ಕರ್ನಾಟಕ

karnataka

By

Published : Jul 25, 2021, 2:39 PM IST

ETV Bharat / state

ಬಿಎಸ್‌ವೈ ಸರ್ಕಾರಕ್ಕೆ 2 ವರ್ಷ: ಆಂತರಿಕ ಬೇಗುದಿ ಜೊತೆ ಪ್ರತಿಪಕ್ಷಗಳ ಹೋರಾಟದ ಕಿರಿಕಿರಿ

ಸಿಎಂ ಬಿ.ಎಸ್.ಯಡಿಯೂರಪ್ಪ ಸರ್ಕಾರ ನಾಳೆಗೆ ಎರಡು ವರ್ಷ ಪೂರೈಸಲಿದೆ. ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಈವರೆಗೆ​​ ನಡೆಸಿರುವ ಹೋರಾಟದ ಚಿತ್ರಣ ಇಲ್ಲಿದೆ.

ಬಿಎಸ್​ವೈ ಸರ್ಕಾರಕ್ಕೆ ಆಂತರಿಕ ಬೇಗುದಿ ಜೊತೆ ಪ್ರತಿಪಕ್ಷಗಳ ಹೋರಾಟವೂ ಕಿರಿಕಿರಿ
ಬಿಎಸ್​ವೈ ಸರ್ಕಾರಕ್ಕೆ ಆಂತರಿಕ ಬೇಗುದಿ ಜೊತೆ ಪ್ರತಿಪಕ್ಷಗಳ ಹೋರಾಟವೂ ಕಿರಿಕಿರಿ

ಬೆಂಗಳೂರು: ನಾಳೆಗೆ ಎರಡು ವರ್ಷ ಪೂರೈಸಲಿರುವ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕೆ ಆಂತರಿಕ ಬೇಗುದಿಯ ಜೊತೆಗೆ ಪ್ರತಿಪಕ್ಷಗಳ ಹೋರಾಟ ಸಹ ಸಾಕಷ್ಟು ಸವಾಲೊಡ್ಡಿದೆ.

ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್ ಅಷ್ಟೊಂದು ದೊಡ್ಡ ಮಟ್ಟಿನ ಹಾಗೂ ಸುದೀರ್ಘ ಅವಧಿಯ ಯಾವುದೇ ಹೋರಾಟ ನಡೆಸದಿದ್ದರೂ, ಆಗಾಗ ಸರ್ಕಾರದ ನಿಲುವುಗಳು, ಸಚಿವರ ಮೇಲಿನ ಭ್ರಷ್ಟಾಚಾರ ಆರೋಪ, ಸಿಎಂ ಬಿ.ಎಸ್.ಯಡಿಯೂರಪ್ಪ ಕೈಗೊಳ್ಳುವ ನಿರ್ಧಾರಗಳನ್ನು ಕಾಂಗ್ರೆಸ್ ನಿರಂತರವಾಗಿ ಪ್ರಶ್ನಿಸುತ್ತಲೇ ಬಂದಿದೆ. ಅಗತ್ಯ ಸಂದರ್ಭದಲ್ಲಿ ಹೋರಾಟವನ್ನೂ ಮಾಡಿದೆ. ಕಾಂಗ್ರೆಸ್​​ನ ಈ ಹೋರಾಟಗಳು ಸರ್ಕಾರಕ್ಕೆ ಸಾಕಷ್ಟು ಬಿಸಿ ಮುಟ್ಟಿಸುವ ಜೊತೆಗೆ ಮುಜುಗರವನ್ನೂ ತಂದಿದೆ. ಸರ್ಕಾರದ ಮಟ್ಟದಲ್ಲಿ ಒಂದಿಷ್ಟು ಬದಲಾವಣೆಗೂ ದಾರಿ ಮಾಡಿಕೊಟ್ಟಿದೆ. ಆದರೆ ಈ ಹೋರಾಟಗಳು ಸರ್ಕಾರದ ಬುಡ ಅಲುಗಾಡಿಸುವ ಅಥವಾ ಇಕ್ಕಟ್ಟಿಗೆ ಸಿಲುಕಿಸುವ ರೀತಿಯಲ್ಲಿ ನಡೆದಿಲ್ಲ.

