ಬೆಂಗಳೂರು: ಸರ್ಕಾರಿ ಶಾಲಾ ಮಕ್ಕಳಿಗೆ ಸಮವಸ್ತ್ರ ನೀಡುವ ಕಾರ್ಯಕ್ರಮವನ್ನೂ ಸರಿಯಾಗಿ ನಿರ್ವಹಿಸದೇ, ಹೈಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಳ್ಳುವ ಮಟ್ಟಕ್ಕೆ ಇಳಿಯಿತೇ ನಿಮ್ಮ ಬಿಜೆಪಿ ಸರ್ಕಾರ? ಧಮ್ಮು-ತಾಕತ್ತು ಎಂದು ಭಾಷಣಗೈಯುವ ಸಿಎಂಗೆ ಶಾಲಾ ಮಕ್ಕಳಿಗೆ ಅಗತ್ಯ ಸಮವಸ್ತ್ರ ಪೂರೈಸುವ ಪರಿಜ್ಞಾನವಿಲ್ಲದೆ ಹೋಯಿತೇ ಎಂದು ಜೆಡಿಎಸ್ ಟೀಕಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಜೆಡಿಎಸ್, ಸರ್ಕಾರಿ ಶಾಲಾ ಮಕ್ಕಳಿಗೆ ಎರಡು ಜೊತೆ ಸಮವಸ್ತ್ರ, ಒಂದು ಜೊತೆ ಶೂ ಮತ್ತು ಎರಡು ಜೊತೆ ಸಾಕ್ಸ್ ನೀಡುವಂತೆ ಹೈಕೋರ್ಟ್ ನೀಡಿದ್ದ ಆದೇಶವನ್ನು ಸರಿಯಾಗಿ ನಿರ್ವಹಿಸಲು ಸಾಧ್ಯ ಆಗದ ಅತಿ ಕೆಟ್ಟ ಸರ್ಕಾರವಿದು. ಶಿಕ್ಷಣ ಸಚಿವರು ಬಿ.ಸಿ.ನಾಗೇಶ್ ಅವರೇ, ಸರ್ಕಾರಿ ಶಾಲಾ ಮಕ್ಕಳ ವಿಷಯವೆಂದರೆ ಅಷ್ಟು ನಿರಾಧಾರವೇ? ನ್ಯಾಯಾಂಗ ನಿಂದನೆಯ ಜತೆಗೆ ಈ ಉದಾಸೀನ ಧೋರಣೆ ಖಂಡನೀಯ ಎಂದಿದೆ.
ಉತ್ಸವ ಮಾಡಿ ಧಮ್ಮು-ತಾಕತ್ತಿನ ಪ್ರದರ್ಶನ ಮಾಡುವುದಕ್ಕೆ ಶಕ್ತಿ-ಯುಕ್ತಿ ವ್ಯಯ ಮಾಡುವುದೇ ಸಾಧನೆ ಮಾಡಿಕೊಂಡಿರುವ ಈ ರಾಜ್ಯ ಬಿಜೆಪಿಗೆ ನ್ಯಾಯಾಲಯ ತರಾಟೆಗೆ ತೆಗೆದುಕೊಂಡು, ಹಿಂದೆ ನೀಡಿದ ಆದೇಶವನ್ನು ಎರಡು ವಾರದಲ್ಲಿ ಪಾಲಿಸುವಂತೆ ಸೂಚಿಸಿದೆ. ಈ ದೆಸೆಯಲ್ಲಾದರೂ ಮಾನ-ಮರ್ಯಾದೆ ಇಲ್ಲದ ಆಡಳಿತಕ್ಕೆ ಬಿಸಿ ಮುಟ್ಟಲೇಬೇಕಿತ್ತು ಎಂದು ಕಿಡಿಕಾರಿದೆ. "ಅರಸು ರಾಕ್ಷಸ, ಮಂತ್ರಿಯೆಂಬುವ ಮೊರೆವ ಹುಲಿ, ಪರಿವಾರ ಹದ್ದಿನ ನೆರವಿ, ಬಡವರ ಬಿನ್ನಪವನಿನ್ನಾರು ಕೇಳುವರು" ಎಂದ ಕುಮಾರವ್ಯಾಸನ ಸಾಲುಗಳಂತೆ ಇಡೀ ಆಡಳಿತವು ಜನತೆಯ ರಕ್ತ ಹೀರುವ ಜಿಗಣೆಯಂತಾಗಿದೆ. ಜನತೆಯ ಆಕ್ರೋಶದ ಕೆಂಡದಲ್ಲಿ ಈ ಸಲದ ಚುನಾವಣೆಯಲ್ಲಿ ರಾಜ್ಯ ಬಿಜೆಪಿ ಸರ್ಕಾರ ಸುಟ್ಟುಹೋಗುವುದು ಖಚಿತ ಎಂದು ಎಚ್ಚರಿಸಿದೆ.