ಬೆಂಗಳೂರು:ಸಿಎಂ ಯಡಿಯೂರಪ್ಪ ಅವರ ವಿರುದ್ಧ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು ಮನಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ಬಿಎಸ್ವೈ ದೆಹಲಿಗೆ ಹೋದ್ರೂ ಸಿಂಹನೇ, ಇಲ್ಲಿದ್ರೂ ಸಿಂಹನೇ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹೇಳಿದರು.
ಯಡಿಯೂರಪ್ಪ ದೆಹಲಿಯಲ್ಲಿದ್ರೂ ಸಿಂಹನೇ, ಕರ್ನಾಟಕದಲ್ಲಿದ್ರೂ ಸಿಂಹನೇ: ರವಿಕುಮಾರ್ - ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರ ವಿರುದ್ಧ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಆಕ್ರೋಶ ಹೊರ ಹಾಕಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸಿಎಂ ವಿರುದ್ಧ ಟೀಕೆ ಮಾಡುತ್ತಾ 'ಹಮಾರ ಕುತ್ತ ಹಮಾರ ಗಲಿ ಮೇ ಶೇರ್ ಹೇ' ಎಂಬ ಹೇಳಿಕೆ ನೀಡಿದ್ದಾರೆ. ಇದು ಯಡಿಯೂರಪ್ಪನವರ ತಪ್ಪಲ್ಲ. ಸಿದ್ದರಾಮಯ್ಯನವರ ತಪ್ಪು. ಕನ್ನಡದಲ್ಲಿ ಒಂದು ಗಾದೆ ಮಾತಿದೆ. ನಾಯಿ ಸಿಂಹವನ್ನು ಕೂಡ ನಾಯಿ ಎಂದು ಭಾವಿಸುತ್ತೆ. ಹಾಗೆಯೇ ಯಡಿಯೂರಪ್ಪ ಸಿಂಹನೇ, ಆದರೆ ಸಿದ್ದರಾಮಯ್ಯ ನಾಯಿಯಾಗಿ ನಾಯಿ ಎಂದು ಭಾವಿಸಿದ್ದಾರೆ. ಇದು ಸಿದ್ದರಾಮಯ್ಯನವರು ತಪ್ಪು, ಬಿಎಸ್ವೈ ದೆಹಲಿಯಲ್ಲಿದ್ದರೂ ಸಿಂಹನೇ, ಕರ್ನಾಟಕದಲ್ಲಿದ್ದರು ಸಿಂಹನೇ ಎಂದು ಕಿಡಿಕಾರಿದರು.
ಸಿದ್ದರಾಮಯ್ಯನವರು ಮಾತನಾಡುತ್ತಾ ತಮ್ಮ ಕುಸಂಸ್ಕೃತಿಯನ್ನು ಪ್ರದರ್ಶನ ಮಾಡುತ್ತಿದ್ದು, ಅವಾಚ್ಯ ಶಬ್ದಗಳನ್ನು ಬಳಸುತ್ತಿದ್ದಾರೆ. ಅವರಿಗೆ ಸರಿಯಾದ ಸಂಸ್ಕೃತಿ, ಸಭ್ಯತೆ, ನಾಗರಿಕತೆ ಇಲ್ಲ. ಈ ರೀತಿ ಮಾತನಾಡುವುದು ಅವರಿಗೆ ಶೋಭೆ ತರುವುದಿಲ್ಲ. ಇದು ಕಾಂಗ್ರೆಸ್ ಅವರ ಅನಾಗರಿಕತೆಯನ್ನು ತೋರಿಸುತ್ತದೆ. ಹಾಗಾಗಿ ಸಿದ್ದರಾಮಯ್ಯನವರ ಪದಬಳಕೆಯನ್ನು ಉಗ್ರವಾಗಿ ಖಂಡಿಸುತ್ತೇನೆ ಎಂದು ಆಕ್ರೋಶ ಹೊರ ಹಾಕಿದರು.