ಕರ್ನಾಟಕ

karnataka

ETV Bharat / state

ಸಚಿವಾಕಾಂಕ್ಷಿಗಳ ಪಟ್ಟಿ ಬಿಡಿ, ಕ್ಷೇತ್ರವಾರು ಮಾಹಿತಿ ನೀಡಿ: ರಾಜ್ಯ ಬಿಜೆಪಿಗೆ ಹೈಕಮಾಂಡ್ ಮಹತ್ವದ ಸಂದೇಶ - ಕರ್ನಾಟಕ ಚುನಾವಣೆ

ಗುಜರಾತ್ ಚುನಾವಣೆ ಮುಗಿಯುತ್ತಿದ್ದಂತೆ ರಾಜ್ಯದ ಕಡೆ ಬಿಜೆಪಿ ವರಿಷ್ಠರು ಚಿತ್ತ ಹರಿಸಲಿದ್ದಾರೆ. ಹಾಗಾಗಿಯೇ ಗುಜರಾತ್ ಚುನಾವಣೆ ಮುಗಿಯುವ ಮೊದಲೇ ಮೂರು ಹಂತದ ಕ್ಷೇತ್ರಗಳ ಪಟ್ಟಿಯನ್ನು ನೀಡುವಂತೆ ರಾಜ್ಯ ಘಟಕಕ್ಕೆ ಸೂಚನೆ ನೀಡಿದ್ದಾರೆ.

bjp-high-command-message-to-state-unit-on-karnataka-election
ಸಚಿವಾಕಾಂಕ್ಷಿಗಳ ಪಟ್ಟಿ ಬಿಡಿ, ಕ್ಷೇತ್ರವಾರು ಮಾಹಿತಿ ನೀಡಿ: ರಾಜ್ಯ ಬಿಜೆಪಿಗೆ ಹೈಕಮಾಂಡ್ ಮಹತ್ವದ ಸಂದೇಶ

By

Published : Nov 23, 2022, 7:04 PM IST

ಬೆಂಗಳೂರು: ಮುಂಬರಲಿರುವ ರಾಜ್ಯ ವಿಧಾನಸಭಾ ಚುನಾವಣಾ ಉಸ್ತವಾರಿಯನ್ನು ಖುದ್ದು ಬಿಜೆಪಿ ಹೈಕಮಾಂಡ್ ವಹಿಸಿಕೊಳ್ಳಲು ಮುಂದಾಗಿದೆ. ಸಚಿವಾಕಾಂಕ್ಷಿಗಳ ಪಟ್ಟಿಯನ್ನು ಬಿಡಿ, ಮೂರು ಹಂತದ ಕ್ಷೇತ್ರಗಳ ಪಟ್ಟಿಯನ್ನು ತನ್ನಿ ಎಂದು ಪಕ್ಷದ ರಾಜ್ಯ ಘಟಕಕ್ಕೆ ವರಿಷ್ಠರು ಸೂಚನೆ ನೀಡಿದ್ದಾರೆ. ಹೈಕಮಾಂಡ್ ಹುಕುಂ ಬರುತ್ತಿದ್ದಂತೆ ಅಂಕಿ - ಅಂಶಗಳ ತಡಕಾಡಲು ಬಿಜೆಪಿ ನಾಯಕರು ಮುಂದಾಗಿದ್ದಾರೆ.

ಬಹುತೇಕವಾಗಿ ರಾಜ್ಯದಲ್ಲಿ ಹಿರಿಯ ನಾಯಕ ಬಿಎಸ್​​ ಯಡಿಯೂರಪ್ಪ ಪ್ರವರ್ಧಮಾನಕ್ಕೆ ಬಂದ ನಂತರ ಕಳೆದ ಚುನಾವಣೆವರೆಗೂ ಹೈಕಮಾಂಡ್ ನೇರವಾಗಿ ರಾಜ್ಯದ ಚುನಾವಣೆ ಜವಾಬ್ದಾರಿ ವಹಿಸಿಕೊಂಡಿರಲಿಲ್ಲ. ಯಡಿಯೂರಪ್ಪ ನಾಯಕತ್ವದಲ್ಲೇ ಚುನಾವಣೆ ನಡೆಯುತ್ತಾ ಬಂದಿದೆ. ಇದೇ ಮೊದಲ ಬಾರಿಗೆ ಯಡಿಯೂರಪ್ಪ ನಾಯಕತ್ವದ ಬದಲು ಹೈಕಮಾಂಡ್ ಉಸ್ತುವಾರಿಯಲ್ಲಿ ಪಕ್ಷದ ರಾಜ್ಯ ಘಟಕ ಚುನಾವಣೆ ಎದುರಿಸಲಿದೆ. ಈ ಬಗ್ಗೆ ಈಗಾಗಲೇ ಹೈಕಮಾಂಡ್ ನಿಂದ ರಾಜ್ಯದ ಘಟಕಕ್ಕೆ ಸಂದೇಶವೂ ರವಾನೆಯಾಗಿದೆ.

