ಕರ್ನಾಟಕ

karnataka

ETV Bharat / state

ಫ್ಯಾಮಿಲಿ ಪಾಲಿಟಿಕ್ಸ್: 20ಕ್ಕೂ ಹೆಚ್ಚು ರಕ್ತ ಸಂಬಂಧಿ ಅಭ್ಯರ್ಥಿಗಳಿಗೆ ಬಿಜೆಪಿ ಮಣೆ - ಬಿಜೆಪಿ ಟಿಕೆಟ್

ಬಿಜೆಪಿ ಕುಟುಂಬ ರಾಜಕಾರಣವನ್ನು ತೀವ್ರವಾಗಿ ವಿರೋಧಿಸುವ ರಾಜಕೀಯ ಪಕ್ಷವೆಂದು ಚುನಾವಣಾ ಪ್ರಚಾರದಲ್ಲಿ ಪಕ್ಷದ ಹೈಕಮಾಂಡ್ ಸಾರಿ ಸಾರಿ ಹೇಳುತ್ತಿದೆ.

BJP given tickets to Family politics related candidates in the Karnataka assembly elections
ಫ್ಯಾಮಿಲಿ ಪಾಲಿಟಿಕ್ಸ್: 20ಕ್ಕೂ ಹೆಚ್ಚು ರಕ್ತ ಸಂಬಂಧಿ ಅಭ್ಯರ್ಥಿಗಳಿಗೆ ಬಿಜೆಪಿ ಮಣೆ

By

Published : Apr 12, 2023, 7:56 PM IST

Updated : Apr 12, 2023, 8:08 PM IST

ಬೆಂಗಳೂರು:ರಾಜಕೀಯದಲ್ಲಿ ಕುಟುಂಬ ರಾಜಕಾರಣವನ್ನು ಬಲವಾಗಿ ವಿರೋಧಿಸುತ್ತಲೇ ಬಂದಿರುವ ಬಿಜೆಪಿ ಹೈಕಮಾಂಡ್, ಕರ್ನಾಟಕ ವಿಧಾನಸಭೆ ಚುನಾವಣೆ ಟಿಕೆಟ್ ಪ್ರಕಟಿಸುವಾಗ ಕುಟುಂಬ ರಾಜಕಾರಣದ ಹಿನ್ನೆಲೆ ಇರುವ ಅಭ್ಯರ್ಥಿಗಳಿಗೆ ಮಣೆ ಹಾಕಿದೆ. ಮಂಗಳವಾರ ಘೋಷಿಸಿದ 189 ಅಭ್ಯರ್ಥಿಗಳ ಪೈಕಿ 20ಕ್ಕೂ ಹೆಚ್ಚು ಜನರು ಕುಟುಂಬ ರಾಜಕಾರಣದ ಹಿನ್ನೆಲೆಯುಳ್ಳವರೇ ಆಗಿದ್ದಾರೆ. ತಂದೆ ಮಕ್ಕಳು, ಗಂಡ - ಹೆಂಡತಿ, ಸಹೋದರರು, ಅಣ್ಣ ತಂಗಿ, ಮಾವ- ಅಳಿಯ... ಹೀಗೆ ರಕ್ತ ಸಂಬಂಧ ಹೊಂದಿರುವ ಅಭ್ಯರ್ಥಿಗಳಿಗೆ ಚುನಾವಣೆಗೆ ಸ್ಪರ್ಧೆ ಮಾಡಲು ಟಿಕೆಟ್ ನೀಡಿದೆ.

