ಕರ್ನಾಟಕ

karnataka

ETV Bharat / state

ಬಿಜೆಪಿಯ ಅಚ್ಚರಿ ಆಯ್ಕೆಯ ಪರಿಣಾಮ: 23 ಹಾಲಿ ಶಾಸಕರ ಕ್ಷೇತ್ರಗಳಲ್ಲಿ 7 ಕಡೆ ಬಂಡಾಯ

ಬಿಜೆಪಿಯಲ್ಲಿ ಈ ಬಾರಿ 23 ಹಾಲಿ ಶಾಸಕರಿಗೆ ಕೊಕ್ ನೀಡಲಾಗಿದೆ. ಈ ಪೈಕಿ 7 ಕಡೆ ಬಂಡಾಯ ಕಾಣಿಸಿಕೊಂಡಿದೆ.

ಬಿಜೆಪಿ
ಬಿಜೆಪಿ

By

Published : Apr 20, 2023, 5:25 PM IST

ಬೆಂಗಳೂರು :ಈ ಬಾರಿಯ ವಿಧಾನಸಭಾ ಚುನಾವಣೆಗೆ 73 ಹೊಸ ಮುಖಗಳಿಗೆ ಮಣೆ ಹಾಕುವ ಮೂಲಕ ಬಿಜೆಪಿ ಹೊಸ ಪ್ರಯೋಗ ನಡೆಸಿತ್ತು. 23 ಹಾಲಿ ಶಾಸಕರನ್ನು ಕೈಬಿಡಲಾಗಿತ್ತು. ಅದರಲ್ಲಿ 7 ಕಡೆ ಬಂಡಾಯವೆದ್ದಿದ್ದು, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಬಂಡಾಯದ ಸೆನ್ಸೇಷನಲ್ ಕ್ಷೇತ್ರವಾಗಿದೆ.

ಪ್ರಸ್ತುತ ಚುನಾವಣಾ ನೇತೃತ್ವವನ್ನು ನೇರವಾಗಿ ಹೈಕಮಾಂಡ್ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಈವರೆಗೂ ಕರ್ನಾಟಕ ಚುನಾವಣೆ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳದೆ ರಾಜ್ಯದ ನಾಯಕರ ಹೆಗಲಿಗೆ ಜವಾಬ್ದಾರಿ ವಹಿಸಿ ಕೈತೊಳೆದುಕೊಳ್ಳುತ್ತಿದ್ದ ಬಿಜೆಪಿ ವರಿಷ್ಠರು ಇದೇ ಮೊದಲ ಬಾರಿಗೆ ಅಭ್ಯರ್ಥಿಗಳ ಆಯ್ಕೆಯನ್ನು ನೇರವಾಗಿ ತಾನೇ ಮಾಡಿದೆ. ರಾಜ್ಯ ಸಮಿತಿಯಿಂದ ಚುನಾವಣಾ ವ್ಯವಸ್ಥೆ ಮೂಲಕ ಅಭ್ಯರ್ಥಿಗಳ ಪಟ್ಟಿ ತರಿಸಿಕೊಂಡು ಹಲವು ಶಾಸಕರು, ಮಾಜಿ ಶಾಸಕರ ಕ್ಷೇತ್ರಗಳಿಗೇ ಆಪರೇಷನ್ ನಡೆಸಿ ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ. ಇಷ್ಟೊಂದು ದೊಡ್ಡ ಪ್ರಯೋಗವನ್ನು ರಾಜ್ಯ ಘಟಕವೂ ನಿರೀಕ್ಷೆ ಮಾಡಿರಲಿಲ್ಲ. ಅಚ್ಚರಿ ಆಯ್ಕೆ ಮೂಲಕ ಈ ಬಾರಿ ಬಿಜೆಪಿ ಗಮನ ಸೆಳೆದಿದೆ. ಅದಕ್ಕಾಗಿ ಬಂಡಾಯದ ಬಿಸಿಯನ್ನೂ ಎದುರಿಸಬೇಕಾಗಿದೆ.

