ಕರ್ನಾಟಕ

karnataka

ETV Bharat / state

ಮೀಸಲಾತಿ ಹೋರಾಟ: ಯತ್ನಾಳ್ ಅಬ್ಬರಕ್ಕೆ ಕಡಿವಾಣ ಹಾಕಲು ಬಿಜೆಪಿ ಹೈಕಮಾಂಡ್ ಎಂಟ್ರಿ

ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ವಿಷಯದಲ್ಲಿ ಸ್ವಪಕ್ಷೀಯರ ಮೇಲೆ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ನಡೆಸುತ್ತಿರುವ ವಾಕ್ಸಮರದಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುತ್ತಿರುವುದನ್ನು ಅರಿತ ಹೈಕಮಾಂಡ್ ಇದೀಗ ಮಧ್ಯಪ್ರವೇಶಿಸಿದೆ.

basangouda patil yatnal
ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್

By

Published : Jan 19, 2023, 1:23 PM IST

Updated : Jan 19, 2023, 5:16 PM IST

ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್

ಬೆಂಗಳೂರು: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಪಟ್ಟು ಹಿಡಿದು ಆಡಳಿತ ಪಕ್ಷದ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ನಡೆಸುತ್ತಿರುವ ಹೋರಾಟ ರಾಜ್ಯ ಬಿಜೆಪಿ ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸಿದೆ. ಆಡಳಿತಾರೂಢ ಸರ್ಕಾರದ ವಿರುದ್ಧವೇ ಹಮ್ಮಿಕೊಂಡಿರುವ ಪ್ರತಿಭಟನೆಗಳಿಂದ ಸರ್ಕಾರದ ಮತ್ತು ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುತ್ತಿರುವುದನ್ನು ಮನಗಂಡ ಬಿಜೆಪಿ ಹೈಕಮಾಂಡ್, ಮೀಸಲಾತಿ ವಿವಾದಕ್ಕೆ ಅಂತ್ಯ ಹಾಡಿ ಯತ್ನಾಳ್ ಅಬ್ಬರಕ್ಕೆ ಕಡಿವಾಣ ಹಾಕುವತ್ತ ಹೆಜ್ಜೆಯಿಟ್ಟಿದೆ.

ಪಂಚಮಸಾಲಿಗಳು ತಮಗೆ 2ಎ ಮೀಸಲಾತಿ‌ ನೀಡಲೇಬೇಕೆಂದು ರಾಜ್ಯದಲ್ಲಿ ಹಲವಾರು ತಿಂಗಳುಗಳಿಂದ ಹೋರಾಟ ನಡೆಸುತ್ತಿದ್ದಾರೆ. ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಈ ಮೀಸಲು ಹೋರಾಟದ ನಾಯಕತ್ವ ವಹಿಸಿಕೊಂಡು ಬೊಮ್ಮಾಯಿ ಸರ್ಕಾರಕ್ಕೆ ಮೇಲಿಂದ ಮೇಲೆ ಗಡುವು ನೀಡುತ್ತಿದ್ದಾರೆ. ಪಂಚಮಸಾಲಿ ಸಮುದಾಯಕ್ಕೆ ಹೊಸ ಪ್ರವರ್ಗ 2ಡಿ ನಲ್ಲಿ ಮೀಸಲಾತಿ ನೀಡುವ ಸಂಬಂಧ ಸಚಿವ ಸಂಪುಟ ಸಭೆ ತಗೆದುಕೊಂಡ ತೀರ್ಮಾನ ತಿರಸ್ಕರಿಸಿ ಮತ್ತೆ ಹೋರಾಟ ನಡೆಸುತ್ತಿರುವ ಬಗ್ಗೆ ಬಿಜೆಪಿ ಹೈಕಮಾಂಡ್ ಸಂಪೂರ್ಣ ವರದಿಯನ್ನು ಪಡೆದುಕೊಂಡಿದೆ.

ಮೀಸಲಾತಿಗಾಗಿ ಯತ್ನಾಳ್ ಸ್ವಪಕ್ಷದ ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಖಂಡರು ಮತ್ತು ಸ್ವಾಮೀಜಿಗಳೊಡಗೂಡಿ ಹೋರಾಟ ನಡೆಸುತ್ತಿರುವ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಬಿಜೆಪಿಯ ಹಿರಿಯ ಮುಖಂಡರು ಮತ್ತು ಕೈಗಾರಿಕೆ ಸಚಿವ ಮುರುಗೇಶ್​ ನಿರಾಣಿ ಬಗ್ಗೆ ಅವಹೇಳನಕಾರಿಯಾದ ಮಾತುಗಳಿಂದ ಟೀಕಿಸುತ್ತಿರುವುದರ ಬಗ್ಗೆಯೂ ದೆಹಲಿ ವರಿಷ್ಠರಿಗೆ ದೂರುಗಳು ತಲುಪಿದ್ದು, ಇದನ್ನು ಬಿಜೆಪಿ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ.

