಟ್ಟಿ ಅವರಿಗೆ ಮತ್ತೆ ನಿರಾಶೆ ಕಾಡಲಿದೆ. ಈಗಿರುವ ಅಂಕಿ ಅಂಶದಂತೆ ಸಭಾಪತಿ ಸ್ಥಾನ ಪಡೆಯಲು 35 ಸದಸ್ಯ ಬಲ ಬೇಕಿದೆ. ಬಿಜೆಪಿ 34 ಸದಸ್ಯರನ್ನು ಹೊಂದಿದ್ದು, ಸಭಾಪತಿ ಸ್ಥಾನದ ಮತ 1 ಇರುವ ಕಾರಣಕ್ಕೆ ಬಿಜೆಪಿಗೆ ಸದ್ಯದ ಮಟ್ಟಿಗೆ ಸಭಾಪತಿ ಸ್ಥಾನ ಉಳಿಯಲಿದೆ.
ಸದ್ಯದಲ್ಲೇ ಸರ್ಕಾರ ಖಾಲಿ ಇರುವ ಐದು ನಾಮನಿರ್ದೇಶನ ಸದಸ್ಯ ಸ್ಥಾನಗಳಿಗೆ ಹೊಸಬರ ನಾಮನಿರ್ದೇಶನ ಮಾಡಲಿದೆ. ಹೀಗಾಗಿ 24 ಸದಸ್ಯ ಬಲ ಹೊಂದಿರುವ ಕಾಂಗ್ರೆಸ್ 29 ಸದಸ್ಯ ಬಲಕ್ಕೆ ಏರಿಕೆ ಕಾಣಲಿದೆ. ಅಲ್ಲದೆ ಬಿಜೆಪಿಯಲ್ಲಿಯೇ ಇರುವ ನಾಮನಿರ್ದೇಶನ ಸದಸ್ಯ ಹೆಚ್. ವಿಶ್ವನಾಥ್ ಈಗ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದು, ಕಾಂಗ್ರೆಸ್ ಸಖ್ಯದಲ್ಲಿದ್ದಾರೆ, ಅವರು ನಾಮನಿರ್ದೇಶಿತ ಸದಸ್ಯರಾಗಿರುವ ಕಾರಣ ಪಕ್ಷಾಂತರ ನಿಷೇಧ ವ್ಯಾಪ್ತಿಗೆ ಬರುವುದಿಲ್ಲ. ಹಾಗಾಗಿ ಅವರು ಬಿಜೆಪಿಗೆ ಬೆಂಬಲ ನೀಡುವುದಿಲ್ಲ. ಇದರಿಂದಾಗಿ ಬಿಜೆಪಿ ಬಲ 34 ರಿಂದ 33ಕ್ಕೆ ಕುಸಿಯಲಿದೆ.
ಇನ್ನು, ಶಿಕ್ಷಕರ ಕ್ಷೇತ್ರದಿಂದ ಚುನಾಯಿತರಾಗಿದ್ದ ಜೆಡಿಎಸ್‌ನ ಮರಿತಿಬ್ಬೇಗೌಡ ಆ ಪಕ್ಷದಿಂದ ಅಂತರ ಕಾಯ್ದುಕೊಂಡು, ವಿಷಯಾಧಾರಿತವಾಗಿ ಕಾಂಗ್ರೆಸ್‌ಗೆ ಬೆಂಬಲಿಸಿದ ನಿದರ್ಶನಗಳಿವೆ. ಹಾಗಾಗಿ ಹೆಚ್.ವಿಶ್ವನಾಥ್ ಮತ್ತು ಮರಿತಿಬ್ಬೇಗೌಡರ ತಟಸ್ಥ ಸಹಕಾರ ಪಡೆದರೆ ಪರೋಕ್ಷವಾಗಿ 31ಕ್ಕೆ ಕಾಂಗ್ರೆಸ್ ನ ಸಂಖ್ಯೆ ಜಿಗಿಯಲಿದೆ. ಚುನಾವಣೆಯಾಗುವ ತನಕ ಇನ್ನೆರಡು ಸ್ಥಾನಗಳು ಖಾಲಿ ಉಳಿಯಲಿವೆ.
ಗೋಹತ್ಯೆ ನಿಷೇಧ ಕಾಯ್ದೆ, ಮತಾಂತರ ನಿಷೇಧ ಕಾಯ್ದೆಯಂತಹ ವಿಚಾರದಲ್ಲಿ ಪರಿಷತ್ ನಲ್ಲಿ ಜೆಡಿಎಸ್ ಸರ್ಕಾರದ ವಿರುದ್ಧವಾಗಿ ನಿಲುವು ವ್ಯಕ್ತಪಡಿಸಿತ್ತು. ಕೆಲ ವಿಚಾರಗಳಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಹಾಗು ಜೆಡಿಎಸ್ ಸಮಾನ ಅಭಿಪ್ರಾಯ ಹೊಂದಿವೆ. ಹೀಗಾಗಿ ಮೇಲ್ಮನೆಯಲ್ಲಿ ಸಭಾಪತಿ ಸ್ಥಾನವನ್ನು ಪ್ರತಿಪಕ್ಷ ಬಿಜೆಪಿಯಿಂದ ದೂರವಿರಿಸಲು ಜೆಡಿಎಸ್ ಸಹಕಾರ ಪಡೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.
