ಬೆಂಗಳೂರು: ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಟೆಂಡರ್ಗಳನ್ನು ಕರೆಯುತ್ತಿರುವ ಬಿಜೆಪಿ ಸರ್ಕಾರ, ಈ ಟೆಂಡರ್ಗಳ ಮೂಲಕ ಕೋಟಿ ಕೋಟಿ ಹಣ ಕಲೆಕ್ಷನ್ ಮಾಡುತ್ತಿದೆ. ಆದ್ದರಿಂದ ಕಳೆದ ಆರು ತಿಂಗಳಲ್ಲಿ ಮಾಡಿರುವ ಎಲ್ಲ ಟೆಂಡರ್ಗಳನ್ನು ರದ್ದುಗೊಳಿಸಬೇಕು ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಒತ್ತಾಯಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಪ್ ಆ್ಯಂಡ್ ಡಿಟರ್ಜೆಂಟ್ ಕಾರ್ಪೊರೇಷನ್ ಅಧ್ಯಕ್ಷರ ಬಳಿ ಇಷ್ಟು ಅಕ್ರಮ ಹಣವಿದ್ದರೆ, ಸರ್ಕಾರದಲ್ಲಿರುವವರ ಬಳಿ ಎಷ್ಟಿರಬಹುದು? ಈ ಅಕ್ರಮ ಹಣದ ಧೈರ್ಯದಿಂದ ಪ್ರತಿ ಮತಕ್ಕೆ 6 ಸಾವಿರ ನೀಡುವುದಾಗಿ ಹೇಳುತ್ತಿದ್ದಾರೆ. ಸರ್ಕಾರವನ್ನು ವಿಸರ್ಜನೆ ಮಾಡಿ ಚುನಾವಣೆಗೆ ಬನ್ನಿ ನಿಮ್ಮ ಪ್ರಾಮಾಣಿಕತೆಯನ್ನು ಜನ ತೀರ್ಮಾನಿಸುತ್ತಾರೆ. ಬಿಜೆಪಿ ಸರ್ಕಾರದಲ್ಲಿ ವಿಧಾನಸೌಧ ವ್ಯಾಪಾರ ಸೌಧವಾಗಿದೆ ಎಂದು ನಾವು ಹೇಳುತ್ತಲೇ ಇದ್ದೆವು. ಈ ಬಗ್ಗೆ ಸಾಕ್ಷಿ ಏನಿದೆ ಎಂದು ಸರ್ಕಾರ ನಮ್ಮ ಆರೋಪ ತಿರಸ್ಕರಿಸುತ್ತಾ ಬಂದಿತ್ತು. ಇದು 40% ಸರ್ಕಾರ ಎಂದು ಸಾರ್ವಜನಿಕರು ಮಾತನಾಡುತ್ತಿದ್ದಾರೆ. ದೇಶದಲ್ಲೇ ಅತ್ಯಂತ ಭ್ರಷ್ಟ ಸರ್ಕಾರ ಎಂದು ಹೇಳಲಾಗುತ್ತಿದ್ದು, ಇದು ನಿನ್ನೆ ಸಾಬೀತಾಗಿದೆ ಎಂದರು.
ಅಮಿತ್ ಶಾ ಅವರು ಸಂಡೂರಿನಲ್ಲಿ ಮಾತನಾಡುತ್ತಾ ಮೋದಿ ಮುಖ ನೋಡಿ ಮತ ನೀಡಿ ನಾವು ಭ್ರಷ್ಟಾಚಾರ ಮುಕ್ತ ಕರ್ನಾಟಕ ಮಾಡುವ ಆಡಳಿತ ನೀಡುತ್ತೇವೆ ಎಂದರು. ಆಡಳಿತ ಪಕ್ಷಕ್ಕೆ ಸಂಬಂಧಿಸಿದ ಕೇಂದ್ರ ಸಚಿವರೇ ಈ ರೀತಿ ಯಾಕೆ ಮಾತನಾಡುತ್ತಿದ್ದಾರೆ ಎಂದು ಪ್ರಶ್ನೆ ಮೂಡಿತ್ತು. ಕಾರಣ ಈಗ ತಿಳಿದಿದೆ. ರಾಜ್ಯದಲ್ಲಿರುವ ಬಿಜೆಪಿ ಶಾಸಕರು ಹಾಗೂ ಸರ್ಕಾರದ ಮಂತ್ರಿಗಳು ಭ್ರಷ್ಟಾಚಾರದ ಬಕಾಸುರರು ಇವರು ಎಷ್ಟು ತಿಂದರೂ ಸಾಲುತ್ತಿಲ್ಲ ಎಂದು ಅಮಿತ್ ಶಾ ಹಾಗೂ ಪ್ರಧಾನಿ ಮೋದಿ ಅವರಿಗೆ ಅರಿವಾಗಿದೆ. ಹೀಗಾಗಿ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವ ಭರವಸೆ ನೀಡುತ್ತಿದ್ದಾರೆ. ಬೊಮ್ಮಾಯಿ ಹಾಗೂ ಕಟೀಲ್ ಅವರೇ ಎಲ್ಲಿದ್ದೀರಿ? ಈಗ ನಿಮ್ಮ ಬಾಯಿಗೆ ಹೊಲಿಗೆ ಬಿದ್ದಿದೆಯಾ? ಎಂದು ಕಿಡಿ ಕಾರಿದ್ದಾರೆ.