ತೈಲ ಬೆಲೆ ಏರಿಕೆ, ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ಮತ್ತು ಕುಟುಂಬ ಸದಸ್ಯರಿಂದ ನಡೆದಿದೆಯೆನ್ನಲಾದ ಹಗರಣಗಳ ವಿರುದ್ಧ ಪ್ರತಿಭಟನೆ, ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಹೋರಾಟ, ಜನ ಧ್ವನಿ ಕಾರ್ಯಕ್ರಮ, ಭ್ರಷ್ಟಾಚಾರ ಆರೋಪ ಹೊತ್ತ ಸಚಿವರ ರಾಜೀನಾಮೆಗೆ ಆಗ್ರಹಿಸಿ ಹೋರಾಟಗಳನ್ನು ನಡೆಸಿ ಕಾಂಗ್ರೆಸ್ ಪ್ರತಿಪಕ್ಷವಾಗಿ ತನ್ನ ಜವಾಬ್ದಾರಿ ನಿರ್ವಹಿಸಿದೆ. ಆದರೆ, ರಾಜ್ಯ ಬಿಜೆಪಿ ಸರ್ಕಾರದಲ್ಲಿ ಯಾವುದೇ ರೀತಿಯ ಮಹತ್ವದ ಬದಲಾವಣೆಗೆ ಅಥವಾ ತಲೆದಂಡಕ್ಕೆ ಕಾರಣವಾಗುವ ಮಾದರಿಯ ಹೋರಾಟ ಕೈಗೊಂಡಿಲ್ಲ.

ಎರಡು ವರ್ಷ ಹೋರಾಟದ ಹಾದಿ

2019 ರ ಜುಲೈ 26 ಕ್ಕೆ ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಅಧಿಕಾರ ಸ್ವೀಕರಿಸಿ ಮುಂದಿನ ಒಂದು ತಿಂಗಳು ಏಕಾಂಗಿಯಾಗಿ ಕಾರ್ಯ ನಿರ್ವಹಿಸಿದರು. ಈ ಸಂದರ್ಭ ಭೀಕರ ಪ್ರವಾಹ ರಾಜ್ಯವನ್ನು ವಿಪರೀತ ಕಾಡಿತ್ತು. ಸಚಿವ ಸಂಪುಟ ರಚನೆಗೆ ಮುಂದಾಗದೆ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ಕೊಟ್ಟ ಬಿಎಸ್​ವೈ ನಡೆಯನ್ನು ಖಂಡಿಸಿದ್ದ ಕಾಂಗ್ರೆಸ್, ಕನಿಷ್ಠ ಸಚಿವ ಸಂಪುಟ ರಚಿಸಿದರೆ ಒಂದಿಷ್ಟು ಜಿಲ್ಲೆಗಳಿಗೆ ಉಸ್ತುವಾರಿಗಳನ್ನು ನೇಮಿಸಿದ್ದರೂ ಕಾರ್ಯ ನಿರ್ವಹಣೆ ಮಾಡಬಹುದು ಎಂದು ಟೀಕಿಸಿತ್ತು.

ಇದಾದ ಬಳಿಕ ಸಚಿವ ಸಂಪುಟ ರಚನೆಯಾಗಿ, ಕಾರ್ಯ ನಿರ್ವಹಣೆ ಆರಂಭವಾದ ಸಂದರ್ಭ ನಡೆದ ಅಧಿವೇಶನದಲ್ಲಿ ಆಪರೇಷನ್ ಕಮಲವನ್ನು ಖಂಡಿಸಿದ ಕಾಂಗ್ರೆಸ್, ಸರ್ಕಾರಕ್ಕೆ ಮುಜುಗರ ಉಂಟು ಮಾಡಿತ್ತು. ಮೂರು ಉಪ ಚುನಾವಣೆ, ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿಯೂ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆದ್ದಾಗ ಸರ್ಕಾರ ಹಣಬಲ ಹಾಗೂ ಅಧಿಕಾರ ಬಲದಿಂದ ಗೆಲುವು ಸಾಧಿಸಿದೆ ಎಂದು ದೂರಿತ್ತು.