ಇದನ್ನೂ ಓದಿ:ಬಸನಗೌಡ ಪಾಟೀಲ್​ ಯತ್ನಾಳ್​ ವಿರುದ್ಧ ವಾಗ್ದಾಳಿ ನಡೆಸಿದ ಮುರುಗೇಶ್​ ನಿರಾಣಿ

ಯತ್ನಾಳ್​ ನಡೆಸುತ್ತಿರುವ ಮೀಸಲಾತಿ ಹೋರಾಟದ ಬಗ್ಗೆ ಒಂದು ಹಂತದವರೆಗೆ ಸಂಯಮ ಕಾಪಾಡಿಕೊಂಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕೈಗಾರಿಕಾ ಸಚಿವರಾದ ಮುರುಗೇಶ್​ ನಿರಾಣಿ, ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಈಗ ಮೌನ ಮುರಿದಿದ್ದಾರೆ. ಬಹಿರಂಗವಾಗಿ ಯತ್ನಾಳ್ ವಿರುದ್ಧ ಹೇಳಿಕೆಗಳನ್ನು ನೀಡುತ್ತಾ ಏಟಿಗೆ ಪ್ರತಿ ಏಟು ನೀಡತೊಡಗಿದ್ದಾರೆ. ಮೀಸಲಾತಿ ವಿವಾದದ ವಿಷಯದಲ್ಲಿ ಸ್ವಪಕ್ಷೀಯರ ನಡುವೆ ನಡೆಯುತ್ತಿರುವ ಪರ - ವಿರೋಧದ ವಾಕ್ಸಮರದಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುತ್ತಿರುವುದನ್ನು ಅರಿತ ಹೈಕಮಾಂಡ್ ಮಧ್ಯಪ್ರವೇಶಿಸಿ ಡ್ಯಾಮೇಜ್ ಕಂಟ್ರೋಲ್​ಗೆ ಯತ್ನಿಸುತ್ತಿದೆ.

ಇದನ್ನೂ ಓದಿ:ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ಗೆ ಬಿಜೆಪಿ ಹೈಕಮಾಂಡ್​​ನಿಂದ ನೋಟಿಸ್

ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪಕ್ಷದ ಮುಖಂಡರು ಪರಸ್ಪರ ಟೀಕೆ ಪ್ರತಿ ಟೀಕೆಗಳಲ್ಲಿ ತೊಡಗಿರುವುದು ಬಿಜೆಪಿ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಸೂಕ್ಷ್ಮವಾಗಿ ಈ ವಿಚಾರವನ್ನು ನಿಭಾಯಿಸಬೇಕೆನ್ನುವ ತೀರ್ಮಾನಕ್ಕೆ ಬಿಜೆಪಿ ಹೈಕಮಾಂಡ್ ಬಂದಿದೆ ಎಂದು ಹೇಳಲಾಗಿದ್ದು, ಮೀಸಲಾತಿ ವಿಚಾರವಾಗಿ ಯತ್ನಾಳ್ ಜೊತೆ ಚರ್ಚಿಸಿ ಈ ಬಗ್ಗೆ ಸಮಾಲೋಚಿಸುವ ಇಂಗಿತವನ್ನು ಕಮಲದ ಹೈಕಮಾಂಡ್ ವ್ಯಕ್ತಪಡಿಸಿದೆ ಎನ್ನಲಾಗಿದೆ. ಮೀಸಲಾತಿ ನೀಡುವ ಸಂಬಂಧ ಬಿಜೆಪಿ ಹೈಕಮಾಂಡ್ ತಮ್ಮ ಬಳಿ ಮಾತನಾಡಿ ಸಕಾರಾತ್ಮಕವಾಗಿ ಸ್ಪಂದಿಸಿದೆ ಎನ್ನುವುದನ್ನು ಯತ್ನಾಳ್ ಖಚಿತಪಡಿಸಿದ್ದಾರೆ. ಈ ಬೆಳವಣಿಗೆ ಗಮನಿಸಿದರೆ ಈಗಾಗಲೇ ಹೈಕಮಾಂಡ್ ಮೀಸಲಾತಿ ವಿವಾದ ಬಗೆಹರಿಸಲು ಎಂಟ್ರಿ ಕೊಟ್ಟಿದ್ದು, ಯತ್ನಾಳ್ ನಿಯಂತ್ರಣಕ್ಕೆ ಯತ್ನಿಸತೊಡಗಿದೆ ಎನ್ನುವುದು ಸ್ಪಷ್ಟವಾಗುತ್ತಿದೆ.

