ಬೆಂಗಳೂರು: ನಾಳೆ ವಿಧಾನಸಭೆ ಅಧಿವೇಶನದಲ್ಲಿ ಬಹುಮತ ಸಾಬೀತುಪಡಿಸಬೇಕಿರುವ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಸುತ್ತಿದೆ. ನಗರದ ಚಾನ್ಸೆರಿ ಪೆವಿಲಿಯನ್ ಹೋಟೆಲ್ನಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಸಭೆ ನಡೆಯುತ್ತಿದ್ದು, ಬಿಜೆಪಿ ರಾಜ್ಯ ಉಸ್ತುವಾರಿ ಮುರುಳೀಧರರಾವ್ ಹಾಗೂ ಪಕ್ಷದ ಶಾಸಕರು ಪಾಲ್ಗೊಂಡಿದ್ದಾರೆ.
ಸಭೆ ಆರಂಭಕ್ಕೂ ಮುನ್ನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮುರುಳೀಧರರಾವ್ ಅಭಿನಂದನೆ ಸಲ್ಲಿಸಿದರು. ನಂತರ ಶಾಸಕಾಂಗ ಪಕ್ಷದ ನಾಯಕರಾಗಿ ಬಿ.ಎಸ್.ಯಡಿಯೂರಪ್ಪ ಅವಿರೋಧವಾಗಿ ಮರು ಆಯ್ಕೆಯಾದರು.
ಸದನದಲ್ಲಿ ಹೇಗಿರಬೇಕೆಂಬ ಬಗ್ಗೆ ಶಾಸಕರಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಮಾರ್ಗದರ್ಶನ, ಸಲಹೆ, ಸೂಚನೆಗಳನ್ನು ನೀಡುತ್ತಿದ್ದಾರೆ. ನಾಳೆಯೂ ಕೂಡಾ ಬಿಜೆಪಿಯ ಯಾವ ಶಾಸಕರೂ ಬಾಯಿಗೆ ಬಂದ ಹಾಗೆ ಮಾತಾನಾಡುವ ಹಾಗಿಲ್ಲ. ಕುಮಾರಸ್ವಾಮಿ ಅವರು ವಿಶ್ವಾಸಮತ ಯಾಚನೆ ವೇಳೆ ತೋರಿದ ತಾಳ್ಮೆಯನ್ನೇ ತೋರಿಸುವಂತೆ ಸಲಹೆ ನೀಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಸಭೆ ಆರಂಭಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ವಿ.ಸೋಮಣ್ಣ,ಅತೃಪ್ತ ಶಾಸಕರ ವಿಚಾರದಲ್ಲಿ ಸ್ಪೀಕರ್ ರಮೇಶ್ ಕುಮಾರ್ ಅವರು ಬಹಳ ಕೆಟ್ಟ, ಕರಾಳ ತೀರ್ಮಾನ ಕೊಟ್ಟಿದ್ದಾರೆ.ಸ್ವತಃ ಅವರಿಗೇ ಈ ತೀರ್ಮಾನ ತಪ್ಪು ಎಂದು ಗೊತ್ತಾಗಿದೆ. ಈ ತೀರ್ಮಾನ ಅಸಹ್ಯ ಹುಟ್ಟಿಸಿದೆ. ಅವರು ಮೂವತ್ತು ವರ್ಷದ ಹಿಂದಿನ ರಮೇಶ್ ಕುಮಾರ್ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.