2021 ಹೋರಾಟದ ವರ್ಷ

2021ರ ವರ್ಷವನ್ನು ಹೋರಾಟದ ವರ್ಷ ಎಂದು ಕರೆದಿರುವ ಕಾಂಗ್ರೆಸ್, ಸರ್ಕಾರದ ವಿರುದ್ಧ ವರ್ಷವಿಡೀ ನಿರಂತರ ಹೋರಾಟ ಸಂಕಲ್ಪ ಮಾಡಿದೆ. ಇದನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ ಖುದ್ದಾಗಿ ಘೋಷಣೆ ಮಾಡಿದ್ದರು. ಡಿಕೆಶಿ ಹೇಳಿಕೆ ಬೆನ್ನಲ್ಲೇ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ನಗರ ಜಿಲ್ಲಾ ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಇದಾದ ಬಳಿಕ ರಾಜ್ಯ ಸರ್ಕಾರದ ವಿರುದ್ಧ ಎಲ್ಲ ಜಿಲ್ಲೆಗಳಲ್ಲಿಯೂ ಹೋರಾಟಗಳು ನಡೆದವು. ಕೇಂದ್ರ ಸರ್ಕಾರದಿಂದ ಬರಬೇಕಾಗಿರುವ ಜಿಎಸ್​​ಟಿ ಪರಿಹಾರ ಸೇರಿದಂತೆ ಯಾವುದೇ ರೀತಿಯ ಅನುದಾನಗಳು ಲಭ್ಯವಾಗುತ್ತಿಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದರೆ ಕೇಂದ್ರದಲ್ಲಿಯೂ ಬಿಜೆಪಿ ಇರುವ ಹಿನ್ನೆಲೆ ಅಭಿವೃದ್ಧಿಯ ಸುನಾಮಿ ಆಗಲಿದೆ ಎಂದು ಬಿಎಸ್​​ವೈ ನೀಡಿದ್ದ ಹೇಳಿಕೆಯನ್ನು ಕಾಂಗ್ರೆಸ್​ ಟೀಕಿಸಿತು.

25 ಸಂಸದರನ್ನು ಬಿಜೆಪಿ ಗೆಲ್ಲಿಸಿ ಕೊಟ್ಟರೂ ಕೇಂದ್ರದಿಂದ ರಾಜ್ಯಕ್ಕೆ ಯಾವುದೇ ರೀತಿಯ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಸಂಸದರು ಬಾಯಿ ಮುಚ್ಚಿ ಕುಳಿತುಕೊಳ್ಳುವುದರಿಂದ ಪ್ರಯೋಜನವಿಲ್ಲ ಎಂದು ವಾಗ್ದಾಳಿ ನಡೆಸಿತ್ತು.