ಮೂರು ಹಂತದಲ್ಲಿ ಕ್ಷೇತ್ರಗಳ ಪಟ್ಟಿ:ರಾಜ್ಯದಲ್ಲಿಈವರೆಗೆ ಒಮ್ಮೆಯೂ ಬಹುಮತಕ್ಕೆ ಬೇಕಾದ ಅಂಕಿಯನ್ನು ಬಿಜೆಪಿ ತಲುಪಿಲ್ಲ. ಉಪ ಚುನಾವಣೆ ಮೂಲಕವೇ ಮ್ಯಾಜಿಕ್ ನಂಬರ್ ತಲುಪಿ ಸರ್ಕಾರವನ್ನು ಭದ್ರಪಡಿಸಿಕೊಂಡಿದೆ. ಹಾಗಾಗಿ ಈ ಬಾರಿ ಮ್ಯಾಜಿಕ್ ನಂಬರ್ ರೀಚ್ ಮಾಡಲೇಬೇಕು ಎನ್ನುವ ಹಠ ತೊಟ್ಟಿರುವ ಹೈಕಮಾಂಡ್​, ಮೂರು ಹಂತದಲ್ಲಿ ಕ್ಷೇತ್ರಗಳ ಪಟ್ಟಿ ಮಾಡಿ ಕಳುಹಿಸಿಕೊಡುವಂತೆ ರಾಜ್ಯ ಘಟಕಕ್ಕೆ ಸಂದೇಶ ರವಾನಿಸಿದೆ.

ಇದನ್ನೂ ಓದಿ:ಎಲೆಕ್ಷನ್​​​ಗೆ ಮೋದಿ ಫ್ಯಾಕ್ಟರ್ ಟ್ರಂಪ್ ಕಾರ್ಡ್: ಟಾರ್ಗೆಟ್ ಮೆಜಾರಿಟಿ ಟಾಸ್ಕ್ ಫಿಕ್ಸ್ ಮಾಡಿಕೊಂಡ ಬಿಜೆಪಿ

ಯಾವ ಯಾವ ಕ್ಷೇತ್ರಗಳು ಬಿಜೆಪಿಯ ಭದ್ರಕೋಟೆಯಾಗಿವೆ?. ಯಾವ ಕ್ಷೇತ್ರಗಳಲ್ಲಿ ಬಿಜೆಪಿಗೆ ಅನಾಯಾಸವಾಗಿ ಗೆಲುವು ಸಾಧ್ಯವಾಗಲಿದೆ ಮತ್ತು ಯಾವ ಯಾವ ಕ್ಷೇತ್ರಗಳಲ್ಲಿ ಬಿಜೆಪಿಗೆ ತೀವ್ರ ಪೈಪೋಟಿ ಎದುರಾಗಲಿದೆ ಹಾಗೂ ಅಲ್ಪ ಮತಗಳ ಅಂತರದ ಸೋಲಾಗಿದೆ ಎನ್ನುವ ಪಟ್ಟಿಯನ್ನು ಹೈಕಮಾಂಡ್​ ಕೇಳಿದೆ.

ಜೊತೆಗೆ ಈವರೆಗೂ ಗೆಲ್ಲಲು ಸಾಧ್ಯವಾಗದ ಕ್ಷೇತ್ರಗಳು ಮತ್ತು ವಿವಿಧ ಕಾರಣಗಳಿಂದಾಗಿ ಈ ಬಾರಿ ಸೋಲುವ ಸಾಧ್ಯತೆ ಇದೆ ಎನ್ನುವ ಕ್ಷೇತ್ರಗಳ ಪಟ್ಟಿಯನ್ನು ಕಳುಹಿಸಿಕೊಡುವಂತೆ ಬಿಜೆಪಿ ಹೈಕಮಾಂಡ್​ ಸೂಚನೆ ನೀಡಿದೆ.

