ಬೆಂಗಳೂರು: ರಾಜ್ಯದಲ್ಲಿನ ಬರ ಪರಿಸ್ಥಿತಿಯನ್ನು ಸರ್ಕಾರ ಲಘುವಾಗಿ ಪರಿಗಣಿಸಿದೆ ಎಂದು ಆರೋಪಿಸಿರುವ ಬಿಜೆಪಿ ರಾಜಭವನದ ಕದ ತಟ್ಟಿದ್ದು, ಸರ್ಕಾರದ ರೈತ ಮತ್ತು ಕೃಷಿ ಕಾರ್ಮಿಕ ವಿರೋಧಿ ನೀತಿಗಳ ಬಗ್ಗೆ ದೂರು ನೀಡಿದೆ. ಕೂಡಲೇ ಬರ ಪರಿಹಾರದ ಹಣವನ್ನು ರೈತರಿಗೆ ಬಿಡುಗಡೆ ಮಾಡಿ ರೈತ ಸಮೂಹವನ್ನು ಉಳಿಸುವಂತೆ ಮನವಿ ಮಾಡಿದೆ.
ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್ ಅಶೋಕ್ ರಾಜ್ಯಪಾಲರನ್ನು ಭೇಟಿಯಾಗಿ ರಾಜ್ಯ ಸರಕಾರದ ರೈತ ಮತ್ತು ಕೃಷಿ ಕಾರ್ಮಿಕ ವಿರೋಧಿ ನೀತಿಗಳ ಬಗ್ಗೆ ದೂರು ನೀಡಿದರು. ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ. ಸದಾನಂದಗೌಡ, ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ಮುಖಂಡರನ್ನೊಳಗೊಂಡ ನಿಯೋಗವು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾಗಿ ಪಕ್ಷ ನಡೆಸಿದ ರಾಜ್ಯದಲ್ಲಿನ ಬರ ಅಧ್ಯಯನದ ಕುರಿತ ವರದಿ ನೀಡಿದರು. ರೈತರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸದಿರುವ ಕುರಿತು ದೂರು ನೀಡಿ ಬರ ಪರಿಹಾರದ ಹಣ ಬಿಡುಗಡೆಗೆ ನಿರ್ದೇಶನ ನೀಡುವಂತೆ ಮನವಿ ಮಾಡಿದರು.
ರಾಜ್ಯಪಾಲರ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ರಾಜ್ಯದಲ್ಲಿ ಬೇಜವಾಬ್ದಾರಿಯುತ ಸರ್ಕಾರವಿದೆ. 600 -700 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರ ಅವರ ಕಡೆ ತಿರುಗಿ ನೋಡುತ್ತಿಲ್ಲ. ಅಧಿಕಾರಿಗಳು ಭೇಟಿ ಮಾಡಿಲ್ಲ. ಸಚಿವರು ಹೋಗಿಲ್ಲ. ಉತ್ತರ ಕರ್ನಾಟಕದಲ್ಲಿ ಬರ ಬಂದು ಜನರೆಲ್ಲ ಗುಳೆ ಹೋಗುತ್ತಿದ್ದಾರೆ. ಬರ ಬಂದು ಇಷ್ಟು ದಿನ ಆದರೂ ನಯಾಪೈಸೆ ಹಣ ಬಿಡುಗಡೆ ಮಾಡಿಲ್ಲ. 2 ಸಾವಿರ ಹಣ ಕೊಡ್ತೇವಿ ಅಂದರು. ಅದನ್ನೂ ಕೊಟ್ಟಿಲ್ಲ. ರೈತರು ದಿಕ್ಕು ತೋಚದಂತಾಗಿದ್ದಾರೆ ಎಂದು ಹೇಳಿದರು.