ಇದನ್ನೂ ಓದಿ:ಪಕ್ಷಕ್ಕೆ ದುಡಿಯುವವರಿಗೆ ಟಿಕೆಟ್​ ನೀಡದೆ ಬೇರೆಯವರಿಗೆ ಮಾರಾಟ: ಕೆ.ಎಸ್.ದಿವಾಕರ್

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ಬಿ.ವೈ.ವಿಜಯೇಂದ್ರ ಅವರಿಗೆ ಶಿಕಾರಿಪುರದಲ್ಲಿ ಸ್ಪರ್ಧೆ ಮಾಡಲು ಪಕ್ಷ ಟಿಕೆಟ್ ನೀಡಿದೆ. ತಂದೆ ಯಡಿಯೂರಪ್ಪನವರು ಬಿಜೆಪಿಯ ಹಿರಿಯ ಮುಖಂಡರಾಗಿ, ಸಿಎಂ ಆಗಿ ಸೇವೆ ಸಲ್ಲಿಸಿ, ಸದ್ಯ ಚುನಾವಣೆ ರಾಜಕಾರಣದಿಂದ ನಿವೃತ್ತರಾಗಿದ್ದಾರೆ. ಇವರ ಸಹೋದರ ಬಿ.ವೈ.ರಾಘವೇಂದ್ರ ಶಿವಮೊಗ್ಗ ಕ್ಷೇತ್ರದ ಲೋಕಸಭೆ ಸದಸ್ಯರಾಗಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ರಾಜಕಾರಣದ ಹಿನ್ನೆಲೆ ಇರುವ ಕುಟುಂಬದ ಕುಡಿಯಾಗಿದ್ದಾರೆ. ಬೊಮ್ಮಾಯಿಯವರು ಶಿಗ್ಗಾಂವಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿತ್ತು. ಇವರ ತಂದೆ ಎಸ್.ಆರ್.ಬೊಮ್ಮಾಯಿ ಜನತಾ ಪಕ್ಷ ಸರ್ಕಾರದಲ್ಲಿ ರಾಜ್ಯದ ಮುಖ್ಯಮಂತ್ರಿ ಆಗಿದ್ದರು. ಅಲ್ಲದೆ ಕೇಂದ್ರದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು.

ಎಸ್.ಆರ್.ಬೊಮ್ಮಾಯಿ ಅವರೊಂದಿಗೆ ಬಸವರಾಜ ಬೊಮ್ಮಾಯಿ

ಪ್ರಮುಖ ಅಭ್ಯರ್ಥಿಗಳ ಕೌಟುಂಬಿಕ ಹಿನ್ನೆಲೆ:ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿಯವರಿಗೆ ಬೀಳಗಿ ಕ್ಷೇತ್ರದಿಂದ ಟಿಕೆಟ್​ ನೀಡಲಾಗಿದೆ. ಇವರ ಸಹೋದರ ಹನುಮಂತ ನಿರಾಣಿ ವಿಧಾನ ಪರಿಷತ್ ಬಿಜೆಪಿಯ ಸದಸ್ಯರಾಗಿದ್ದಾರೆ. ಹುಬ್ಬಳ್ಳಿ - ಧಾರವಾಡ ಪಶ್ಚಿಮ ಕ್ಷೇತ್ರದಲ್ಲಿ ಅಭ್ಯರ್ಥಿ ಅರವಿಂದ್ ಬೆಲ್ಲದ ಅವರ ತಂದೆ ಚಂದ್ರಕಾಂತ ಬೆಲ್ಲದ ಐದಾರು ಬಾರಿ ಬಿಜೆಪಿಯ ಶಾಸಕರಾಗಿ ಆಯ್ಕೆಯಾಗಿದ್ದರು.

ಬಳ್ಳಾರಿ ಜಿಲ್ಲೆಯಲ್ಲಿ ಸಚಿವ ಶ್ರೀರಾಮುಲು ಅವರಿಗೆ ಕುಟುಂಬ ರಾಜಕಾರಣದ ಹಿನ್ನೆಲೆ ಇದೆ. ಇವರ ಸಹೋದರಿ ಶಾಂತ ಈ ಹಿಂದೆ ಬಳ್ಳಾರಿ ಕ್ಷೇತ್ರದ ಬಿಜೆಪಿ ಲೋಕಸಭೆ ಸದಸ್ಯರಾಗಿದ್ದರು. ಇವರ ರಕ್ತ ಸಂಬಂಧಿಗಳಾದ ದೇವೇಂದ್ರಪ್ಪ ಮತ್ತು ಫಕೀರಪ್ಪ ಲೋಕಸಭೆ ಸದಸ್ಯರಾಗಿ ಆಯ್ಕೆಯಾಗಿದ್ದರು. ಅಳಿಯ ಸುರೇಶ ಬಾಬು ಕಂಪ್ಲಿ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದರು.

ರೆಡ್ಡಿ ಕುಟುಂಬದ ಸಹೋದರರಿಗೂ ಬಿಜೆಪಿ ಮಣೆ ಹಾಕಿದ್ದು, ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಸಹೋದರ ಸೋಮಶೇಖರ್ ರೆಡ್ಡಿ ಅವರಿಗೆ ಟಿಕೆಟ್ ನೀಡಿದೆ. ಸೋಮಶೇಖರ್ ರೆಡ್ಡಿ ಅವರ ಮತ್ತೊಬ್ಬ ಸಹೋದರ ಕರುಣಾಕರ ರೆಡ್ಡಿ ಬಿಜೆಪಿಯ ಹಾಲಿ ಶಾಸಕರಾಗಿದ್ದು, ಹರಪನಹಳ್ಳಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ವಿಜಯನಗರ ಕ್ಷೇತ್ರದಲ್ಲಿ ತಮಗೆ ಟಿಕೆಟ್ ಬೇಡವೆಂದು ಸಚಿವ ಆನಂದ್ ಸಿಂಗ್ ಘೋಷಣೆ ಮಾಡಿದ್ದರೂ, ಅವರ ಪುತ್ರ ಸಿದ್ಧಾರ್ಥ ಸಿಂಗ್ ಅವರಿಗೆ ಬಿಜೆಪಿ ಟಿಕೆಟ್ ಕೊಟ್ಟಿದೆ.

