ಬೆಂಗಳೂರು : ರಾಜ್ಯದಲ್ಲಿನ ಬರ ಪರಿಸ್ಥಿತಿಯ ಮಾಹಿತಿ ನಿಮಗಿದೆ ಎಂದು ತೋರಿಸಲು ಪ್ರಯತ್ನಿಸುತ್ತಿದ್ದೀರೋ, ಅಥವಾ ನಿಮ್ಮದೇ ಪಕ್ಷ ಇದನ್ನು ನಿಭಾಯಿಸುವಲ್ಲಿ ಹೇಗೆ ಸೋತಿದೆ ಎಂದು ಪರೋಕ್ಷವಾಗಿ ತಿಳಿಸುತ್ತಿದ್ದೀರೋ? ಎಂದು ಬೆಳೆಹಾನಿ ಮರು ಸಮೀಕ್ಷೆಗೆ ಸಂಪುಟ ಉಪ ಸಮಿತಿ ರಚಿಸಿದ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.
ಕುಡಿಯುವ ನೀರಿನ ಸಮಸ್ಯೆ 37 ತಾಲೂಕುಗಳಲ್ಲಿ ಮಾತ್ರ ಎದುರಾಗಿದೆ ಎಂಬ ಮೂಲಕ ನಿಮ್ಮ ನಿರೀಕ್ಷೆ ಇನ್ನಷ್ಟು ಜಾಸ್ತಿಯಿತ್ತು ಎಂಬುದನ್ನೂ ತಾವು ತೋರಿಸಿಕೊಟ್ಟಿದ್ದೀರಿ. ಈಗಾಗಲೇ ಕಲುಷಿತ ನೀರಿಗೆ ಸಾಕಷ್ಟು ಜೀವಗಳು ಬಲಿಯಾಗಿವೆ. ಹೀಗಿರುವಾಗಲೂ ಎಲ್ಲ ಇಲಾಖೆಯ ಒಳಗೂ ಮೂಗು ತೂರಿಸುವ ನೀವು ಜಿಲ್ಲಾ ಸಿಇಒಗಳಿಗೆ ಸೂಚನೆ ನೀಡಿ ಕೈ ತೊಳೆದುಕೊಂಡರೆ ಸಾಕೇ? ಎಂದು ಸಾಮಾಜಿಕ ಜಾಲತಾಣದ ಮೂಲಕ ಬಿಜೆಪಿ ಪ್ರಶ್ನಿಸಿದೆ.
ರಾಜ್ಯದ ಕಾಂಗ್ರೆಸ್ ಸರ್ಕಾರ ತನ್ನ ಎಲ್ಲ ಸಚಿವಾಲಯಗಳ ಜವಾಬ್ದಾರಿಯನ್ನೂ ಪ್ರಿಯಾಂಕ್ ಖರ್ಗೆ ಅವರಿಗೆ ಗುತ್ತಿಗೆ ನೀಡಿದ್ದಾರೆ. ತಮ್ಮ ಇಲಾಖೆಗಿಂತ ಬೇರೆ ಇಲಾಖೆಯ ಕಿಟಕಿಯಲ್ಲಿ ನೋಡುವುದೇ ಅವರಿಗೆ ಹೆಚ್ಚು ಆಪ್ಯಾಯಮಾನವಾದ ಕೆಲಸ ಎಂಬುದನ್ನು ರಾಜ್ಯದ ಜನ ಈ ಹಿಂದೆಯೂ ಕಂಡಿದ್ದಾರೆ. ನಿರಂತರ ನಿರ್ಲಕ್ಷ್ಯಕ್ಕೆ ಒಳಗಾದ ಸಚಿವ ಡಾ. ಪರಮೇಶ್ವರ್ ಅವರನ್ನೂ ಈ ಸರ್ಕಾರದಲ್ಲಿಯೂ ಸುಮ್ಮನೇ ಕೂರಿಸಿ ಆ ಜವಾಬ್ದಾರಿಗಳನ್ನೂ ಪ್ರಿಯಾಂಕ್ ಖರ್ಗೆಯವರಿಗೆ ನೀಡಲಾಗಿದ್ದು ಗೊತ್ತೇ ಇದೆ. ಈಗ ಕಂದಾಯ ಇಲಾಖೆಯ ಜವಾಬ್ದಾರಿಯನ್ನೂ ಖರ್ಗೆಯವರು ಸಂಪೂರ್ಣವಾಗಿ ವಹಿಸಿಕೊಂಡಿದ್ದಾರೆ. ಅಂಕಿ-ಅಂಶ ನೀಡಿದ ಮಾತ್ರಕ್ಕೆ ಸಮಸ್ಯೆಗಳು ಪರಿಹಾರವಾಗುವುದಿಲ್ಲ. ಅದನ್ನು ಪರಿಹರಿಸುವ ಜವಾಬ್ದಾರಿಯೇ ಇಲ್ಲದವರು ಮಾತನಾಡಿಯೂ ಪ್ರಯೋಜನವಿಲ್ಲ ಎಂದು ಬಿಜೆಪಿ ವ್ಯಂಗ್ಯವಾಡಿದೆ.