ಮಾಜಿ ಸಿಎಂ ಬಂಡಾಯ:23 ಹಾಲಿ ಶಾಸಕರ ಕ್ಷೇತ್ರಗಳಲ್ಲಿ ಬದಲಾವಣೆ ಮಾಡಲಾಗಿದೆ. ಒಂದು ರೀತಿಯಲ್ಲಿ ಕೊಕ್ ನೀಡಿ ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ. ಇದರಲ್ಲಿ ಪ್ರಮಖವಾಗಿ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರ. ಬಿಜೆಪಿಯ ಕಟ್ಟಾಳು, ಸಂಘ ಪರಿವಾರದ ಹಿನ್ನೆಲೆ ಹೊಂದಿದ ಕುಟುಂಬಕ್ಕೆ ಸೇರಿದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್​ಗೆ ಕೋಕ್ ನೀಡಲಾಗಿದೆ. ಇದರಿಂದ ಬಂಡಾಯವೆದ್ದ ಜಗದೀಶ್ ಶೆಟ್ಟರ್ ಚುನಾವಣೆ ಸ್ಪರ್ಧೆ ಖಚಿತ ಎಂದು ಹೈಕಮಾಂಡ್ ಗೆ ಸೆಡ್ಡು ಹೊಡೆದರು. ಇದಕ್ಕೆ ವರಿಷ್ಠರು ಬಗ್ಗದೇ ಇದ್ದಾಗ ಕಾಂಗ್ರೆಸ್ ಸೇರಿ ಕೈ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಶೆಟ್ಟರ್ ವಿರುದ್ಧ ಶೆಟ್ಟರ್ ಕೆಳಗೆ ಸಂಘಟನಾತ್ಮಕ ಜವಾಬ್ದಾರಿ ನಿರ್ವಹಿಸುತ್ತಿದ್ದ ವ್ಯಕ್ತಿ ನಿಂತಿದ್ದಾರೆ. ಇದು ಈ ಬಾರಿಯ ಬಂಡಾಯದ ಸೆನ್ಸೇಷನಲ್ ಕ್ಷೇತ್ರವಾಗಿದೆ.

ಬಂಡಾಯದ ಬಿಸಿ: ಇದನ್ನು ಬಿಟ್ಟರೆ ಹಾಲಿಗೆ ಕೊಕ್ ನೀಡಿದ ಕ್ಷೇತ್ರಗಳಲ್ಲಿ ಮತ್ತೊಂದು ಪ್ರಮುಖವಾಗಿರುವುದು ಶಿವಮೊಗ್ಗ ನಗರ. ಈಶ್ವರಪ್ಪ ಹೈಕಮಾಂಡ್ ನಿರ್ದೇಶನದಂತೆ ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ್ದು ಕುಟುಂಬಕ್ಕೆ ಟಿಕೆಟ್ ಬೇಡಿಕೆ ಇಟ್ಟಿದ್ದರು. ಆದರೆ ಪಕ್ಷ ಕಾರ್ಯಕರ್ತನಿಗೆ ಟಿಕೆಟ್ ನೀಡಿದೆ. ಆದರೂ ಸ್ಥಳೀಯ ಬಿಜೆಪಿ ನಾಯಕರಾಗಿದ್ದ ಟಿಕೆಟ್ ಆಕಾಂಕ್ಷಿ ಆಯನೂರು ಮಂಜುನಾಥ್ ಬಂಡಾಯವೆದ್ದಿದ್ದು, ಜೆಡಿಎಸ್​ನಿಂದ ಕಣಕ್ಕಿಳಿದಿದ್ದಾರೆ. ಹೀಗಾಗಿ ಬಿಜೆಪಿಗೆ ಬಂಡಾಯದ ಬಿಸಿ ತಟ್ಟಲಿದೆ.

