ಬೆಂಗಳೂರು :ಬೆಂಗಳೂರು ಮಹಾನಗರದ ಭವಿಷ್ಯದ ಜಲಸಂಕಷ್ಟ ತಪ್ಪಿಸಲು ಮೇಕೆದಾಟು ಯೋಜನೆ ಜಾರಿ ಮಾಡಲು ಬಿಜೆಪಿ ಆಗ್ರಹಿಸಿದೆ. ಈ ಸಂಬಂಧ ಇಂದು ಬಿಜೆಪಿ ನಿಯೋಗವು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಚೇರ್ಮನ್ ಅವರಿಗೆ ಮನವಿ ಸಲ್ಲಿಸುವ ಮೂಲಕ ಒತ್ತಾಯಿಸಿತು.
ಕೆ ಜಿ ರಸ್ತೆಯಲ್ಲಿರುವ ಕಾವೇರಿ ಭವನದಲ್ಲಿ ಜಲ ಮಂಡಳಿ ಎದುರು ಬಿಜೆಪಿ ಪ್ರತಿಭಟನೆ ನಡೆಸಿತು. ನಂತರ ಅಧ್ಯಕ್ಷರನ್ನು ಭೇಟಿಯಾದ ಬಿಜೆಪಿ ನಿಯೋಗ, ಮುಂಬರುವ ದಿನಗಳಲ್ಲಿ ಬೆಂಗಳೂರು ಮಹಾನಗರಕ್ಕೆ ಉದ್ಭವಿಸುವ ನೀರಿನ ಸಮಸ್ಯೆ ಬಗ್ಗೆ ಗಮನ ಸೆಳೆಯಿತು. ಬೆಂಗಳೂರು ನಗರವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವ ಪ್ರಮುಖ ನಗರವಾಗಿದೆ. ಇಲ್ಲಿನ ಜಲಸಂಕಷ್ಟ ಸಾಧ್ಯತೆಯನ್ನು ಮನಗಂಡು ಮೇಕೆದಾಟು ಅಣೆಕಟ್ಟು ಯೋಜನೆಯನ್ನು ಅನುಷ್ಠಾನ ಮಾಡುವಂತೆ ಒತ್ತಾಯಿಸಿತು.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಚೇರ್ಮನ್ ಅವರಿಗೆ ಮನವಿ ಸಲ್ಲಿಸಿದ ಬಿಜೆಪಿ ನಿಯೋಗ ರಾಜ್ಯ ಸರ್ಕಾರವು ಪ್ರಸ್ತುತ ದಿನಗಳಲ್ಲಿ ನೀರಿನ ಒಳ ಹರಿವನ್ನು ಪರಿಗಣಿಸದೆ ತಮಿಳುನಾಡಿಗೆ ನೀರನ್ನು ಬಿಡುಗಡೆ ಮಾಡಿ ರಾಜ್ಯದ ಹಿತಾಸಕ್ತಿಗೆ ಧಕ್ಕೆ ಉಂಟು ಮಾಡಿದೆ. ಇದರಿಂದ ರಾಜ್ಯದ ರೈತರಿಗೆ ಧಕ್ಕೆಯಾಗುವುದಲ್ಲದೆ ರಾಜ್ಯದ ರಾಜಧಾನಿ ಬೆಂಗಳೂರಿಗೆ, ಎಲ್ಲಾ ಜಿಲ್ಲೆಗಳ ನಗರಗಳ ಜನತೆಗೆ ಕುಡಿಯುವ ನೀರಿಗೂ ಸಮಸ್ಯೆಯಾಗಿದೆ. ಕಾವೇರಿ ನ್ಯಾಯಾಧಿಕರಣದ ಅಂತಿಮ ತೀರ್ಪು ಹಾಗೂ ಸರ್ವೋಚ್ಚ ನ್ಯಾಯಾಲಯದ ಮಾರ್ಪಡಿಸಿದ ಆದೇಶದನ್ವಯ ಕಾವೇರಿ ನದಿಗೆ ಅಡ್ಡಲಾಗಿ ಕರ್ನಾಟಕ ರಾಜ್ಯವು ತನ್ನ ಗಡಿಯ ಒಳ ಭಾಗದಲ್ಲಿ ಮೇಕೆದಾಟು ಅಣೆಕಟ್ಟು ಯೋಜನೆಯನ್ನು ಕೈಗೊಳ್ಳಲು ಅವಕಾಶವಿದೆ.