ಇದನ್ನೂ ಓದಿ:ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥ ಸ್ವಾಮಿ ದರ್ಶನ ಪಡೆದ ಸಿಎಂ ಬೊಮ್ಮಾಯಿ

ಚಿತ್ರದುರ್ಗದಲ್ಲಿ ಜಿಹೆಚ್ ತಿಪ್ಪಾರೆಡ್ಡಿಗೆ ಟಿಕೆಟ್ ನೀಡಲಾಗಿದೆ. ಇವರ ಸಹೋದರ ಜಿ.ಹೆಚ್.ಅಶ್ವಥ್ ರೆಡ್ಡಿ ಶಾಸಕರಾಗಿ ಮತ್ತು ಮಾಜಿ ಸಚಿವರಾಗಿದ್ದರು. ತುಮಕೂರಿನಲ್ಲಿ ಶಾಸಕ ಜ್ಯೋತಿ ಗಣೇಶ ತಂದೆ ಜಿಎಸ್ ಬಸವರಾಜ್ ಬಿಜೆಪಿ ಲೋಕಸಭಾ ಸದಸ್ಯರಾಗಿದ್ದಾರೆ. ಬೆಂಗಳೂರಿನ ಗಾಂಧಿನಗರದಲ್ಲಿ ಸಪ್ತಗಿರಿ ಗೌಡ ಅವರಿಗೆ ಟಿಕೆಟ್ ದೊರೆತಿದ್ದು, ಇವರು ಮಾಜಿ ಸಚಿವ ರಾಮಚಂದ್ರಗೌಡ ಅವರ ಪುತ್ರ.

ನಂಜನಗೂಡಿನಲ್ಲಿ ಬಿಜೆಪಿ ಶಾಸಕ ಹರ್ಷವರ್ಧನ ಕೇಂದ್ರದ ಮಾಜಿ ಸಚಿವ, ಹಾಲಿ ಚಾಮರಾಜನಗರ ಕ್ಷೇತ್ರದ ಸಂಸದ ಶ್ರೀನಿವಾಸ್ ಪ್ರಸಾದ್ ಅವರ ಅಳಿಯರಾಗಿದ್ದಾರೆ. ಚಾಮರಾಜನಗರ ಜಿಲ್ಲೆಯ ಹನೂರು ಕ್ಷೇತ್ರದ ಟಿಕೆಟ್​ ಪಡೆದ ಡಾ. ಪ್ರೀತಮ್ ಗೌಡ ಅವರು ಮಾಜಿ ಸಚಿವ ನಾಗಪ್ಪ ಹಾಗೂ ಮಾಜಿ ಶಾಸಕಿ ಪರಿಮಳ ನಾಗಪ್ಪ ಪುತ್ರ. ಮಂಡ್ಯ ಜಿಲ್ಲೆಯ ನಾಗಮಂಗಲ ಕ್ಷೇತ್ರದಲ್ಲಿ ಮಾಜಿ ಸಂಸದ ಶಿವರಾಮೇಗೌಡ ಅವರ ಪತ್ನಿ ಸುಧಾ ಶಿವರಾಮೇಗೌಡ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಶಿವರಾಮೇಗೌಡ ಅವರು ಇತ್ತೀಚೆಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು.

ಬೆಳಗಾವಿ ಫ್ಯಾಮಿಲಿ ಪಾಲಿಟಿಕ್ಸ್:ಬೆಳಗಾವಿ ಜಿಲ್ಲೆಯೊಂದರಲ್ಲಿಯೇ ಬಿಜೆಪಿ ಹೈಕಮಾಂಡ್ ಒಟ್ಟು 6 ಕ್ಷೇತ್ರಗಳಲ್ಲಿ ಕುಟುಂಬ ರಾಜಕಾರಣದ ಹಿನ್ನೆಲೆ ಇರುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿ ಅಚ್ಚರಿ ಮೂಡಿಸಿದೆ. ಮಾಜಿ ಸಚಿವ ದಿ. ಉಮೇಶ್ ಕತ್ತಿಯವರ ಸಹೋದರ ಮತ್ತು ಪುತ್ರನಿಗೆ ಟಿಕೆಟ್ ನೀಡಿದೆ. ಈ ಹಿಂದೆ ಲೋಕಸಭೆ ಮತ್ತು ವಿಧಾನ ಪರಿಷತ್ ಚುನಾವಣೆಯಲ್ಲಿ ಸಹೋದರ ರಮೇಶ್ ಕತ್ತಿಗೆ ಟಿಕೆಟ್ ನೀಡುವಂತೆ ಉಮೇಶ್ ಕತ್ತಿ ಒತ್ತಡ ಹೇರಿದ್ದರು. ಆಗ ಬಿಜೆಪಿ ಹೈಕಮಾಂಡ್ ಕುಟುಂಬ ರಾಜಕಾರಣ ಎನ್ನುವ ಕಾರಣಕ್ಕೆ ಟಿಕೆಟ್ ನೀಡಲು ನಿರಾಕರಿಸಿತ್ತು. ಅದೇ ನಿಲುವನ್ನು ವಿಧಾನಸಭಾ ಚುನಾವಣೆಗೆ ಅನುಸರಿಸಲು ಸಾಧ್ಯವಾಗಿಲ್ಲ.

