ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಶಾಸಕ, ಕಾಂಗ್ರೆಸ್ ಅಭ್ಯರ್ಥಿ ಜಮೀರ್ ಅಹಮದ್ ಖಾನ್ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ನೀಡಿದೆ. ಇಂದು ಚುನಾವಣಾ ಆಯೋಗಕ್ಕೆ ದೂರು ನೀಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪೊಲೀಸರು ಯಾರೇ ನಾಯಕರು ಬಂದರೂ ರಕ್ಷಣೆ ನೀಡಬೇಕು. ಯಾವುದೇ ಪಕ್ಷ ಹೋದರೂ ನಮ್ಮ ಪೊಲೀಸರು ರಕ್ಷಣೆ ನೀಡಬೇಕು. ಆದರೆ ಚಿಕ್ಕಬಳ್ಳಾಪುರದಲ್ಲಿ ಜನರನ್ನು ಮೆಚ್ಚಿಸಲು ಪೊಲೀಸರಿಗೆ ಡಿ ಕೆ ಶಿವಕುಮಾರ್ ಅವರು ಬೆದರಿಸಿದ್ದಾರೆ ಹಾಗೂ ಧಮ್ಕಿ ಹಾಕಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ:ಕಿಡ್ನಾಪ್ ಹುನ್ನಾರ ಆರೋಪ: ಜೆಡಿಎಸ್ ಅಭ್ಯರ್ಥಿ ಮುನೇಗೌಡ ವಿರುದ್ಧ ಬಿಜೆಪಿ ಅಭ್ಯರ್ಥಿ ಎಸ್ ಆರ್ ವಿಶ್ವನಾಥ್ ದೂರು
ನಮ್ಮ ಸರ್ಕಾರ ಬಂದರೆ ನಿಮ್ಮನ್ನು ನೋಡಿಕೊಳ್ಳುತ್ತೇವೆ ಎಂದು ನಿನ್ನೆ ಡಿ ಕೆ ಶಿವಕುಮಾರ್ ಅವರು ಪೊಲೀಸರಿಗೆ ಧಮ್ಕಿ ಹಾಕಿದ್ದಾರೆ. ಈ ಹಿಂದೆ ನಮ್ಮ ರಾಜ್ಯದ ಡಿಜಿ ಮತ್ತು ಡಿಐಜಿಗೆ ಧಮ್ಕಿ ಹಾಕಿದ್ದರು. ಈಗ ಮತ್ತೊಮ್ಮೆ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ. ನಮ್ಮ ಎಲ್ಲಾ ರಾಜಕೀಯ ಪಕ್ಷದ ನಾಯಕರಿಗೆ ರಕ್ಷಣೆ ಕೊಡುವ ಕೆಲಸ ಪೊಲೀಸರು ಮಾಡುತ್ತಾರೆ.
ಇಂಥಹ ಸಂದರ್ಭದಲ್ಲಿ ಡಿ ಕೆ ಶಿವಕುಮಾರ್ ಅವರು ಪೊಲೀಸರನ್ನು ಹೆದರಿಸುವುದು ನೇರವಾಗಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮತ್ತು ಪೊಲೀಸರ ಕೆಲಸಕ್ಕೆ ಅಡ್ಡಿ ಆಗಿದೆ. ಹೀಗಾಗಿ ತಕ್ಷಣ ಡಿ ಕೆ ಶಿವಕುಮಾರ್ ಅವರ ಮೇಲೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮತ್ತು ಬೆದರಿಕೆ ದೂರು ದಾಖಲು ಮಾಡಬೇಕು ಎಂದು ಮನವಿ ಮಾಡಿರುವುದಾಗಿ ಅವರು ಹೇಳಿದರು.