ಕರ್ನಾಟಕ

karnataka

ETV Bharat / state

ಸಂಪುಟ ವಿಸ್ತರಣೆಗೆ 11+7 ಸೂತ್ರದಡಿ ಅಸ್ತು ಅಂದ್ರಾ ಹೈಕಮಾಂಡ್?! - ಯಡಿಯೂರಪ್ಪ ಸಚಿವ ಸಂಪುಟ ವಿಸ್ತರಣೆ ಲೇಟೆಸ್ಟ್​​ ನ್ಯೂಸ್​​

ರಾಜ್ಯ ಸಚಿವ ಸಂಪುಟದಲ್ಲಿ ಬಿಜೆಪಿ ಮೂಲದ ಏಳು ಮಂದಿಗೆ ಅವಕಾಶ ನೀಡಿ, ಉಳಿದಂತೆ ನಿಮಗೆ ಬೇಕಾದ ದಿನ ಸಂಪುಟ ವಿಸ್ತರಣೆ ಮಾಡಿಕೊಳ್ಳಿ ಎಂದು ಸಿಎಂಗೆ ಹೈಕಮಾಂಡ್​​ ಗ್ರೀನ್​ ಸಿಗ್ನಲ್​ ನೀಡಿದ್ದಾರೆ ಎಂದು ಹೇಳಲಾಗ್ತಿದೆ.

bjp highcommand intruction for Cabinet_expansion_
ಸಂಪುಟ ವಿಸ್ತರಣೆ

By

Published : Jan 28, 2020, 6:55 PM IST

ಬೆಂಗಳೂರು: ರಾಜ್ಯ ಸಚಿವ ಸಂಪುಟದಲ್ಲಿ ಬಿಜೆಪಿ ಮೂಲದ ಏಳು ಮಂದಿಗೆ ಅವಕಾಶ ನೀಡಿ, ಉಳಿದಂತೆ ನಿಮಗೆ ಬೇಕಾದ ದಿನ ಸಂಪುಟ ವಿಸ್ತರಣೆ ಮಾಡಿಕೊಳ್ಳಿ ಎಂದು ಪಕ್ಷದ ವರಿಷ್ಠರು ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ತಿಳಿದುಬಂದಿದೆ.

ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಅಡ್ಡಗಾಲು ಎಂಬ ಮಾತು ಪದೇ ಪದೇ ಕೇಳಿ ಬರಲು ಅವಕಾಶ ನೀಡಬೇಡಿ. ಸರ್ಕಾರ ರಚನೆಯಾಗಲು ಕಾರಣರಾದವರಿಗೂ ನ್ಯಾಯ ಕೊಡಿ, ರಾಜ್ಯದಲ್ಲಿ ಪಕ್ಷ ಬೆಳೆಯಲು ಕಾರಣರಾದ ಸ್ವಪಕ್ಷೀಯರಿಗೂ ನ್ಯಾಯ ಒದಗಿಸಿ ಎಂದು ವರಿಷ್ಠರು ಹೇಳಿದ್ದಾರೆ ಎನ್ನಲಾಗ್ತಿದೆ. ಇದರ ಪರಿಣಾಮವಾಗಿ ಯಡಿಯೂರಪ್ಪ ಅವರು ಸಚಿವ ಸಂಪುಟವನ್ನು ಯಾವತ್ತು ವಿಸ್ತರಣೆ ಮಾಡಬೇಕೆಂಬ ವಿಷಯದಲ್ಲಿ ಗೊಂದಲಕ್ಕೆ ಸಿಲುಕಿದ್ದು, ಬೀಸುವ ದೊಣ್ಣೆಯಿಂದ ಪಾರಾದರೆ ಸಾಕು ಎಂದು ಹಪಹಪಿಸತೊಡಗಿದ್ದಾರೆ.

ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಂದ ವಲಸೆ ಬಂದ 17 ಮಂದಿಯಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗುವಂತಾಯಿತು. ಈ ಪೈಕಿ ಕೇವಲ ಹನ್ನೊಂದು ಮಂದಿಗೆ ಮಾತ್ರ ಅವಕಾಶ ನೀಡಿದರೆ ಉಳಿದವರ ವಿಷಯದಲ್ಲಿ ನ್ಯಾಯ ನೀಡಿದಂತಾಗುವುದಿಲ್ಲ ಎಂದು ಸಿಎಂ ಯಡಿಯೂರಪ್ಪ ಹಿಂದಿನಿಂದ ವಾದಿಸುತ್ತಾ ಬಂದಿದ್ದರು. 17 ಮಂದಿಯ ಪೈಕಿ ಕನಿಷ್ಠ 13 ಮಂದಿಗಾದರೂ ಸಚಿವ ಸ್ಥಾನ ನೀಡಬೇಕು. ಇಲ್ಲವೇ ವಚನದ್ರೋಹಿ ಎಂಬ ಹಣೆಪಟ್ಟಿಯನ್ನು ನಾನು ಹೊರಬೇಕು. ಹೀಗಾಗಿ 13+ 5 ಸೂತ್ರದಡಿ ಸಂಪುಟ ವಿಸ್ತರಿಸಲು ಅವಕಾಶ ಕೊಡಿ ಎಂದು ಯಡಿಯೂರಪ್ಪ ವರಿಷ್ಠರಿಗೆ ಮನವಿ ಮಾಡಿಕೊಂಡಿದ್ದರು. ಆದರೆ ವರಿಷ್ಠರು ಮಾತ್ರ, ಸರ್ಕಾರ ರಚಿಸಲು ಬೇರೆ ಪಕ್ಷಗಳಿಂದ ಬಂದ ಶಾಸಕರು ಹೇಗೆ ಕಾರಣವೋ? ಹಾಗೆಯೇ ಸ್ವ ಪಕ್ಷದವರೂ ಕಾರಣ. ಹೀಗಾಗಿ 11+ 7 ಸೂತ್ರದ ಆಧಾರದ ಮೇಲೆ ಸಂಪುಟ ವಿಸ್ತರಿಸಿ ಎಂದು ಸಲಹೆ ನೀಡಿದ್ದಾರೆ ಎಂದು ಎಂದು ಹೇಳಲಾಗುತ್ತಿದೆ.