ಯಶಸ್ವಿ ಜನಧ್ವನಿ ಜಾಥಾ

ರಾಜಭವನ ಚಲೋ, ಮುತ್ತಿಗೆ ಹಾಗೂ ಬೆಲೆ ಏರಿಕೆ ನೀತಿ ಖಂಡಿಸಿ ಸೈಕಲ್ ರ್ಯಾಲಿ, ಪ್ರತಿಭಟನೆ ಹಾಗೂ ಮೆರವಣಿಗೆಗಳನ್ನು ಕೈಗೊಂಡು ಸರ್ಕಾರಕ್ಕೆ ಚುರುಕು ಮುಟ್ಟಿಸುವ ಕಾರ್ಯ ಮಾಡಿದೆ. ಎಲ್ಲಕ್ಕಿಂತ ಪ್ರಮುಖವಾಗಿ ಕಾಂಗ್ರೆಸ್ ಅತ್ಯಂತ ಯಶಸ್ವಿ ಕಾರ್ಯಕ್ರಮ ಜನಧ್ವನಿ ಜಾಥಾ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನ ವಿರೋಧಿ ಆಡಳಿತ ನೀತಿಯನ್ನು ಖಂಡಿಸಿ ಇದನ್ನು ಪಕ್ಷದ ನಾಯಕರು ಒಟ್ಟಾಗಿ ನಡೆಸಿದ್ದಾರೆ. ರಾಜ್ಯದ 100 ವಿಧಾನಸಭಾ ಕ್ಷೇತ್ರಗಳಲ್ಲಿ ಈ ಹೋರಾಟವನ್ನು ಯಶಸ್ವಿಯಾಗಿ ಕೈಗೊಳ್ಳಲಾಗಿದೆ. ಕೋವಿಡ್ ಆತಂಕದ ಮಧ್ಯೆಯೇ ಬಿಬಿಎಂಪಿ ತೆರಿಗೆ ಹೆಚ್ಚಿಸಿರುವುದನ್ನು ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತ್ತು. ಭದ್ರಾವತಿಯಲ್ಲಿ ನಡೆದ ಪ್ರೊ ಕಬಡ್ಡಿ ಪಂದ್ಯಾವಳಿ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ನಡೆದಿದ್ದ ಗಲಾಟೆಯನ್ನು ಖಂಡಿಸಿತ್ತು ಕಾಂಗ್ರೆಸ್.

ಬಿಎಸ್​ವೈ ಹೋರಾಟ

ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಪುತ್ರ ಬಿ.ವೈ.ವಿಜಯೇಂದ್ರ ಸೂಪರ್ ಸಿಎಂ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷ ಸಾಕಷ್ಟು ಹೋರಾಟಗಳನ್ನು ನಡೆಸಿದೆ. ರಾಜ್ಯದ ಸಚಿವರೇ ಈ ವಿಚಾರವಾಗಿ ಬೇಸರ ವ್ಯಕ್ತಪಡಿಸಿದ ಸಂದರ್ಭದಲ್ಲಿ ಕಾಂಗ್ರೆಸ್ ಟೀಕಿಸುತ್ತಾ ಬಂದಿದೆ. ಖಾಸಗಿ ವಾಹಿನಿಗಳಲ್ಲಿ ಸಚಿವರ ವಿರುದ್ಧ ಹಾಗೂ ಸಿಎಂ ಕುಟುಂಬ ಸದಸ್ಯರ ವಿರುದ್ಧ ಆರೋಪಗಳು ಕೇಳಿ ಬಂದ ಸಂದರ್ಭದಲ್ಲಿ ಕಾಂಗ್ರೆಸ್ ದೊಡ್ಡಮಟ್ಟದ ಹೋರಾಟಗಳನ್ನು ನಡೆಸಿ ಗಮನ ಸೆಳೆದಿದೆ.

ಬೆಲೆ ಏರಿಕೆ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್​ ಐದು ದಿನಗಳ ಕಾಲ ಸೈಕಲ್ ಱಲಿ ನಡೆಸಿದೆ. ಪೆಟ್ರೋಲ್ ಬೆಲೆ 100 ರೂಪಾಯಿ ಗಡಿ ದಾಟಿದ್ದಕ್ಕೆ, 100 ನಾಟೌಟ್​ ಎಂದು ಬೃಹತ್ ಅಭಿಯಾನ ಆರಂಭಿಸಿತ್ತು.

ಜೊಲ್ಲೆ ವಿರುದ್ಧವೂ ಹೋರಾಟ

ಇದೀಗ ಮಕ್ಕಳಿಗೆ ಮೊಟ್ಟೆ ಖರೀದಿಯಲ್ಲಿ ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಸಚಿವೆ ಶಶಿಕಲಾ ಜೊಲ್ಲೆ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಹೋರಾಟ ನಡೆಸುತ್ತಿದೆ.

ABOUT THE AUTHOR

...view details