ಬಿಎಸ್ವೈ ನೇತೃತ್ವದ ಸರ್ಕಾರ ಸುಭದ್ರವಾಗಿರುತ್ತದೆ : ಬಿ.ಜೆ.ಪುಟ್ಟಸ್ವಾಮಿ ವಿಶ್ವಾಸ - B.J. Puttaswamy Latest News
ಬಿಜೆಪಿ ಹೈಕಮಾಂಡ್ ಸದೃಢವಾಗಿದೆ. ರಾಜ್ಯದಲ್ಲಿ ಸರ್ವಕಾಲಿಕ ನಾಯಕರು, ಹೋರಾಟಗಾರರಾದ ಬಿ.ಎಸ್.ಯಡಿಯೂರಪ್ಪ ಅವರ ಬಗ್ಗೆ ಅಸಮಾಧಾನಕ್ಕೆ ಅವಕಾಶ ಇಲ್ಲ ಎಂದು ಬಿಜೆಪಿ ಹಿರಿಯ ಮುಖಂಡ ಹಾಗೂ ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ತಿಳಿಸಿದರು.
ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ
ಬೆಂಗಳೂರು: ಬೇರೆ ಪಕ್ಷದಲ್ಲಿದ್ದಾಗ ಯತ್ನಾಳ್ ಅವರನ್ನು ಬಿಜೆಪಿಗೆ ಕರೆ ತಂದು ಸೀಟು ಕೊಟ್ಟು, ಶಾಸಕರನ್ನಾಗಿ ಮಾಡುವಾಗ ಅವರಿಗೆ ಯಡಿಯೂರಪ್ಪ ನಾಯಕರಾಗಿದ್ದರಾ ಎಂದು ಬಿಜೆಪಿ ಹಿರಿಯ ಮುಖಂಡ ಹಾಗೂ ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಪ್ರಶ್ನಿಸಿದ್ದಾರೆ.
ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಈಗ ಯತ್ನಾಳ್ ಸಿಎಂ ಯಡಿಯೂರಪ್ಪ ತಮ್ಮ ನಾಯಕರಲ್ಲ ಎಂಬ ಹೇಳಿಕೆ ಕೊಡುವುದು ಸರಿಯಲ್ಲ. ಈ ಬಗ್ಗೆ ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಯಡಿಯೂರಪ್ಪ ಅವರ ಬೆಂಬಲ ಇಲ್ಲದೆ ಅವರಿಗೆ ಟಿಕೆಟ್ ಸಿಗುತ್ತಿತ್ತಾ ಎಂದು ಟಾಂಗ್ ನೀಡಿದರು.
ಯತ್ನಾಳ್ ಯಾವುದೋ ಅಸಮಾಧಾನದಲ್ಲಿ ಹೀಗೆ ಹೇಳಿರಬಹುದು. ಅದನ್ನು ಅವರು ಆತ್ಮಾವಲೋಕನ ಮಾಡಿ ಸರಿ ಪಡಿಸುತ್ತಾರೆ. ಬಿಜೆಪಿ ಹೈಕಮಾಂಡ್ ಸದೃಢವಾಗಿದೆ. ರಾಜ್ಯದಲ್ಲಿ ಸರ್ವಕಾಲಿಕ ನಾಯಕರು, ಹೋರಾಟಗಾರರಾದ ಬಿ.ಎಸ್.ಯಡಿಯೂರಪ್ಪ ಅವರ ಬಗ್ಗೆ ಅಸಮಾಧಾನಕ್ಕೆ ಅವಕಾಶ ಇಲ್ಲ. ಅವರನ್ನು ಯಾರು ಬೇಕಾದರೂ ಯಾವ ಗಳಿಗೆಯಲ್ಲೂ ಭೇಟಿಯಾಗಬಹುದು ಎಂದು ತಿಳಿಸಿದರು.
ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ ಅಣ್ಣ-ತಮ್ಮಂದಿರಲ್ಲೂ ಅಸಮಾಧಾನ ಇರುತ್ತದೆ. ಪಕ್ಷ ಅಂದಾಗ ಅವರದ್ದೇ ಆದ ವೈಯಕ್ತಿಕ ವಿಚಾರವಾಗಿ ಅತೃಪ್ತಿ ಇರುತ್ತದೆ. ಯಾವುದೇ ಅಸಮಾಧಾನ ಬಿಜೆಪಿಯಲ್ಲಿ ಇಲ್ಲ. ದೇಶಾದ್ಯಂತ ಬಿಜೆಪಿ ಸರ್ಕಾರದ ಪೈಕಿ ಯಡಿಯೂರಪ್ಪ ದಕ್ಷ ಸಿಎಂ ಎಂದು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರೇ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಹೈಕಮಾಂಡ್ ಅವರ ಆಡಳಿತಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದೆ. ಹಾಗಾಗಿ ಸಿಎಂ ಪಟ್ಟದಿಂದ ಯಡಿಯೂರಪ್ಪ ಅವರನ್ನು ಕೆಳಗಿಳಿಸುವ ಪ್ರಶ್ನೆಯೇ ಇಲ್ಲ. ಬಿಎಸ್ವೈ ನೇತೃತ್ವದ ಸರ್ಕಾರ ಸುಭದ್ರವಾಗಿರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.