ನಾಮಪತ್ರ ಸಲ್ಲಿಕೆ ಕಾರ್ಯ ಮುಕ್ತಾಯಗೊಂಡಿದ್ದು, ಕಣದಲ್ಲಿರುವ ಬಂಡಾಯಗಾರರ ಮನವೊಲಿಕೆ ಮಾಡಲು ರಾಜ್ಯ ಬಿಜೆಪಿ ನಾಯಕರು ಮುಂದಾಗಿದ್ದಾರೆ. ಹೈಕಮಾಂಡ್ ನಿರ್ದೇಶದಂತೆ ರಾಜ್ಯ ನಾಯಕರು ಅಖಾಡಕ್ಕೆ ಇಳಿದಿದ್ದಾರೆ. ನಾಮಪತ್ರಗಳನ್ನು ವಾಪಸ್ ಪಡೆಯಲು ಏಪ್ರಿಲ್ 24 ಕಡೆಯ ದಿನವಾಗಿದ್ದು, ಮುಂದಿನ ಮೂರು ದಿನಗಳ ಕಾಲ ಮನವೊಲಿಕೆ ಕಾರ್ಯ ನಡೆಸಲಿದ್ದಾರೆ. ಬೇರೆ ಪಕ್ಷಗಳಿಂದ ಸ್ಪರ್ಧೆ ಮಾಡಿದವರನ್ನು ಬಿಟ್ಟು ಪಕ್ಷೇತರವಾಗಿ ಕಣಕ್ಕಿಳಿದವರ ಮನವೊಲಿಕೆ ಕಾರ್ಯ ನಡೆಸಲಿದ್ದು, ಸಾಧ್ಯವಾದಷ್ಟು ನಾಮಪತ್ರಗಳ ವಾಪಸ್ ಪಡೆಯುವಂತೆ ಮಾಡಲು ಮುಂದಾಗಿದ್ದಾರೆ.

ಟಿಕೆಟ್ ಸಿಗದೆ ಬಂಡಾಯದ ಬಾವುಟ ಹಾರಿಸಿದ್ದ ಅಂಗಾರ, ಸುಕುಮಾರಶೆಟ್ಟಿಯಂತಹ ಶಾಸಕರು, ಕಟ್ಟೆ ಸತ್ಯನಾರಾಯಣ ತರಹದ ಮಾಜಿ ಕಾರ್ಪೊರೇಟರ್ ಗಳು, ಸ್ಥಳೀಯ ನಾಯಕರು ಟಿಕೆಟ್ ಸಿಗದೆ ರೆಬೆಲ್ ಗಳಾಗಿ ಕಣಕ್ಕಿಳಿಯುವ ಘೋಷಣೆ ಮಾಡಿದ್ದರು. ಆದರೆ ಅವರಲ್ಲಿ ಬಹುತೇಕರನ್ನು ನಾಮಪತ್ರ ಸಲ್ಲಿಕೆ ಮಾಡದಂತೆ ಮೊದಲೇ ಮನವೊಲಿಕೆ ಮಾಡುವಲ್ಲಿ ಸಫಲರಾಗಿದ್ದಾರೆ. ಇದೀಗ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿರುವ ಪಕ್ಷದ ಬಂಡಾಯ ನಾಯಕರ ಮನವೊಲಿಕೆ ಮಾಡಲಾಗುತ್ತದೆ.

ಹಾಲಿ ಶಾಸಕರನ್ನು ಕೈಬಿಟ್ಟ ಕ್ಷೇತ್ರ ಮತ್ತು ಬಂಡಾಯದ ವಿವರ:

ಹುಬ್ಬಳ್ಳಿ ಧಾರವಾಡ - ಜಗದೀಶ್ ಶೆಟ್ಟರ್

(ಅಭ್ಯರ್ಥಿ: ಮಹೇಶ್ ತೆಂಗಿನಕಾಯಿ)