ಕರ್ನಾಟಕ ರಾಜ್ಯವು ಮೇಕೆದಾಟು ಯೋಜನೆಯ ಪೂರ್ವ ಸಾಧ್ಯತಾ ವರದಿ (ಪ್ರಿ ಫಿಸಿಬಿಲಿಟಿ ರಿಪೋರ್ಟ್) ಅನ್ನು ದಿನಾಂಕ 4-8-2018 ರಂದು ಕೇಂದ್ರ ಜಲ ಆಯೋಗಕ್ಕೆ ಸದರಿ ನಮ್ಮ ಪ್ರಸ್ತಾವನೆಯನ್ನು ಪರಿಗಣಿಸಿ, ಕೇಂದ್ರ ಜಲ ಆಯೋಗವು ದಿನಾಂಕ 22-11-2018 ರಂದು ವಿವರವಾದ ಯೋಜನಾ ವರದಿಯನ್ನು ತಯಾರಿಸಲು ಅನುಮತಿ ಸಹ ನೀಡಿತ್ತು ಎಂದು ಗಮನ ಸೆಳೆಯಿತು.
ಕೇಂದ್ರ ಜಲ ಆಯೋಗದಿಂದ ಪೂರ್ವ ಸಾಧ್ಯತೆ ವರದಿಗೆ ಅನುಮತಿ ದೊರೆತ ನಂತರ 9,000 ಕೋಟಿ ಮೊತ್ತದ ವಿವರವಾದ ಯೋಜನಾ ವರದಿಯನ್ನು ದಿನಾಂಕ 18-1-2019 ರಂದು ಸಲ್ಲಿಸಲಾಗಿದೆ. ಈ ಎಲ್ಲಾ ಕಾನೂನಾತ್ಮಕ ಅಂಶಗಳು ಕರ್ನಾಟಕದ ಪರವಾಗಿ ಇದ್ದರೂ ಸಹ, ರಾಜ್ಯ ಸರ್ಕಾರವು ತನ್ನ ಇಚ್ಛಾಶಕ್ತಿಯನ್ನು ಮರೆತು ಮೇಕೆದಾಟು ಯೋಜನೆಯನ್ನು ರಾಜಕೀಯಗೊಳಿಸಲು ಹೊರಟಿದೆ ಎಂದು ಮನವಿಯಲ್ಲಿ ಬಿಜೆಪಿ ನಿಯೋಗ ಉಲ್ಲೇಖಿಸಿದೆ.
ಬೆಂಗಳೂರು ಮಹಾನಗರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಆದ ಹಿರಿಮೆ ಗರಿಮೆಗಳಿಗೆ ಪ್ರಸಿದ್ಧಿಯಾಗಿದೆ. ಒಂದು ಕಾಲದಲ್ಲಿ ಸಾರ್ವಜನಿಕ ಉದ್ದಿಮೆಗಳಿಗೆ (ಪಬ್ಲಿಕ್ ಸೆಕ್ಟರ್) ಹೆಸರುವಾಸಿಯಾಗಿದ್ದ ಬೆಂಗಳೂರು ಮಹಾನಗರವು ಇಂದು ಸಿಲಿಕಾನ್ ವ್ಯಾಲಿಯಾಗಿದೆ. ಜಗತ್ತಿನಲ್ಲಿ ಅತಿ ಹೆಚ್ಚು ಸಾಫ್ಟ್ವೇರ್ ರಫ್ತು ಮಾಡುವ ಮಹಾನಗರವಾಗಿದೆ. ಒಂದು ಟರ್ಮಿನಲ್ ನಿಂದ ಪ್ರಾರಂಭವಾದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಇಂದು ಎರಡು ಟರ್ಮಿನಲ್ ಹೊಂದಿದೆ. ಜಗತ್ತಿನ ನಾನಾ ಮೂಲೆಗಳಿಂದ ವಿದೇಶಿ ಗಣ್ಯರು ಮತ್ತು ಉದ್ಯಮಿಗಳು ಬೆಂಗಳೂರಿನಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಬೆಂಗಳೂರು ಮಹಾನಗರವು ವಿದೇಶಿ ನೇರ ಹೂಡಿಕೆಗೆ (ಎಫ್‍ಡಿಐ) ಹೆಸರುವಾಸಿಯಾಗಿದೆ ಎಂದು ವಿವರಿಸಿತು.
