ಬೆಂಗಳೂರು: ಸರ್ಕಾರದ ಸಾಧನೆ, ಅಭಿವೃದ್ಧಿಯನ್ನು ಜನತೆಯ ಮುಂದಿಟ್ಟು ಸಂಘಟನಾತ್ಮಕವಾಗಿ ಬಿಬಿಎಂಪಿ ಚುನಾವಣೆಯನ್ನು ಎದುರಿಸಲು ಬಿಜೆಪಿ ನಿರ್ಧರಿಸಿದೆ. ಬಿಬಿಎಂಪಿಯಲ್ಲಿ 160ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಗುರಿ ಹಾಕಿಕೊಂಡಿದ್ದೇವೆ. ಈ ಸಂಬಂಧ ಚರ್ಚಿಸಲಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ್ ತಿಳಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಅವರು ಮಾತನಾಡಿದರು. ಇವತ್ತು ಬಿಜೆಪಿಯ ಬೆಂಗಳೂರು ಉತ್ತರ, ದಕ್ಷಿಣ ಮತ್ತು ಬೆಂಗಳೂರು ಕೇಂದ್ರದ ಎಲ್ಲ ಜಿಲ್ಲಾ ಪದಾಧಿಕಾರಿಗಳು, ಮಂಡಲ ಪದಾಧಿಕಾರಿಗಳು ಹಾಗೂ ಬೆಂಗಳೂರು ಮಹಾನಗರ ವ್ಯಾಪ್ತಿಯ ರಾಜ್ಯ ಪದಾಧಿಕಾರಿಗಳ ಪರಿಚಯಾತ್ಮಕ ಸಭೆ ನಡೆಸಲಾಗಿದೆ.
ನೂತನ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಜಿ.ವಿ. ಅವರ ಪರಿಚಯ ಕಾರ್ಯವನ್ನು ನೆರವೇರಿಸಲಾಯಿತು. ಬಿಬಿಎಂಪಿ ಚುನಾವಣೆ, ಸರ್ಕಾರದಿಂದ ಪ್ರಾಧಿಕಾರಕ್ಕೆ ನೇಮಕಾತಿ ವಿಚಾರವನ್ನು ಕಾರ್ಯಕರ್ತರು ಉಲ್ಲೇಖ ಮಾಡಿದ್ದಾರೆ. ಈ ಬಗ್ಗೆ ಸೂಕ್ತ ಸಂದರ್ಭದಲ್ಲಿ ತೀರ್ಮಾನವನ್ನು ಸರ್ಕಾರ ಮತ್ತು ಪಕ್ಷ ತೆಗೆದುಕೊಳ್ಳಲಿದೆ ಎಂದು ರಾಜೇಶ್ ಜಿ.ವಿ. ಅವರು ತಿಳಿಸಿದ್ದಾಗಿ ಹೇಳಿದರು.
ಇದನ್ನೂ ಓದಿ:ಬಿಬಿಎಂಪಿ ಚುನಾವಣೆಗೆ ಆಗಸ್ಟ್ 25 ರಂದು ಮತದಾರರ ಕರಡು ಪಟ್ಟಿ ಪ್ರಕಟ
ಸೆ. 8ರಂದು ನಡೆಯುವ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದ ಒಂದು ವರ್ಷದ ಮತ್ತು ಬಿಜೆಪಿಯ 3 ವರ್ಷದ ಸಾಧನೆ ಸಂಬಂಧ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ನಾಳೆ ದೊಡ್ಡಬಳ್ಳಾಪುರದಲ್ಲಿ ಕರೆದ ಸಭೆಯ ಕುರಿತು ಚರ್ಚಿಸಲಾಗಿದೆ. ಸರ್ಕಾರದ ಸಾಧನೆ, ಅಭಿವೃದ್ಧಿ ಮತ್ತು ಸಂಘಟನಾತ್ಮಕವಾಗಿ ಬಿಬಿಎಂಪಿ ಚುನಾವಣೆಯನ್ನು ಎದುರಿಸಲು ನಿರ್ಧರಿಸಲಾಗಿದೆ. ಸೆ.11ರಂದು ಪಕ್ಷದ ರಾಜ್ಯ ಕಾರ್ಯಕಾರಿಣಿಯು ಬೆಂಗಳೂರಿನ ಪ್ಯಾಲೇಸ್ ಗ್ರೌಂಡಿನಲ್ಲಿ ನಡೆಯಲಿದೆ.