ಬಂಡಾಯವಾಗಿ ಕಾಂಗ್ರೆಸ್‌ನಿಂದ ಶೆಟ್ಟರ್ ಸ್ಪರ್ಧೆ

ಹಾವೇರಿ - ನೆಹರೂ ಓಲೇಕಾರ

(ಅಭ್ಯರ್ಥಿ: ಗವಿಸಿದ್ದಪ್ಪ ದ್ಯಾಮಣ್ಣವರ್)

ಜೆಡಿಎಸ್‌ನಿಂದ ನೆಹರು ಓಲೇಕಾರ ಸ್ಪರ್ಧೆ ಬಂಡಾಯವಾಗಿ

ಶಿವಮೊಗ್ಗ-ಈಶ್ವರಪ್ಪ

(ಅಭ್ಯರ್ಥಿ: ಚನ್ನಬಸಪ್ಪ)

ಬಂಡಾಯ ಇದೆ- ಆಯನೂರು ಮಂಜುನಾಥ್ ಜೆಡಿಎಸ್​ನಿಂದ ಸ್ಪರ್ಧೆ

ಚನ್ನಗಿರಿ - ಮಾಡಾಳು ವಿರೂಪಾಕ್ಷಪ್ಪ

(ಅಭ್ಯರ್ಥಿ: ಶಿವಕುಮಾರ್)

ಬಂಡಾಯವಾಗಿ ಮಾಡಾಳ್​ ಪುತ್ರ ಮಲ್ಲಿಕಾರ್ಜುನ್ ಸ್ಪರ್ಧೆ

ಮೂಡಿಗೆರೆ - ಎಂ ಪಿ ಕುಮಾರಸ್ವಾಮಿ

(ಅಭ್ಯರ್ಥಿ: ದೀಪಕ್ ದೊಡ್ಡಯ್ಯ)

ಬಂಡಾಯವಾಗಿ ಜೆಡಿಎಸ್​ನಿಂದ ಎಂ ಪಿ ಕುಮಾರಸ್ವಾಮಿ ಸ್ಪರ್ಧೆ

ಪುತ್ತೂರು- ಸಂಜೀವ್ ಮಠಂದೂರು

(ಅಭ್ಯರ್ಥಿ: ಆಶಾ ತಿಮ್ಮಪ್ಪ)

ಅರುಣ್ ಪುತ್ತಿಲ ಬಿಜೆಪಿ ಯಿಂದ ಟಿಕೆಟ್ ಸಿಗದೇ ಪಕ್ಷೇತರವಾಗಿ ಸ್ಪರ್ಧೆ ಮಾಡಿದ್ದಾರೆ

ಹೊಸದುರ್ಗ - ಗೂಳಿಹಟ್ಟಿ ಶೇಖರ್

( ಅಭ್ಯರ್ಥಿ: ಎಸ್ ಲಿಂಗಮೂರ್ತಿ)

ಬಂಡಾಯವಾಗಿ ಗೂಳಿಹಟ್ಟಿ ಪಕ್ಷೇತರವಾಗಿ ಸ್ಪರ್ಧೆ

ಬೆಳಗಾವಿ ಉತ್ತರ - ಶಾಸಕ ಅನಿಲ್ ಬೆನಕೆ -

(ಅಭ್ಯರ್ಥಿ: ರವಿ ಪಾಟೀಲ್)

ಬಂಡಾಯ ಶಮನ

ರಾಮದುರ್ಗ - ಮಹಾದೇವಪ್ಪ ಯಾದವಾಡ

(ಅಭ್ಯರ್ಥಿ: ಚಿಕ್ಕರೇವಣ್ಣ)

ಬಂಡಾಯ ಶಮನ

ಕೃಷ್ಣ ರಾಜ - ರಾಮ್ ದಾಸ್

(ಅಭ್ಯರ್ಥಿ:ಶ್ರೀವತ್ಸ)

ಬಂಡಾಯ ಶಮನ

ಮಹದೇವಪುರ - ಅರವಿಂದ್ ಲಿಂಬಾವಳಿ

(ಅಭ್ಯರ್ಥಿ: ಮಂಜುಳಾ ಲಿಂಬಾವಳಿ)

