ಬೆಂಗಳೂರು:ರಾಜ್ಯದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರದ ಬಜೆಟ್ ಅಧಿವೇಶನ ಆರಂಭಗೊಂಡಿದೆ. ರಾಜ್ಯದಲ್ಲಿ ಕಲಾಪ ಆರಂಭಗೊಂಡು ಎರಡು ವಾರವಾದರೂ ಪ್ರತಿಪಕ್ಷ ನಾಯಕರಿಲ್ಲದೆ ಬಿಜೆಪಿ ಸದಸ್ಯರು ಸದನದಲ್ಲಿ ಭಾಗವಹಿಸುತ್ತಿದ್ದಾರೆ. ಆಡಳಿತ ಪಕ್ಷವನ್ನು ಎದುರಿಸಲು ನೇತೃತ್ವವೇ ಇಲ್ಲದೆ ಬಿಜೆಪಿ ಪರದಾಡುತ್ತಿದೆ. ಪ್ರತಿಪಕ್ಷ ನಾಯಕರಿಗೆ ಸಿಗುವ ಸಮಯವಾಕಾಶ ಸದಸ್ಯರಿಗೆ ಇಲ್ಲದ ಕಾರಣ ಆಡಳಿತ ಪಕ್ಷದ ಟೀಕೆ ಎದುರಿಸಲೂ ಪರದಾಡುವಂತಾಗಿದೆ.
ವಿಧಾನಸಭೆ ಮತ್ತು ವಿಧಾನ ಪರಿಷತ್ನಲ್ಲಿ ಸೇನಾಪತಿಯಿಲ್ಲದೇ ಯುದ್ಧಕ್ಕೆ ಬಂದ ಸ್ಥಿತಿ ಬಿಜೆಪಿಯದ್ದಾಗಿದೆ. ಉಭಯ ಸದನಗಳಲ್ಲಿಯೂ ಪ್ರತಿಪಕ್ಷ ನಾಯಕನ ಸ್ಥಾನ ಖಾಲಿ ಇದೆ. ಪ್ರತಿಪಕ್ಷ ಕಡೆಯ ಮೊದಲ ಸಾಲಿನ ಮೊದಲ ಆಸನ ಉಪ ಸಭಾಧ್ಯಕ್ಷರದ್ದಾದರೆ, ಎರಡನೇ ಆಸನ ಬಹು ಮುಖ್ಯವಾದ ಪ್ರತಿಪಕ್ಷ ನಾಯಕನ ಸ್ಥಾನವಾಗಿದೆ. ಆದರೆ ಕಳೆದ ಎರಡು ವಾರಗಳಿಂದಲೂ ಆ ಸ್ಥಾನ ಖಾಲಿಯೇ ಇದೆ. ನಾಯಕತ್ವವೇ ಇಲ್ಲದೆ ಸದನದ ಅಖಾಡಕ್ಕೆ ಬಿಜೆಪಿ ದುಮುಕಿದೆ. ಆದರೆ ಪ್ರತಿ ದಿನವೂ ಸರ್ಕಾರದ ವಿರುದ್ಧದ ಹೋರಾಟದಲ್ಲಿ ಹಿನ್ನಡೆ ಅನುಭವಿಸುತ್ತಲೇ ಇದೆ.
ಪ್ರತಿ ದಿನದ ಕಲಾಪದಲ್ಲಿ ಸರ್ಕಾರವನ್ನು ಎಷ್ಟು ಬಾರಿಯಾದರೂ ಎಷ್ಟು ಸಮಯವಾದರೂ ಟೀಕಿಸುವ ಅವಕಾಶ, ಸಚಿವರು, ಸದಸ್ಯರು ಮಾತನಾಡುವಾಗ ನಡುವೆ ಮಧ್ಯಪ್ರವೇಶ ಮಾಡಿದರೆ ಮಾತನಾಡಲು ಅವಕಾಶ ಸಿಗುವುದು ಪ್ರತಿಪಕ್ಷ ನಾಯಕರಿಗೆ ಮಾತ್ರ. ಸಭಾ ನಾಯಕರಿಗೆ ಸಮಾನವಾದ ಅವಕಾಶ ಪ್ರತಿಪಕ್ಷ ನಾಯಕರಿಗೆ ಇದೆ. ಪ್ರತಿಪಕ್ಷ ಸದಸ್ಯರು ಮಾತನಾಡುವ ವೇಳೆ ಆಡಳಿತ ಪಕ್ಷದ ಸದಸ್ಯರು ಮುಗಿಬಿದ್ದಾಗ ಅವರ ನೆರವಿಗೆ ಧಾವಿಸಲು ಪ್ರತಿಪಕ್ಷ ನಾಯಕರಿಂದ ಮಾತ್ರ ಸಾಧ್ಯ. ಆದರೆ ಪ್ರತಿಪಕ್ಷ ನಾಯಕರಿಲ್ಲದೆ ಈ ಎಲ್ಲಾ ಅವಕಾಶ ಬಿಜೆಪಿಗೆ ತಪ್ಪಿದೆ.
ಸದ್ಯ ವಿಧಾನ ಪರಿಷತ್ನಲ್ಲಿ ಬಿಜೆಪಿಯ ಹಿರಿಯ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಪ್ರತಿಪಕ್ಷ ನಾಯಕರ ಸ್ಥಾನ ತುಂಬುವ ಪ್ರಯತ್ನ ಮಾಡುತ್ತಿದ್ದಾರೆ. ಆದರೂ ಸಭಾಪತಿ ಪೀಠದಿಂದಲೇ ನೀವು ಪ್ರತಿಪಕ್ಷ ನಾಯಕರಲ್ಲ, ಪದೇ ಪದೇ ಎದ್ದು ನಿಲ್ಲಬೇಡಿ ಎನ್ನುವ ಸೂಚನೆಯನ್ನು ಎದುರಿಸಿ ಮುಜುಗರಕ್ಕೂ ಈಡಾಗುತ್ತಿದ್ದಾರೆ. ಆರಂಭದಲ್ಲಿ ಪ್ರತಿಪಕ್ಷ ನಾಯಕನ ಸ್ಥಾನ ಖಾಲಿ ಇರುವುದನ್ನು ಸಮರ್ಥಿಸಿಕೊಂಡ ಬಿಜೆಪಿ ಸದಸ್ಯರು ನಂತರದ ದಿನದಲ್ಲಿ ಸಮರ್ಥಿಸಿಕೊಳ್ಳಲು ಪ್ರಯಾಸಪಡಬೇಕಾಯಿತು.