ದಾಖಲೆ ಕೇಳಿದ್ದೀರಾ?:ಕಾನೂನು ಸಚಿವರಿಗೆ ಕರೆ ಮಾಡಿ ಡಿಸಿಸಿ ಬ್ಯಾಂಕ್ಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದಾಗ ನಾವು ಸರ್ಕಾರವನ್ನು ತಳ್ಳಿಕೊಂಡು ಹೋಗುತ್ತಿದ್ದೇವೆ ಎಂದು ಹೇಳಿದ್ದಾರೆ. ಈ ಬಗ್ಗೆ ಅವರು ಪ್ರಶ್ನೆ ಮಾಡಿದ್ದಾರಾ? ತೋಟಗಾರಿಕಾ ಸಚಿವರು ಶೇ 8ರಷ್ಟು ಕಮಿಷನ್ ಕೇಳುತ್ತಾರೆ ಎಂದು ಅಧಿಕಾರಿ ಚೀಟಿ ಬರೆದಾಗ ಅದರ ಬಗ್ಗೆ ಏನಾದರೂ ಪ್ರಶ್ನೆ ಮಾಡಿದ್ದಾರಾ? ರೇಣುಕಾಚಾರ್ಯ ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿಗಳು ಈ ಸರ್ಕಾರದಲ್ಲಿ ಭ್ರಷ್ಟಾಚಾರ ಹೊರತಾಗಿ ಯಾವುದೇ ಕೆಲಸ ಆಗುತ್ತಿಲ್ಲ ಎಂದು ಹೇಳಿದಾಗ ದಾಖಲೆ ಕೇಳಿದ್ರಾ? ಇತ್ತೀಚೆಗೆ ಶಾಸಕ ಗೂಳಿಹಟ್ಟಿ ಶೇಖರ್ ಅವರು ಬಹಿರಂಗ ಪತ್ರ ಬರೆದು ನೀರಾವರಿ ಟೆಂಡರ್ನಲ್ಲಿ 22 ಸಾವಿರ ಕೋಟಿ ಅಕ್ರಮ ನಡೆದಿದೆ ಎಂದರು. ಈ ಬಗ್ಗೆ ದಾಖಲೆ ಕೇಳಿದ್ದಾರಾ? ಎಂದು ಪ್ರಶ್ನಿಸಿದರು.
ಯತ್ನಾಳ್ ಅವರು 2,500 ಕೋಟಿ ಕೊಟ್ಟು ಸಿಎಂ ಕುರ್ಚಿ ಖರೀದಿ ಮಾಡಲಾಗಿದೆ ಎಂದು ಆರೋಪ ಮಾಡಿದರು. ಇದಕ್ಕೆ ದಾಖಲೆ ಕೇಳಿದ್ರಾ? ಈಗ ಯಡಿಯೂರಪ್ಪ ಅವರ ಮೇಲೆ ಬಹಳ ಪ್ರೀತಿ ತೋರುತ್ತಿರುವ ಬಿಜೆಪಿಗರು ಯಡಿಯೂರಪ್ಪ ಅವರಿಲ್ಲದೇ ಚುನಾವಣೆ ನಡೆಯುವುದಿಲ್ಲ ಎಂದು ಬಿಂಬಿಸುತ್ತಿದ್ದಾರೆ. ಆದರೆ ಯತ್ನಾಳ್ ಅವರು ಯಡಿಯೂರಪ್ಪ ಅವರು ಭ್ರಷ್ಟರು, ಅವರ ಪುತ್ರ ವಿಜಯೇಂದ್ರ ಪಿಎಸ್ಐ ಹಗರಣದಲ್ಲಿದ್ದಾರೆ ಎಂದು ಬಹಿರಂಗ ಹೇಳಿಕೆ ನೀಡಿದ್ದರು.
ಈ ಬಗ್ಗೆ ಸರ್ಕಾರ ದಾಖಲೆ ಕೇಳಿತಾ? ಕನಕಗಿರಿ ಶಾಸಕರು ಶಾಸಕರ ಭವನದಲ್ಲಿ ಡೀಲ್ ಮಾಡಿರುವ ಬಗ್ಗೆ ಹೇಳಿದಾಗ ಆ ಆಡಿಯೋ ಪರೀಕ್ಷೆ ಮಾಡಿಸಿದ್ರಾ? ಇನ್ನು ನೆಹರೂ ಓಲೇಕರ್ ಅವರು ಅಪರಾಧಿಯಾದರು. ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಶಾಸಕರು ಭ್ರಷ್ಟಾಚಾರದಲ್ಲಿ ಅಪರಾಧಿ ಎಂದು ನ್ಯಾಯಾಲಯದಲ್ಲಿ ತೀರ್ಮಾನವಾಗಿದೆ. ಅವರ ರಾಜೀನಾಮೆ ಏನಾದರೂ ಕೇಳಿದ್ರಾ? ಇಷ್ಟೆಲ್ಲಾ ಆದರೂ ಮುಖ್ಯಮಂತ್ರಿಗಳು ಕೇವಲ ಕಾಂಗ್ರೆಸ್ನವರ ಬಳಿ ದಾಖಲೆ ಕೇಳುತ್ತಾರೆ ಎಂದು ಟೀಕಿಸಿದರು.