ಬೆಂಗಳೂರು:ಸೇವೆಯೇ ಸಂಘಟನೆ ಅಭಿಯಾನ ಸಂಬಂಧ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಪ್ರಧಾನಿ ಮೋದಿ ಜೊತೆ ಸಿಎಂ ವಿಡಿಯೋ ಸಂವಾದ ನಡೆಯಿತು.
ಕೊರೊನಾ ಹಿನ್ನೆಲೆ ಆರಂಭಿಸಿದ 'ಸೇವೆಯೇ ಸಂಘಟನೆ' ಬಗ್ಗೆ ವಿಡಿಯೋ ಸಂವಾದದಲ್ಲಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ವರದಿ ಮಂಡನೆ ಮಾಡಿದರು.
ವರದಿಯಲ್ಲಿ ಬೂತ್ನಿಂದ ಹಿಡಿದು ಮಂಡಲ, ಜಿಲ್ಲಾ ಮಟ್ಟದವರೆಗೆ ಅಭಿಯಾನ ನಡೆಸಿದ್ದೇವೆ. ಲಾಕ್‌ಡೌನ್ ಸಂದರ್ಭದಲ್ಲಿ ಆಹಾರ ಕಿಟ್ ವಿತರಣೆ ಮಾಡಿದ್ದೇವೆ. ಬಡವರಿಗೆ 1.50 ಲಕ್ಷ ರೇಷನ್ ಕಿಟ್ ವಿತರಣೆ ಮಾಡಿದ್ದೇವೆ. 49,000 ಆಹಾರ ಪಾಕೆಟ್ ವಿತರಿಸಿದ್ದೇವೆ ಎಂದು ಮಾಹಿತಿ ನೀಡಿದ ರವಿಕುಮಾರ್, ಇನ್ನಿತರ ಕಾರ್ಯಗಳ ಬಗ್ಗೆಯೂ ತಿಳಿಸಿದರು.
ಕೇಂದ್ರ ಸರ್ಕಾರದ ಲಾಕ್‌ಡೌನ್ ಕ್ರಮಗಳ ಬಗ್ಗೆ ರಾಜ್ಯದ ಹಲವರಿಂದ ಶ್ಲಾಘನೆ ವ್ಯಕ್ತವಾಗಿದೆ. ಮಾಜಿ ಪಿಎಂ ದೇವೇಗೌಡರು, ಸ್ವಾಮೀಜಿಗಳು ಕೇಂದ್ರದ ಕ್ರಮಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ ಎಂದರು.
ಬಳಿಕ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಲಾಕ್‌ಡೌನ್ ಸಮಯದಲ್ಲಿ ಜನರ ಜತೆ ಪಕ್ಷದ ಕಾರ್ಯಕರ್ತರು ಇರಬೇಕು ಅಂತ ಪ್ರಧಾನಿ ಸೂಚನೆ ನೀಡಿದ್ದಾರೆ.
ಬಿಜೆಪಿ ಸ್ಥಾಪನೆ ದೇಶಕ್ಕಾಗಿ. ಅಧಿಕಾರಕ್ಕಾಗಿ ಅಲ್ಲ. ಮೊದಲು ದೇಶ ಆ ಮೇಲೆ ಎಲ್ಲವೂ. ರಾಜಕಾರಣ ಚುನಾವಣೆಯಲ್ಲಿ ಮಾತ್ರ ಮಾಡಬೇಕು ಅಂತ ಪ್ರಧಾನಿ ಮೋದಿ ಹೇಳಿದರು. ಜನಸಂಘ ಮತ್ತು ಬಿಜೆಪಿ ಜನರಿಗಾಗಿ ಹುಟ್ಟಿದ್ದು, ಅಧಿಕಾರಕ್ಕಾಗಿ ಅಲ್ಲ. ಇದನ್ನ ಕಾರ್ಯಕರ್ತರು ಅರ್ಥ ಮಾಡಿಕೊಳ್ಳಬೇಕು ಅಂತ ಹೇಳಿದ್ದಾರೆ ಎಂದು ವಿವರಿಸಿದರು.