ಬೆಂಗಳೂರು:ರಾಜ್ಯದ ಮಳೆಗಾಲದ ಅಧಿವೇಶನದ ಅಂತಿಮ ದಿನವಾದ ಇಂದು ಸದನದಲ್ಲಿ ರಾಜಕೀಯ ಹೈಡ್ರಾಮಾ ನಡೆಯಲು ವೇದಿಕೆ ಸಿದ್ಧವಾಗಿದೆ. ಪ್ರತಿಪಕ್ಷ ಕಾಂಗ್ರೆಸ್ ಮತ್ತು ಆಡಳಿತ ಪಕ್ಷ ಬಿಜೆಪಿ ನಡುವೆ ಶೇ.40 ಕಮಿಷನ್ ಭ್ರಷ್ಟಾಚಾರ ಆರೋಪಗಳ ಬಗ್ಗೆ ವಾಕ್ಸಮರ ಉಂಟಾಗುವ ಸಾಧ್ಯತೆ ದಟ್ಟವಾಗಿದೆ. ಬಿಎಂಎಸ್ ಟ್ರಸ್ಟ್ ಅಕ್ರಮಗಳ ತನಿಖೆಗೆ ಜೆಡಿಎಸ್ ಧರಣಿಯು ಸಹ ಕಲಾಪವನ್ನು ಮತ್ತಷ್ಟು ಕಾವೇರಿಸಲಿದೆ.
ಆಡಳಿತ ಪಕ್ಷವನ್ನ ಇಕ್ಕಿಟ್ಟಿಗೆ ಸಿಲುಕಿಸುವ ಯತ್ನ: ಕಮಿಷನ್ ಭ್ರಷ್ಟಾಚಾರ ಪ್ರಸ್ತಾಪಿಸಿ ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕರು ಹಾಗೂ ಇದಕ್ಕೆ ಪ್ರತಿಯಾಗಿ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಗಳಲ್ಲಿನ ಅದರಲ್ಲೂ ಮಾಜಿ ಸಿಎಂ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ನಡೆದ ಹಗರಣಗಳ ಪಟ್ಟಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಚಿವರುಗಳು ಸಿದ್ಧಪಡಿಸಿಕೊಂಡಿದ್ದಾರೆ.
ಕಮಿಷನ್ ವಿಚಾರವನ್ನೇ ಪ್ರಮುಖ ಅಸ್ತ್ರವನ್ನಾಗಿಸಿಕೊಂಡು ಅದರ ರಾಜಕೀಯ ಲಾಭ ಪಡೆದುಕೊಳ್ಳಲು ಪ್ರತಿಪಕ್ಷ ಕಾಂಗ್ರೆಸ್ ತಂತ್ರಗಾರಿಕೆ ರೂಪಿಸಿದೆ. ಈ ವಿದ್ಯಮಾನವನ್ನು ಆಡಳಿತ ಪಕ್ಷ ಬಿಜೆಪಿಯು ನಿರೀಕ್ಷಿಸಿದ್ದು, ಕೌಂಟರ್ ಆಗಿ ಕಾಂಗ್ರೆಸ್ ಕಾಲದ ಆಡಳಿತದಲ್ಲಿನ ಭ್ರಷ್ಟಾಚಾರ ಪ್ರಕರಣಗಳ ಲಿಸ್ಟ್ನ್ನು ದಾಳಕ್ಕೆ ಪ್ರತಿದಾಳವನ್ನಾಗಿ ಉರುಳಿಸಲಿದೆ.
ಇದನ್ನೂ ಓದಿ:ಪೇ ಸಿಎಂ ಪೋಸ್ಟರ್ ವಿಚಾರ: ವಿಧಾನಸಭೆಯಲ್ಲಿ ಗದ್ದಲ, ಗಲಾಟೆ... ವಿಡಿಯೋ ನೋಡಿ
ಬಿಜೆಪಿ ಸರ್ಕಾರದ ವಿರುದ್ಧ ಈಗಾಗಲೇ 'ಪೇ ಸಿಎಂ' ಅಭಿಯಾನ ನಡೆಸಿ ಗಮನಸೆಳೆದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಸಾರ್ವಜನಿಕವಾಗಿ ಮುಜುಗರಕ್ಕೀಡು ಮಾಡಿರುವ ಕಾಂಗ್ರೆಸ್, ಶೇ. 40ರಷ್ಟು ಕಮಿಷನ್ ಆರೋಪಗಳನ್ನು ಎಳೆಎಳೆಯಾಗಿ ಬಿಚ್ಚಿಡಲಿದೆ. ಇದರ ಜೊತೆಗೆ ಸರ್ಕಾರಿ ನೌಕರರ ಮತ್ತು ಅಧಿಕಾರಿಗಳ ವರ್ಗಾವಣೆಗೆ ಲಂಚದ ಹಣ ನಿಗದಿಪಡಿಸಿದ ಆರೋಪದ ಬಗ್ಗೆ 'ರೇಟ್ ಕಾರ್ಡ್ ಮಂಡಿಸಿ ಬಿಜೆಪಿ ಸರ್ಕಾರವನ್ನು ಕೆಣಕಲಿದೆ.