ಬೆಂಗಳೂರು: ಯಲಹಂಕದಲ್ಲಿ ದಲಿತ ಮಹಿಳೆ ಮೇಲೆ ದೌರ್ಜನ್ಯ ಮಾಡಿದ ಸುಧಾಕರ್ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಒತ್ತಾಯಿಸಿದರು. ಯಲಹಂಕದಲ್ಲಿ ಸಚಿವರಿಂದ ದೌರ್ಜನ್ಯಕ್ಕೊಳಗಾದ ದಲಿತ ಮಹಿಳೆ ಮುನಿಯಮ್ಮರನ್ನು ಬಿಜೆಪಿ ನಿಯೋಗವು ಇಂದು ಭೇಟಿ ಮಾಡಿತು. ಕುಟುಂಬದ ಅಹವಾಲು ಆಲಿಸಿತು. ನಂತರ ಮಾತನಾಡಿದ ಮಾಜಿ ಡಿಸಿಎಂ ಕಾರಜೋಳ, ದಲಿತರ ಆಸ್ತಿ ಕಬಳಿಕೆಗೆ ಸಚಿವರೇ ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ. ಸ್ವಾತಂತ್ರ್ಯೋತ್ತರದ 75 ವರ್ಷಗಳ ಆಡಳಿತದಲ್ಲಿ ಇದೊಂದು ಕಪ್ಪುಚುಕ್ಕೆ ಎಂದು ಆರೋಪಿಸಿದರು.
ಸುಧಾಕರ್ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು. ದಲಿತರ ಆಸ್ತಿ ಕಬಳಿಸಿ ದೌರ್ಜನ್ಯ ಮಾಡಿದ್ದು ಖಂಡನೀಯ. ರಸ್ತೆಗಳನ್ನು ಬಂದ್ ಮಾಡಿದ್ದು ಆಕ್ಷೇಪಾರ್ಹ. ಈ ಸರಕಾರ ದಲಿತರನ್ನು ರಕ್ಷಿಸಲು ಬಂದಿದೆಯೇ ಅಥವಾ ದೌರ್ಜನ್ಯ ಮಾಡಲು ಬಂದಿದೆಯೇ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು. ಒಳಗೆ ಸೇರಿಕೊಂಡ ಗೂಂಡಾಗಳನ್ನು ಬಂಧಿಸಿ ಸಂತ್ರಸ್ತರಿಗೆ ರಕ್ಷಣೆ ಕೊಡಿಸಲು ಅವರು ಒತ್ತಾಯಿಸಿದರು.
ಬಳಿಕ ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಮಾಧ್ಯಮದವರು ಇಲ್ಲಿನ ವಿದ್ಯಮಾನಗಳನ್ನು ಗಮನಿಸಿದ್ದೀರಿ. ಬಡವರಿಗೆ ನ್ಯಾಯ ಸಿಗಬೇಕೆಂದು ಆಗ್ರಹಿಸಲು ಮತ್ತು ತೊಂದರೆ ಮಾಡಿದ್ದರೆ ಶಿಕ್ಷೆ ವಿಧಿಸಲು ಆಗ್ರಹಿಸಲು ನಾವು ಬಂದಿದ್ದೇವೆ. 2019ರಲ್ಲಿ ಇಲ್ಲಿಗೆ ಸುಧಾಕರ್ ಅವರು ಬಂದಿದ್ದರು. ಇದನ್ನು ಅಭಿವೃದ್ಧಿ ಮಾಡಲು ಒಪ್ಪಿಗೆ ಪತ್ರ ಕೇಳಿದ್ದರು. ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಹೋದಾಗ 5.70 ಕೋಟಿಗೆ ಜಾಗ ಖರೀದಿ ಒಪ್ಪಂದ ಮಾಡಿಕೊಂಡಿದ್ದರು ಎಂದರು.
4.30 ಕೋಟಿ ನಗದು ಕೊಟ್ಟಿದ್ದಾಗಿ ಬರೆಸಿಕೊಂಡರು. ಇವರು ಕೊಟ್ಟ 1.40 ಕೋಟಿಯ ಚೆಕ್‍ಗಳು ಬೌನ್ಸ್ ಆಗಿದ್ದವು. ಅಗ್ರಿಮೆಂಟ್ ರದ್ದತಿಗೆ ಹೋದ ಬಳಿಕ ವಿಕ್ರಯ ಚೀಟಿ ಕುರಿತು ತಿಳಿಯಿತು. ಡಿ.ಸುಧಾಕರ್ ಈ ಜಾಗದ ಮೇಲೆ 25 ಕೋಟಿ ಸಾಲವನ್ನು ಅವರದೇ ಸೊಸೈಟಿಯಿಂದ ಪಡೆದಿದ್ದಾರೆ. ಇಷ್ಟೆಲ್ಲ ಆದ ಮೇಲೆ ಅಧಿಕಾರಕ್ಕೆ ಬಂದಿದ್ದು, ಕೇಸುಗಳು ಬಾಕಿ ಇರುವಾಗಲೇ ಖಾತೆಯನ್ನು ತಮ್ಮ ಹೆಸರಿಗೆ ಮಾಡಿಸಿಕೊಂಡಿದ್ದಾರೆ. ಇವರನ್ನು ಎತ್ತಂಗಡಿ ಮಾಡಲು ಸಚಿವರು ಮುಂದಾಗಿದ್ದಾರೆ ಎಂದು ದೂರಿದರು.
ಇದೊಂದು ವಂಚನೆ ಪ್ರಕರಣ. ನ್ಯಾಯ ಕೋರಿ ಇಲ್ಲಿ ಬಂದಿದ್ದೇವೆ. ಇದರಲ್ಲಿ ಸಚಿವರಿದ್ದಾರೆ ಎಂದರೆ ಇದರ ಹಿಂದೆ ಸರಕಾರ ಇರುವುದು ಸ್ಪಷ್ಟ. ಆದ್ದರಿಂದ ತಕ್ಷಣವೇ ಈ ಸಚಿವರನ್ನು ಸಂಪುಟದಿಂದ ಹೊರ ಹಾಕಬೇಕು. ಇಲ್ಲವಾದರೆ ಅವರೇ ರಾಜೀನಾಮೆ ಕೊಡಬೇಕು ಎಂದರಲ್ಲದೇ, ಸರಕಾರ ಈ ಕುರಿತು ಕೂಲಂಕಷ ಪರಿಶೀಲನೆ ನಡೆಸಬೇಕು. ಶೆಡ್‍ಗಳನ್ನು ಒಡೆಯಲಾಗಿದೆ. ಪೊಲೀಸರು ಏನು ಕ್ರಮ ಕೈಗೊಳ್ಳುತ್ತಿದ್ದಾರೆ? ಎಂದು ಪ್ರಶ್ನಿಸಿದರು.