ಬೆಂಗಳೂರು ಮಹಾನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಮುಂದಿನ ದಿನಗಳಲ್ಲಿ ಬಲವಾಗಿ ಕಾಡುವ ಸಂಭವವಿದೆ. ತಕ್ಷಣವೇ ಬೆಂಗಳೂರು ಜಲ ಮಂಡಳಿಯು ಸಿಡಬ್ಲ್ಯುಎಂಎಗೆ ಪತ್ರ ಬರೆದು, ಮೇಕೆದಾಟು ಯೋಜನೆಯನ್ನು ಜರೂರಾಗಿ ಮಾಡಲು ಮೇಕೆದಾಟು ಯೋಜನೆಗೆ ತಮಿಳುನಾಡು ಸರ್ಕಾರ ತೆಗೆದಿರುವ ತಕರಾರು ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡಿ, ಮೇಕೆದಾಟುವಿನಲ್ಲಿ ವಿದ್ಯುತ್ ಮತ್ತು ಕುಡಿಯುವ ನೀರಿಗಾಗಿ ಸಮತೋಲಿತ ಜಲಾಶಯ (ಬ್ಯಾಲೆನ್ಸಿಂಗ್ ರಿಸರ್ವ್ ಡ್ಯಾಮ್ ನಿರ್ಮಾಣ ಮಾಡಲು) ಅನುಮತಿ ನೀಡುವಂತೆ ಒತ್ತಾಯಿಸಬೇಕೆಂದು ಕೋರಿತು.
ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಸಚಿವ ಸಿ ಟಿ ರವಿ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅಶ್ವತ್ಥ್ನಾರಾಯಣ, ಸಿದ್ದರಾಜು, ರಾಜ್ಯ ಕಾರ್ಯದರ್ಶಿ ಜಗದೀಶ ಹಿರೇಮನಿ, ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ಒಬಿಸಿ ಮೋರ್ಚಾ ಅಧ್ಯಕ್ಷ ನೆ.ಲ ನರೇಂದ್ರಬಾಬು, ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಶ್ರೀಮತಿ ಗೀತಾ ವಿವೇಕಾನಂದ, ರಾಜ್ಯ ಯುವ ಮೋರ್ಚಾ ಅಧ್ಯಕ್ಷ ಡಾ. ಸಂದೀಪ್, ಬೆಂಗಳೂರು ಉತ್ತರ ಜಿಲ್ಲಾ ಅಧ್ಯಕ್ಷ ನಾರಾಯಣಗೌಡ ಮತ್ತಿತರರು ಈ ನಿಯೋಗದಲ್ಲಿದ್ದರು.
ಬೆಂಗಳೂರಿನ ಜಲಸಂಕಷ್ಟ ತಪ್ಪಿಸಲು ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಬಿಜೆಪಿ ಆಗ್ರಹ ಕಾಂಗ್ರೆಸ್ ಸರ್ಕಾರ ರಾಜ್ಯಕ್ಕೆ ಮಾರಿ :ಕಾವೇರಿ ನೀರಿನ ವಿಚಾರದಲ್ಲಿ ಕರ್ನಾಟಕದ ಕಾಂಗ್ರೆಸ್ ಸರ್ಕಾರ ರಾಜ್ಯಕ್ಕೆ ಮಾರಿ; ತಮಿಳುನಾಡಿಗೆ ಉಪಕಾರಿಯಾಗಿ ನಡೆದುಕೊಂಡಿದೆ ಎಂದು ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಸಚಿವ ಸಿ ಟಿ ರವಿ ಟೀಕಿಸಿದರು.