ಈ ಬೆಳವಣಿಗೆ ನಡುವೆ ದೆಹಲಿಯಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳಲು ತೆರಳಿದ್ದ ಬಸವರಾಜ ಬೊಮ್ಮಾಯಿ ಅವರು ಬಸನಗೌಡ ಪಾಟೀಲ್ ಯತ್ನಾಳ್ ಪಂಚಮಸಾಲಿಗಳಿಗೆ ಮೀಸಲಾತಿ ನೀಡುವ ಕುರಿತು ರಾಜ್ಯ ಸರ್ಕಾರದ ವಿರುದ್ಧ ನಡೆಸುತ್ತಿರುವ ಪ್ರತಿಭಟನೆ ಮತ್ತು ಸಚಿವರ ಹಾಗೂ ಹಿರಿಯ ನಾಯಕರ ವಿರುದ್ಧ ಕಟುವಾಗಿ ಟೀಕಿಸುತ್ತಿರುವುದು ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಮತ್ತು ಪಕ್ಷದ ಮೇಲೆ ಗಾಢ ಪರಿಣಾಮ ಉಂಟಾಗುತ್ತಿದೆ ಎನ್ನುವುದರ ಬಗ್ಗೆ ಗಮನ ಸೆಳೆದಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:ನನಗೆ ಯಾವುದೇ ನೋಟಿಸ್ ಬಂದಿಲ್ಲ: ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್

ಯತ್ನಾಳ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಹೈಕಮಾಂಡ್, ಶಾಸಕರಿಗೆ ಶಿಸ್ತು ಸಮಿತಿ ನೋಟಿಸ್ ನೀಡಿದೆ ಎಂದು ಹೇಳಲಾಗುತ್ತಿದೆ. ಪಕ್ಷದ ಶಿಸ್ತು ಸಮಿತಿ ಯತ್ನಾಳ್​ಗೆ ನೋಟಿಸ್ ನೀಡಿರುವುದನ್ನು ಬಿಜೆಪಿಯ ಉನ್ನತ ಮೂಲಗಳು ಖಚಿತಪಡಿಸಿವೆ. ಆದರೆ, ಬಸನಗೌಡ ಯತ್ನಾಳ್ ತಮಗೆ ಇದುವರೆಗೆ ಯಾವುದೇ ನೋಟಿಸ್ ತಲುಪಿಲ್ಲ, ಪಕ್ಷ ನೋಟಿಸ್ ನೀಡುವಂತಹ ಯಾವ ವಿರೊಧಿ ಚಟುವಟಿಕೆಯನ್ನು ತಾವು ನಡೆಸಿಲ್ಲವೆಂದು ಮಾಧ್ಯಮಗಳ ಜೊತೆ ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಈ ತಿಂಗಳ 21 ರಂದು ವಿಜಯಪುರಕ್ಕೆ ಭೇಟಿ ನೀಡುತ್ತಿದ್ದು, ಈ ಸಂದರ್ಭದಲ್ಲಿ ಯತ್ನಾಳ್ ಜೊತೆ ಮಾತನಾಡಿ ಮೀಸಲಾತಿ ಹೋರಾಟದಲ್ಲಿ ಪಕ್ಷಕ್ಕೆ ಮತ್ತು ಸರ್ಕಾರದ ಹಿತಕ್ಕೆ ಧಕ್ಕೆಯಾಗದಂತೆ ಹೆಜ್ಜೆಯಿಡುವ ಬಗ್ಗೆ ಕಿವಿಮಾತು ಹೇಳುವ ಸಾಧ್ಯತೆಗಳಿವೆ. ಪಂಚಮ ಸಾಲಿಗಳಿಗೆ ರಾಜ್ಯ ಸರ್ಕಾರವು ಮೀಸಲಾತಿ ಬಗ್ಗೆ ಅಂತಿಮ ನಿರ್ಧಾರ ತಗೆದುಕೊಳ್ಳುವ ತನಕ ಸಮಾಧಾನದಿಂದ ಇರುವಂತೆ ಹೈಕಮಾಂಡ್ ಸೂಚಿಸಿದೆ ಎಂದು ಹೇಳಲಾಗುತ್ತಿದೆ. ಇದರ ಮೇಲೆಯೂ ಪಕ್ಷದ ಚೌಕಟ್ಟನ್ನು ಮೀರಿ ಹೋದರೆ ಶಿಸ್ತು ಕ್ರಮ ಜರುಗಿಸುವ ಕುರಿತು ಕಮಲ ಪಡೆ ಮುಂದಾಗಲಿದೆ ಎನ್ನಲಾಗುತ್ತಿದೆ.

Last Updated : Jan 19, 2023, 5:16 PM IST

ABOUT THE AUTHOR

...view details