ಉಮೇಶ ಕತ್ತಿಯವರ ಪುತ್ರ ನಿತಿನ್ ಕತ್ತಿಯವರಿಗೆ ಹುಕ್ಕೇರಿ ಟಿಕೆಟ್​ ಹಾಗೂ ಸಹೋದರ ರಮೇಶ್ ಕತ್ತಿ ಅವರಿಗೆ ಚಿಕ್ಕೋಡಿ ಕ್ಷೇತ್ರದಲ್ಲಿ ಪಕ್ಷದಿಂದ ಕಣಕ್ಕಿಳಿಯಲು ಬಿಜೆಪಿ ಟಿಕೆಟ್ ನೀಡಿದೆ. ಕತ್ತಿ ಕುಟುಂಬದ ಜೊತೆಗೆ ಜಾರಕಿಹೊಳಿ ಕುಟುಂಬಕ್ಕೂ ಬಿಜೆಪಿ ಮಣೆ ಹಾಕಿದೆ. ಜಾರಕಿಹೊಳಿ ಕುಟುಂಬದ ಸಹೋದರರಾದ ಮಾಜಿ ಸಚಿವ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರಿಗೆ ಅರಭಾವಿ ಕ್ಷೇತ್ರದ ಟಿಕೆಟ್​ ನೀಡಲಾಗಿದ್ದರೆ, ರಮೇಶ್ ಜಾರಕಿಹೊಳಿಯವರಿಗೆ ಗೋಕಾಕ ಕ್ಷೇತ್ರದ ಟಿಕೆಟ್​ ಘೋಷಿಸಲಾಗಿದೆ.

ಶಶಿಕಲಾ ಜೊಲ್ಲೆ ಮತ್ತು ಅಣ್ಣ ಸಾಹೇಬ್ ಜೊಲ್ಲೆ

ನಿಪ್ಪಾಣಿ ಕ್ಷೇತ್ರದಲ್ಲಿ ಮತ್ತೊಮ್ಮೆ ಸಚಿವೆ ಶಶಿಕಲಾ ಜೊಲ್ಲೆಯವರಿಗೆ ಬಿಜೆಪಿ ಟಿಕೆಟ್ ನೀಡಲಾಗಿದೆ. ಶಶಿಕಲಾ ಚಿಕ್ಕೋಡಿ ಕ್ಷೇತ್ರದ ಲೋಕಸಭೆ ಸದಸ್ಯ ಅಣ್ಣ ಸಾಹೇಬ್ ಜೊಲ್ಲೆಯವರ ಪತ್ನಿ. ವಿಧಾನಸಭೆ ಉಪಸಭಾಧ್ಯಕ್ಷರಾಗಿದ್ದ ದಿ. ಆನಂದ ಮಾಮನೆಯವರ ಪತ್ನಿ ರತ್ನಮಾಮನಿಯವರಿಗೆ ಸೌದತ್ತಿ ಎಲ್ಲಮ್ಮ ಕ್ಷೇತ್ರದಿಂದ ಸ್ಪರ್ಧಿಸಲು ಪಕ್ಷ ಅವಕಾಶ ಮಾಡಿಕೊಟ್ಟಿದೆ. ಕುಟುಂಬ ರಾಜಕಾರಣಕ್ಕೆ ಬಿಜೆಪಿ ಮಣೆ ಹಾಕಿರುವುದು ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ:ಬಿಜೆಪಿಗೆ ರಾಜೀನಾಮೆ ಘೋಷಿಸಿದ ಮಾಜಿ‌ ಶಾಸಕ‌ ದೊಡ್ಡಪ್ಪಗೌಡ; ಜೆಡಿಎಸ್​ ಸೇರ್ಪಡೆ ಸಾಧ್ಯತೆ

Last Updated : Apr 12, 2023, 8:08 PM IST

ABOUT THE AUTHOR

...view details