ಬೆಂಗಳೂರು:ರಾಜ್ಯದಲ್ಲಿ ನಾಯಕತ್ವ ಬದಲಾವಣೆ ನಂತರ ಮೊದಲ ಉಪಚುನಾವಣೆ ಎದುರಾಗಿದ್ದು, ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿಗೆ ಅಗ್ನಿ ಪರೀಕ್ಷೆ ಎದುರಾಗಿದೆ. ಉಪ ಕದನದಲ್ಲಿ ಗೆಲ್ಲುವ ಮೂಲಕ ತಮ್ಮ ಆಯ್ಕೆ ಸಮರ್ಥಿಸಿಕೊಳ್ಳುವ ಅವಕಾಶ ಬೊಮ್ಮಾಯಿ ಅವರಿಗಿದ್ದು, ಬಿಜೆಪಿ ಪರ ಜನತೆಯಲ್ಲಿ ಒಲವಿದೆ ಎಂದು ಸಾಬೀತುಪಡಿಸುವ ಸತ್ವ ಪರೀಕ್ಷೆಗಿಳಿದಿದೆ.
ಮೂರು ಮಹಾನಗರ ಪಾಲಿಕೆ ಚುನಾವಣೆ ಬೆನ್ನಲ್ಲೇ ಎರಡು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ದಿನಾಂಕ ಘೋಷಣೆಯಾಗಿದೆ. ರಾಜಕೀಯ ಗುರು ಸಿಎಂ ಉದಾಸಿ ನಿಧನದಿಂದ ತೆರವಾಗಿರುವ ಹಾನಗಲ್ ವಿಧಾನಸಭಾ ಕ್ಷೇತ್ರ ಮತ್ತು ಜೆಡಿಎಸ್ ಶಾಸಕ ಎಂಸಿ ಮನಗೊಳಿ ನಿಧನದಿಂದ ತೆರವಾಗಿರುವ ಸಿಂದಗಿ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣಾ ಆಯೋಗ ದಿನಾಂಕ ಪ್ರಕಟಿಸಿದ್ದು, ಎರಡು ಕ್ಷೇತ್ರಗಳು ಬಿಜೆಪಿ ಪಾಲಿಗೆ ಮಹತ್ವದ್ದಾಗಿದೆ.
ಸಿಎಂ ತವರು ಜಿಲ್ಲೆಯ ಪ್ರತಿಷ್ಠೆಯ ಕಣ
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ನಂತರ ನಡೆಯುತ್ತಿರುವ ಮೊದಲ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಇದಾಗಿದ್ದು, ನೂತನ ನಾಯಕತ್ವಕ್ಕೆ ಜನರು ಬೆಂಬಲ ಕೊಡುತ್ತಾರಾ? ಬಿಜೆಪಿ ಪರ ರಾಜ್ಯದ ಜನತೆಯ ಒಲವಿದೆಯಾ ಎನ್ನುವ ಪ್ರಶ್ನೆಗೆ ಉಪಚುನಾವಣೆ ಉತ್ತರ ನೀಡಲಿದೆ.
ಹಾನಗಲ್ ವಿಧಾನಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿದ್ದು ಕ್ಷೇತ್ರವನ್ನು ಉಳಿಸಿಕೊಳ್ಳುವ ಮೂಲಕ ತವರು ಜಿಲ್ಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಅಸ್ತಿತ್ವ ಬಲಪಡಿಸಬೇಕಿದೆ. ಅಲ್ಲದೇ ತಮ್ಮ ರಾಜಕೀಯ ಗುರುವಾಗಿದ್ದ ಸಿಎಂ ಉದಾಸಿ ಅವರಿಗೆ ಕ್ಷೇತ್ರದ ಗೆಲುವಿನ ಮೂಲಕ ಗೌರವ ಅರ್ಪಿಸಬೇಕಿದೆ.
ಕಳೆದ ಬಾರಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್ ಹಿಡಿತಕ್ಕೆ ಸಿಕ್ಕಿದ್ದ ಸಿಂದಗಿ ಕ್ಷೇತ್ರದಲ್ಲಿಯೂ ಈಗ ಉಪಚುನಾವಣೆ ನಡೆಯುತ್ತಿದೆ. ಕಳೆದ ಬಾರಿ 9 ಸಾವಿರ ಮತಗಳ ಅಂತರದಿಂದ ಬಿಜೆಪಿ 2ನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಈಗ ರಾಜ್ಯದಲ್ಲಿ ಬಿಜೆಪಿ ಆಡಳಿತವಿದೆ ಹಾಗಾಗಿ ಉಪಚುನಾವಣೆ ಸವಾಲಾಗಿ ತೆಗೆದುಕೊಂಡಿದೆ.
ಉದಾಸಿ ಕುಟುಂಬಸ್ಥರಿಗೆ ಒಲಿಯುತ್ತಾ ಟಿಕೆಟ್..?