ಗುಜರಾತ್ ಚುನಾವಣೆ ನಂತರ ಕರ್ನಾಟಕದತ್ತ ಚಿತ್ತ:ಈಗಾಗಲೇ ಅನೌಪಚಾರಿಕವಾಗಿ ಆಂತರಿಕ ಸಮೀಕ್ಷೆಯನ್ನು ಬಿಜೆಪಿ ಹೈಕಮಾಂಡ್ ನಡೆಸಿತ್ತು. ಆದರೆ, ಈ ಸಮೀಕ್ಷಾ ವರದಿಯನ್ನು ಅಷ್ಟೇನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಚುನಾವಣೆಗೆ ಇನ್ನು ಸಾಕಷ್ಟು ಸಮಯವಿದೆ ಎನ್ನುವ ಕಾರಣಕ್ಕೆ ಅಭ್ಯರ್ಥಿಗಳು ತಿದ್ದಿಕೊಳ್ಳಲು ಸಾಕಷ್ಟು ಸಮಯ ನೀಡಿತ್ತು. ಆದರೆ, ಇದೀಗ ಚುನಾವಣೆ ಸಮೀಪಿಸುತ್ತಿದೆ. ಗುಜರಾತ್ ಚುನಾವಣೆ ಮುಗಿಯುತ್ತಿದ್ದಂತೆ ರಾಜ್ಯದ ಕಡೆ ವರಿಷ್ಠರು ಚಿತ್ತ ಹರಿಸಲಿದ್ದಾರೆ. ಹಾಗಾಗಿಯೇ ಗುಜರಾತ್ ಚುನಾವಣೆ ಮುಗಿಯುವ ಮೊದಲೇ ಕ್ಷೇತ್ರಗಳ ಪಟ್ಟಿ ನೀಡುವಂತೆ ರಾಜ್ಯ ಘಟಕಕ್ಕೆ ಸೂಚನೆ ನೀಡಿದ್ದಾರೆ.

ರಾಜ್ಯಕ್ಕೆ ಅಮಿತ್ ಶಾ ಹೆಚ್ಚಿನ ಸಮಯ:ಪಕ್ಷದ ರಾಜ್ಯ ಘಟಕ ನೀಡುವ ಕ್ಷೇತ್ರವಾರು ಪಟ್ಟಿಯ ಜೊತೆಗೆ ಬಿಜೆಪಿ ಹೈಕಮಾಂಡ್ ಪ್ರತ್ಯೇಕವಾಗಿ ಖಾಸಗಿ ಸಂಸ್ಥೆಯಿಂದ ಸಮೀಕ್ಷೆ ನಡೆಸಲಿದೆ. ಪಕ್ಷದ ಪಟ್ಟಿ ಮತ್ತು ಸಮೀಕ್ಷಾ ವರದಿ ನೋಡಿಕೊಂಡು ವರಿಷ್ಠರು ಚುನಾವಣಾ ರಣತಂತ್ರ ಹೆಣೆಯಲಿದ್ದಾರೆ.

ಗುಜರಾತ್ ಚುನಾವಣೆ ಮುಗಿಯುತ್ತಿದ್ದಂತೆ ಬಿಜೆಪಿ ಮಾಸ್ಟರ್ ಮೈಂಡ್ ಆಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಹೆಚ್ಚಿನ ಸಮಯ ನೀಡಲು ನಿರ್ಧರಿಸಿದ್ದಾರೆ. ಖುದ್ದು ಚುನಾವಣಾ ಉಸ್ತವಾರಿ ತೆಗೆದುಕೊಳ್ಳಲಿದ್ದಾರೆ. ಅದಕ್ಕಾಗಿಯೇ ನಗರದ ಹೊರವಲಯದಲ್ಲಿ ಹೈಕಮಾಂಡ್​ನ ಎಲೆಕ್ಷನ್ ವಾರ್ ರೂಂ ಆರಂಭಕ್ಕೆ ಸಿದ್ದತೆ ನಡೆಸಲಾಗಿದೆ. ರಾಜ್ಯ ಚುನಾವಣೆಗೆ ಸಂಬಂಧಪಟ್ಟ ಎಲ್ಲ ವಿಷಯಗಳನ್ನು ವಾರ್ ರೂಂ ಮೂಲಕ ಅಮಿತ್ ಶಾ ದೆಹಲಿಯಲ್ಲಿ ಕುಳಿತೇ ಪಡೆದುಕೊಳ್ಳಲಿದ್ದಾರೆ.