ಬಂಡಾಯ ಇಲ್ಲ

ಗೋವಿಂದ ರಾಜನಗರ -

(ಅಭ್ಯರ್ಥಿ: ಉಮೇಶ್ ಶೆಟ್ಟಿ)

ಬಂಡಾಯ ಇಲ್ಲ

ವಿಜಯನಗರ - ಆನಂದ್ ಸಿಂಗ್

(ಅಭ್ಯರ್ಥಿ: ಸಿದ್ದಾರ್ಥ ಸಿಂಗ್)

ಬಂಡಾಯ ಇಲ್ಲ

ಬೈಂದೂರು - ಸುಕುಮಾರ್ ಶೆಟ್ಟಿ

(ಅಭ್ಯರ್ಥಿ: ಗುರುರಾಜ ಗಂಟಿಹೊಳೆ)

ಬಂಡಾಯ ಶಮನ

ಉಡುಪಿ - ರಘುಪತಿ ಭಟ್

(ಅಭ್ಯರ್ಥಿ: ಯಶ್ಪಾಲ್ ಸುವರ್ಣ )

ಬಂಡಾಯ ಶಮನ

ಕಾಪು - ಲಾಲಜಿ ಮೆಂಡನ್

(ಅಭ್ಯರ್ಥಿ:ಗುರ್ಮೇ ಸುರೇಶ್ ಶೆಟ್ಟಿ)

ಬಂಡಾಯ ಶಮನ

ಸುಳ್ಯ - ಅಂಗಾರ

(ಅಭ್ಯರ್ಥಿ: ಭಾಗೀರಥಿ ಮುರಳ್ಯ)

ಬಂಡಾಯ ಶಮನ

ಕಲಘಟಗಿ - ಲಿಂಬಣ್ಣನವರ್

(ಅಭ್ಯರ್ಥಿ:ನಾಗರಾಜ್ ಚಬ್ಬಿ)

ಬಂಡಾಯ ಶಮನ

ಮಾಯಕೊಂಡ - ಲಿಂಗಣ್ಣ

(ಅಭ್ಯರ್ಥಿ: ಬಸವರಾಜ್ ನಾಯಕ್)

ಬಂಡಾಯ ಇಲ್ಲ

ಶಿರಹಟ್ಟಿ - ರಾಮಪ್ಪ ಲಮಾಣಿ

(ಅಭ್ಯರ್ಥಿ: ಚಂದ್ರು ಲಮಾಣಿ)

ಬಂಡಾಯ ಶಮನವಾಗುವ ನಿರೀಕ್ಷೆ

ದಾವಣಗೆರೆ ಉತ್ತರ- ಎಸ್.ಎ.ರವೀಂದ್ರನಾಥ್

(ಅಭ್ಯರ್ಥಿ: ಲೋಕಿಕೆರೆ ನಾಗರಾಜ್)

ಬಂಡಾಯ ಇಲ್ಲ

ಕುಂದಾಪುರ- ಹಾಲಾಡಿ ಶ್ರೀನಿವಾಸ್ ಶೆಟ್ಟಿ

(ಅಭ್ಯರ್ಥಿ: ಕಿರಣ್ ಕುಮಾರ್ ಕೋಡ್ಗಿ)

ಬಂಡಾಯ ಇಲ್ಲ

ಶಿಕಾರಿಪುರ- ಯಡಿಯೂರಪ್ಪ

(ಅಭ್ಯರ್ಥಿ:ವಿಜಯೇಂದ್ರ)

ಬಂಡಾಯ ಇಲ್ಲ

ಇದನ್ನೂ ಓದಿ:ಹದಿಮೂರು ಅಭ್ಯರ್ಥಿಗಳ ನಾಲ್ಕನೇ ಪಟ್ಟಿ ಬಿಡುಗಡೆ ಮಾಡಿದ ಜೆಡಿಎಸ್

ABOUT THE AUTHOR

...view details