ಈಗಾಗಲೇ ಈ ಕುರಿತಂತೆ ಅನೌಪಚಾರಿಕ ಮಾತುಕತೆ ನಡೆದಿದೆ. ಸಭಾಪತಿ ಸ್ಥಾನ ಕಾಂಗ್ರೆಸ್ ಗೆ ಉಪ ಸಭಾಪತಿ ಸ್ಥಾನ ಜೆಡಿಎಸ್ ಗೆ ಹಂಚಿಕೆ ಮಾಡಿಕೊಳ್ಳುವ ಪ್ರಸ್ತಾಪ ಸಿದ್ಧವಾಗಿದೆ. ಈ ಹಿಂದೆಯೂ ಮೈತ್ರಿ ಮೂಲಕ ಕಾಂಗ್ರೆಸ್ ನ ಪ್ರತಾಪ್ ಚಂದ್ರ ಶೆಟ್ಟಿ ಸಭಾಪತಿಯಾಗಿ, ಜೆಡಿಎಸ್ ನ ಧರ್ಮೇಗೌಡ ಉಪಸಭಾಪತಿಯಾಗಿದ್ದರು. ನಂತರ ಬಿಜೆಪಿಗೆ ಬಹುಮತ ಬಂದ ಹಿನ್ನೆಲೆಯಲ್ಲಿ ಸಭಾಪತಿ, ಉಪಸಭಾಪತಿ ಸ್ಥಾನ ಬಿಜೆಪಿ ಪಾಲಾಗಿತ್ತು. ಇದೀಗ ಮತ್ತೆ ಹಳೆಯ ರೀತಿಯಲ್ಲಿಯೇ ಕಾಂಗ್ರೆಸ್ ಜೆಡಿಎಸ್ ಮೈತ್ರಿಗೆ ಮುಂದಾದಲ್ಲಿ ಬಿಜೆಪಿ ಸಭಾಪತಿ ಸ್ಥಾನ ಕಳೆದುಕೊಳ್ಳುವುದು ಖಚಿತವಾಗಿದೆ.
ಹೊರಟ್ಟಿ ಬಗ್ಗೆ ಕಾಂಗ್ರೆಸ್ ನಿಲುವು ಏನು..ಸದ್ಯ ಕಾಂಗ್ರೆಸ್ -24, ಜೆಡಿಎಸ್- 8 ಸೇರಿದರೆ 32 ಆಗಲಿದ್ದು, 5 ನಾಮನಿರ್ದೇಶನ ಸದಸ್ಯ ಸ್ಥಾನ ಭರ್ತಿ ಮಾಡಿದ ನಂತರ 37 ಆಗಲಿದೆ. ಇದರಿಂದಾಗಿ ಬಿಜೆಪಿ ಸಭಾಪತಿ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಜೆಡಿಎಸ್ ನಲ್ಲಿಯೇ ಸುದೀರ್ಘ ಅವಧಿವರೆಗೂ ಇದ್ದ ಬಸವರಾಜ ಹೊರಟ್ಟಿ ಕಳೆದ ವರ್ಷ ಜೆಡಿಎಸ್ ತೊರೆದು ಬಿಜೆಪಿ ಸೇರಿ ಸಭಾಪತಿ ಸ್ಥಾನ ಅಲಂಕರಿಸಿದ್ದಾರೆ.
ಜೆಡಿಎಸ್ ಮನಸ್ಸು ಮಾಡಿದರೆ ಹೊರಟ್ಟಿ ಸೇಫ್.. ಜೆಡಿಎಸ್ ಹೊರಟ್ಟಿ ಪರ ಮೃದುಧೋರಣೆ ತಳೆದರೆ ಅವರು ಅಧಿಕಾರದಲ್ಲಿ ಮುಂದುವರೆಯಬಹುದು. ಆದರೆ ಆ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಸದನದ ಹಿರಿಯ ಸದಸ್ಯರೆಂಬ ಕಾರಣಕ್ಕೆ ಸಭಾಪತಿ ಹೊರಟ್ಟಿ ಬಗ್ಗೆ ಎಲ್ಲ ಪಕ್ಷಗಳು ಮೃದು ಧೋರಣೆ ಹೊಂದಿವೆ. ಆದರೂ ಕಳೆದ ಅಧಿವೇಶನದಿಂದ ಕಾಂಗ್ರೆಸ್ ನಾಯಕರಿಗೆ ಹೊರಟ್ಟಿ ಬಗ್ಗೆ ತೃಪ್ತಿಯಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಎಂಟು ಸದಸ್ಯ ಬಲದ ಜೆಡಿಎಸ್ ಜತೆಗೆ ವಿಷಯಾಧಾರಿತ ಬೆಂಬಲ ಪಡೆಯುವಲ್ಲಿ ಸಲವಾದರೆ, ಸಭಾಪತಿ ಹಾಗೂ ಉಪಸಭಾಪತಿ ಸ್ಥಾನಗಳಿಗೂ ಕೊಡು-ಕೊಳ್ಳುವಿಕೆ ಕುದುರಲಿದೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.
ಇದನ್ನೂ ಓದಿ.. ಗೋಹತ್ಯೆ, ಮತಾಂತರ ನಿಷೇಧ ಬಿಲ್ ಮರು ಪರಿಶೀಲನೆ, ಶಾಂತಿ ಕದಡುವ ಸಂಘಟನೆಗಳ ವಿರುದ್ಧ ಕ್ರಮ: ಪ್ರಿಯಾಂಕ್ ಖರ್ಗೆ