ಚುನಾವಣಾ ಪ್ರಚಾರ ತಂತ್ರದ ಬಗ್ಗೆ ನೀಲಿನಕ್ಷೆ:ಅನಾಯಾಸವಾಗಿ ಗೆಲ್ಲುವ ಸಾಧ್ಯತೆ ಇರುವ ಕ್ಷೇತ್ರಗಳಲ್ಲಿ ಪ್ರಚಾರ ಯಾವ ರೀತಿ ಇರಬೇಕು. ಯಾವ ತಾರಾ ಪ್ರಚಾರಕರನ್ನು ನಿಯೋಜಿಸಬೇಕು. ತೀವ್ರ ಪೈಪೋಟಿ ಇರುವ ಕಡೆ ಯಾವ ರೀತಿ ಚುನಾವಣಾ ಪ್ರಚಾರ ನಡೆಸಬೇಕು. ಅಲ್ಲಿ ಯಾವ ವಿಷಯಗಳನ್ನು ಪ್ರಸ್ತಾಪಿಸಬೇಕು. ಯಾವ ಯಾವ ತಾರಾ ಪ್ರಚಾರಕರನ್ನು ಬಳಿಸಿಕೊಳ್ಳಬೇಕು ಮತ್ತು ಈವರೆಗೂ ಗೆಲ್ಲಲಾಗದ ಕ್ಷೇತ್ರ ಮತ್ತು ಈ ಬಾರಿ ಕ್ಷೇತ್ರ ಕಳೆದುಕೊಳ್ಳುವ ಸಾಧ್ಯತೆ ಇರುವ ಕಡೆ ಪ್ರಚಾರ ತಂತ್ರ ಯಾವ ರೀತಿ ಇರಬೇಕು ಎನ್ನುವ ಕುರಿತು ವರಿಷ್ಠರು ನೀಲಿನಕ್ಷೆ ತಯಾರಿಸಲಿದ್ದಾರೆ.

ಪ್ರಧಾನಿ ಮೋದಿ, ಯೋಗಿ ಆದಿತ್ಯನಾಥ್ ಯಾವ ಕಡೆ ಪ್ರಚಾರಕ್ಕೆ ಬರಬೇಕು. ಕೇಂದ್ರದ ಸಚಿವರು ಎಲ್ಲಿ ಪ್ರಚಾರಕ್ಕೆ ಬರಬೇಕು ಎನ್ನುವ ಕುರಿತು ಅಮಿತ್ ಶಾ ಮಾಸ್ಟರ್ ಪ್ಲಾನ್ ರೂಪಿಸಲಿದ್ದಾರೆ. ಅದರಂತೆ ಈ ಬಾರಿಯ ಚುನಾವಣಾ ಪ್ರಚಾರ ಕಾರ್ಯ ನಡೆಯಲಿದೆ ಎನ್ನಲಾಗಿದೆ. ಜೊತೆಗೆ ರಾಜ್ಯ ಬಿಜೆಪಿಗೆ ಮಾಜಿ ಸಿಎಂ ಯಡಿಯೂರಪ್ಪ ಭೀಷ್ಮರಿದ್ದಂತೆ. ಹಾಗಾಗಿ ಅವರನ್ನು ಕಡೆಗಣಿಸದೆಯೇ ಪ್ರಚಾರದ ಮುಖ್ಯ ಭೂಮಿಕೆಯಲ್ಲಿ ಬಳಸಿಕೊಂಡೇ ಚುನಾವಣೆ ಎದುರಿಸಲು ಅಮಿತ್ ಶಾ ಮುಂದಾಗಿದ್ದಾರೆ.

ಇದನ್ನೂ ಓದಿ:ಬಿಜೆಪಿ - ಕಾಂಗ್ರೆಸ್ ಅತೃಪ್ತ ನಾಯಕರಿಗೆ ಜೆಡಿಎಸ್ ಆಪರೇಷನ್: ಜಾರಕಿಹೊಳಿ ಬ್ರದರ್ಸ್, ಮುಸ್ಲಿಂ ಲೀಡರ್ಸ್​ ಮೇಲೆ ಕಣ್ಣು

ABOUT THE AUTHOR

...view details