ಬೆಂಗಳೂರು ಮಹಾನಗರದ ಭವಿಷ್ಯದ ಜಲಸಂಕಷ್ಟ ತಪ್ಪಿಸಲು ಮೇಕೆದಾಟು ಯೋಜನೆ ಜಾರಿ ಮಾಡಲು ಆಗ್ರಹಿಸಿ ಬಿಜೆಪಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಸೋನಿಯಾ ಗಾಂಧಿಯವರ ಕೈಚಳಕ ಮತ್ತು ಸೂಚನೆಯಿಂದ ಐಎನ್‍ಡಿಐಎ ನಾಯಕರನ್ನು ಖುಷಿಪಡಿಸುವ ಉದ್ದೇಶದಿಂದ ಸಿದ್ದರಾಮಯ್ಯ- ಡಿ ಕೆ ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರವು ರಾಜ್ಯದ ಹಿತವನ್ನು ಸಂಪೂರ್ಣ ಕಡೆಗಣಿಸಿದೆ. ತಮಿಳುನಾಡಿನ ಹಿತ ಕಾಪಾಡಲು ಮುಂದಾಗಿದೆ ಎಂದು ಆರೋಪಿಸಿದರು.
ನಮಗೆ ಕುಡಿಯುವ ನೀರಿಗೂ ನೀರಿಲ್ಲ. ನಮ್ಮ ರೈತರ ಬೆಳೆಗಳಿಗೂ ನೀರಿಲ್ಲ. ಬೇಲಿಯೇ ಹೊಲವ ಮೇಯ್ದೊಡೆ ಎಂಬಂತೆ ಸರ್ಕಾರವೇ ಹಫ್ತಾ ವಸೂಲಿಗೆ ಇಳಿದರೆ ದೂರು ಯಾರಿಗೆ ಕೊಡೋಣ ಎಂದು ಅವರು ಪ್ರಶ್ನಿಸಿದರು. ನಾಳೆ ನಡೆಯುವ ಹೋರಾಟಕ್ಕೆ ಬಿಜೆಪಿ ಪೂರ್ಣ ಪ್ರಮಾಣದ ಬೆಂಬಲ ಕೊಡಲಿದೆ. ನಮ್ಮ ನೀರು, ನಮ್ಮ ನಾಡನ್ನು ಉಳಿಸಿಕೊಳ್ಳಲು ಹೋರಾಟಕ್ಕೆ ಬೆಂಬಲ ನೀಡಿದ್ದೇವೆ ಎಂದು ಅವರು ಹೇಳಿದರು. ಮುಂದಾಲೋಚನೆ ಇಲ್ಲದೆ ನೀರು ಬಿಡುತ್ತಿರುವುದು ರಾಜ್ಯದ ಜನರ ದುರ್ದೈವ ಎಂದು ಸಿ ಟಿ ರವಿ ಅವರು ಆಕ್ಷೇಪಿಸಿದರು. ತಕ್ಷಣವೇ ನೀರು ಬಿಡುವುದನ್ನು ನಿಲ್ಲಿಸಲು ಆಗ್ರಹಿಸಿದರು.
ಬಳಿಕ ಬಿಜೆಪಿ ನಿಯೋಗವು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಚೇರ್ಮನ್ ಅವರಿಗೆ ಮನವಿ ಸಲ್ಲಿಸಿ, ಮೇಕೆದಾಟು ಯೋಜನೆ ಅನುಷ್ಠಾನ ಮಾಡಲು ಒತ್ತಾಯಿಸಿತು.
ಇದನ್ನೂ ಓದಿ:ಕಾವೇರಿ ಕಿಚ್ಚು: ಎರಡು ಬಣಗಳ ನಡುವೆ ಮೂಡದ ಒಮ್ಮತ... ನಾಳೆ ಬೆಂಗಳೂರು, ಸೆ.29ಕ್ಕೆ ಕರ್ನಾಟಕ ಬಂದ್