ಬೆಂಗಳೂರು: ನಾಳೆ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯಲಿದ್ದು, ಕೊರೊನಾ ನಂತರ ನಡೆಯುತ್ತಿರುವ ಮೊದಲ ಕಾರ್ಯಕಾರಿಣಿ ಸಭೆ ಇದಾಗಿದೆ. ಸಭೆಯಲ್ಲಿ ಪಕ್ಷದ ಆಂತರಿಕ ಸಮಸ್ಯೆಗಳು ಹಾಗೂ ಸಂಘಟನಾತ್ಮಕ ವಿಷಯಗಳ ಕುರಿತು ಮಹತ್ವದ ಚರ್ಚೆ ನಡೆಯಲಿದೆ.
ನಾಳೆ ಬಿಜೆಪಿ ಕಾರ್ಯಕಾರಿಣಿ ಸಭೆ: ಸಂಘಟನಾತ್ಮಕ ವಿಷಯ, ಆಂತರಿಕ ವಿಷಯ ಕುರಿತು ಮಹತ್ವದ ಚರ್ಚೆ ಮಂಗಳೂರಿನ ರಮಣ ಶ್ರೀ ಸಭಾಂಗಣದಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯಲಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಾರ್ಯಕಾರಿಣಿ ಸಭೆ ಉದ್ಘಾಟನೆ ಮಾಡಲಿದ್ದು, ಈಗಾಗಲೇ ಮಂಗಳೂರಿಗೆ ತೆರಳಿದ್ದಾರೆ. ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್, ಕಾರ್ಯಕಾರಿಣಿ ಸಮಿತಿ ಸದಸ್ಯರು, ಆಹ್ವಾನಿತರು ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಪಕ್ಷದ ಸಂಘಟನಾತ್ಮಕ ವಿಷಯಗಳಿಗೆ ಕಾರ್ಯಕಾರಿಣಿಯಲ್ಲಿ ವಿಶೇಷ ಆದ್ಯತೆ ನೀಡಲಾಗುತ್ತದೆ. ಕೊರೊನಾ ನಂತರ ಪಕ್ಷ ಸಂಘಟನೆ ಮಂದಗತಿಯಲ್ಲಿ ಸಾಗುತ್ತಿದ್ದು, ವರ್ಚುವಲ್ ಮೂಲಕ ಸಾಧ್ಯವಾದಷ್ಟು ಮಟ್ಟಿಗೆ ಪಕ್ಷ ಸಂಘಟನೆ ಮಾಡಲಾಗುತ್ತಿದೆ. ಆದರೆ, ಅದು ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ. ಸದಸ್ಯತ್ವ ಅಭಿಯಾನದಲ್ಲಿ ಕಳೆದ ಎರಡು ವರ್ಷದ ಸಾಧನೆ ಅತ್ಯುತ್ತಮವಾಗಿದ್ದು, ಈ ಬಾರಿಯೂ ಅಭಿಯಾನ ನಡೆಸುವ ಕುರಿತು ಚರ್ಚೆ ನಡೆಸಲಾಗುತ್ತದೆ.
ಮುಂಬರಲಿರುವ ಬಸವಕಲ್ಯಾಣ, ಮಸ್ಕಿ ವಿಧಾನಸಭೆ, ಬೆಳಗಾವಿ ಲೋಕಸಭೆ ಉಪ ಚುನಾವಣೆ, ಸ್ಥಳೀಯ ಸಂಸ್ಥೆ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವುದು. ಅಭ್ಯರ್ಥಿಗಳ ಆಯ್ಕೆ ಮಾನದಂಡ ಸೇರಿದಂತೆ ಪಕ್ಷದ ಚಟುವಟಿಕೆಯನ್ನು ಚುರುಕುಗೊಳಿಸುವ ಕುರಿತು ಸಭೆಯಲ್ಲಿ ಮಹತ್ವದ ಚರ್ಚೆ ನಡೆಸಲಾಗುತ್ತದೆ.
ಇನ್ನು ಪಕ್ಷದ ಆಂತರಿಕ ಸಮಸ್ಯೆಗಳು ಮತ್ತು ವಿಚಾರಗಳ ಕುರಿತು ಸಭೆಯಲ್ಲಿ ವಿಷಯ ಪ್ರಸ್ತಾಪವಾದಾಗ ನಾಯಕತ್ವ ಬದಲಾವಣೆ ವಿಷಯವೂ ಬರಲಿದೆ. ಪದೇ ಪದೇ ನಾಯಕತ್ವ ಬದಲಾವಣೆ ಹೇಳಿಕೆ ನೀಡುತ್ತಿರುವುದು ಸಿಎಂ ಯಡಿಯೂರಪ್ಪ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಬಹಿರಂಗ ಹೇಳಿಕೆ ನೀಡುವುದು ಎಲ್ಲವೂ ಚರ್ಚೆಗೆ ಬರಲಿದೆ ಎನ್ನಲಾಗಿದೆ. ನಾಯಕತ್ವದ ವಿಚಾರದಲ್ಲಿ ಸಿಎಂ ಯಡಿಯೂರಪ್ಪ ಪರ ಕಾರ್ಯಕಾರಿಣಿ ಸಭೆ ಇರುವ ಸಂದೇಶವನ್ನು ಕೂಡ ರವಾನಿಸುವ ಸಾಧ್ಯತೆ ಇದೆ ಎನ್ನಲಾಗಿದೆ.