ಬೆಂಗಳೂರು:ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಮಂಗಳವಾರ(ಇಂದು) ಕಡೆಯ ದಿನವಾಗಿದ್ದು, ಸೋಮವಾರ ತಡರಾತ್ರಿಯಾದರೂ ಬಿಜೆಪಿ ಪಟ್ಟಿ ಬಹಿರಂಗವಾಗಲೇ ಇಲ್ಲ. ಹೆಚ್ಚಿನ ಪೈಪೋಟಿ ಇರುವುದರಿಂದ ಭಾರತೀಯ ಜನತಾ ಪಕ್ಷ ರಹಸ್ಯ ಕಾಪಾಡಿಕೊಳ್ಳುತ್ತಿದೆ ಎಂದು ಹೇಳಲಾಗಿದೆ. ಅಭ್ಯರ್ಥಿಗಳಾಗಿ ಆಯ್ಕೆಗೊಂಡವರಿಗೆ ಬಿಜೆಪಿ ಕಚೇರಿಯಲ್ಲಿ ಬಿ ಫಾರಂ ಪಡೆದು ನಾಮಪತ್ರ ಸಲ್ಲಿಸುವಂತೆ ಫೋನ್ ಮೂಲಕ ಮಾಹಿತಿ ನೀಡಲಾಗಿದೆ ಎಂದು ತಿಳಿದು ಬಂದಿದೆ.
ನಾಮಪತ್ರ ಸಲ್ಲಿಸಲು ಯಾರಿಗೆ ಮಾಹಿತಿ ನೀಡಲಾಗಿದೆ ಎನ್ನುವ ಮಾಹಿತಿಯನ್ನೂ ಸಹ ಬಿಜೆಪಿ ಗೌಪ್ಯವಾಗಿಟ್ಟುಕೊಂಡಿದೆ. ಜೂನ್ 3ರಂದು ನಡೆಯುವ ಪರಿಷತ್ತಿನ 7 ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ ನಾಲ್ಕು ಸ್ಥಾನಗಳನ್ನು ಸುಲಭವಾಗಿ ಗೆಲ್ಲಬಹುದಾಗಿದೆ. ನಾಲ್ಕು ಸ್ಥಾನಗಳಿಗೆ ಹೆಚ್ಚಿನ ಪೈಪೋಟಿ ಕಂಡು ಬಂದಿದೆ. ಅಚ್ಚರಿಯ ಅಭ್ಯರ್ಥಿ ಆಯ್ಕೆಮಾಡಿ ಪ್ರತಿ ಪಕ್ಷಗಳಿಗೆ ಶಾಕ್ ನೀಡಬೇಕೆನ್ನುವ ಉದ್ದೇಶವನ್ನು ಹೈಕಮಾಂಡ್ ಹೊಂದಿದೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ರಹಸ್ಯವಾಗಿಡಲಾಗುತ್ತಿದೆ ಎನ್ನಲಾಗಿದೆ.
ಸಾಮಾನ್ಯವಾಗಿ ಬಿಜೆಪಿ ಇತರ ಪಕ್ಷಗಳಿಗಿಂತ ಮೊದಲೇ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸುತ್ತಾ ಬಂದಿರುವ ರಾಜಕೀಯ ಪಕ್ಷ. ಸೋಮಾವಾರ ರಾತ್ರಿ ಯಾವುದೇ ಕ್ಷಣದಲ್ಲಾದರೂ ಮಾಧ್ಯಮಗಳಿಗೆ ಪಟ್ಟಿಯ ಬಗ್ಗೆ ಮಾಹಿತಿ ನೀಡಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಸೋಮವಾರ ತಡರಾತ್ರಿಯಾದರೂ ಅಧಿಕೃತ ಪಟ್ಟಿ ಬಗ್ಗೆ ಯಾವುದೇ ಮಾಧ್ಯಮ ಪ್ರಕಟಣೆ ಹೊರಬಿದ್ದಿಲ್ಲ.
ಕಾಂಗ್ರೆಸ್ ಪಟ್ಟಿ ಬಿಡುಗಡೆ: ಕಾಂಗ್ರೆಸ್ ಪಕ್ಷವನ್ನು ಹೊರತುಪಡಿಸಿದರೆ ಬಿಜೆಪಿಯಾಗಲಿ, ಜೆಡಿಎಸ್ ಆಗಲಿ ಸೋಮವಾರ ಪಟ್ಟಿ ಸಾರ್ವಜನಿಕವಾಗಿ ಬಿಡುಗಡೆ ಮಾಡಿಲ್ಲ. ಕಾಂಗ್ರೆಸ್ ಪಕ್ಷವು ಮಾಜಿ ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಮತ್ತು ನಾಗರಾಜ್ ಯಾದವ್ ಅವರಿಗೆ ಟಿಕೆಟ್ ನೀಡಿದ್ದು ಇಬ್ಬರೂ ಅಭ್ಯರ್ಥಿಗಳಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸದಾಶಿವನಗರದ ತಮ್ಮ ನಿವಾಸದಲ್ಲಿ ಸೋಮವಾರ ರಾತ್ರಿ ಬಿ ಫಾರಂ ಸಹ ವಿತರಣೆ ಮಾಡಿದರು.