ಮೂಲಗಳ ಪ್ರಕಾರ, ಸಚಿವ ಸ್ಥಾನಕ್ಕೆ ಅರ್ಹರಾದವರ ದಂಡೇ ಪಕ್ಷದಲ್ಲಿದೆ. ಆದರೂ ಬಹುತೇಕರು ಪಕ್ಷದ ನಡೆಗೆ ಅಡ್ಡವಾಗಬಾರದು ಎಂಬ ಕಾರಣಕ್ಕಾಗಿ ಬಂಡಾಯದಂತಹ ಕಾರ್ಯಕ್ಕೆ ಮುಂದಾಗುತ್ತಿಲ್ಲ. ಹಾಗಂತ ನಾವು ಸುಮ್ಮನಿರಲೂ ಸಾಧ್ಯವಾಗದು ಎಂಬುದು ವರಿಷ್ಠರ ಮಾತು. ಬೇರೆ ಪಕ್ಷಗಳಿಂದ ಬಂದ ಎಲ್ಲರಿಗೂ ಸಚಿವ ಸ್ಥಾನ ಕೊಡುವ ಅಗತ್ಯವೇನಿಲ್ಲ. ನೀವೇ ಅವರ ಮನವೊಲಿಸಿ. ಯಾವುದಾದರೂ ನಿಗಮ ಮಂಡಳಿಗಳ ಅಧ್ಯಕ್ಷರಾಗುವಂತೆ ಹೇಳಿ. ಹಾಗೆ ಮಾಡದಿದ್ದರೆ ಸರ್ಕಾರದಲ್ಲಿ ಬಿಜೆಪಿಯವರಿಗಿಂತ ಹೊರಗಿನಿಂದ ಬಂದವರಿಗೇ ಹೆಚ್ಚು ಆದ್ಯತೆ ಎಂಬ ಅಸಮಾಧಾನ ಶುರುವಾಗುತ್ತದೆ. ಈ ಅಸಮಾಧಾನ ಬಹುಕಾಲ ಮುಂದುವರಿದರೆ ಪಕ್ಷಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದನ್ನು ಮರೆಯಬೇಡಿ. ಪಕ್ಷದೊಳಗೆ ಅಸಮಾಧಾನ ಭುಗಿಲೆದ್ದರೆ ಹೊರಗಿನಿಂದ ಎಷ್ಟು ಜನರನ್ನು ಕರೆದುಕೊಂಡು ಬಂದರೂ ಪ್ರಯೋಜನವೇನೂ ಇಲ್ಲ. ಹೀಗಾಗಿ 11+7 ಸೂತ್ರದ ಆಧಾರದ ಮೇಲೆ ಸಚಿವ ಸಂಪುಟ ರಚಿಸಿ ಎಂದು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರೇ ಸೂಚನೆ ನೀಡಿದ್ದಾರೆ ಎಂದು ಎನ್ನಲಾಗ್ತಿದೆ.

ಇದರ ಪರಿಣಾಮವಾಗಿ ಮುಂದೇನು? ಎಂದು ಯಡಿಯೂರಪ್ಪ ಅವರು ಯೋಚಿಸುವಂತಾಗಿದೆ. ಈವರೆಗೆ ಸಚಿವ ಸಂಪುಟ ರಚನೆಗೆ ಹೈಕಮಾಂಡ್ ಅಡ್ಡಗಾಲು ಹಾಕುತ್ತಿದೆ ಎಂದು ಸಚಿವಾಕಾಂಕ್ಷಿಗಳನ್ನು ಸಮಾಧಾನ ಮಾಡಲಾದರೂ ಸಾಧ್ಯವಿತ್ತು. ಆದರೆ ಈಗ ಅದೂ ಸಾಧ್ಯವಿಲ್ಲದಂತಾಗಿದ್ದು, ತಾವು ಹೇಳಿದ ಸೂತ್ರದನುಸಾರ ನಿಮಗೆ ಇಚ್ಛೆ ಬಂದ ದಿನ ಸಂಪುಟ ವಿಸ್ತರಿಸಿ ಎಂದು ವರಿಷ್ಠರು ಸಂಪುಟ ವಿಸ್ತರಣೆಯ ಚೆಂಡನ್ನು ಯಡಿಯೂರಪ್ಪ ಅವರ ಅಂಗಳಕ್ಕೆ ಹಾಕಿ ಬಿಟ್ಟಿದ್ದಾರೆ.

For All Latest Updates

TAGGED:

ABOUT THE AUTHOR

...view details