ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪರಾಜಿತ ಅಭ್ಯರ್ಥಿಗಳ ಜೊತೆ ಇಂದು ಪಕ್ಷದ ಕಚೇರಿಯಲ್ಲಿ ಪರಾಮರ್ಶೆ ಸಭೆ ನಡೆಯಿತು. ರಾಜ್ಯ ಮುಖಂಡರ ಎದುರು ಕೆಲ ಪರಾಜಿತರು ಪಕ್ಷದ ನೀತಿ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯದ ಪ್ರಭಾರಿಗಳು ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ , ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹಾಗು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಬಿಜೆಪಿ ಅಭ್ಯರ್ಥಿಗಳು ಸೋಲಿಗೆ ಕಾರಣಗಳನ್ನು ಬಿಚ್ಚಿಟ್ಟರು. ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳು, ಒಳ ಮೀಸಲಾತಿ ಹಂಚಿಕೆಯ ಒಳೇಟು, 40% ಕಮೀಷನ್ ಆರೋಪ ಸೇರಿ ಕೆಲ ಭ್ರಷ್ಟಾಚಾರ ಆರೋಪ ಪ್ರಕರಣಗಳು, ಆಡಳಿತ ವಿರೋಧಿ ಅಲೆ, ಪಕ್ಷ ಸಂಘಟನೆಯಲ್ಲಿ ನಿರ್ಲಕ್ಷ್ಯ, ಕಾರ್ಯಕರ್ತರಲ್ಲಿದ್ದ ಅತೃಪ್ತಿ, ಆಕ್ರೋಶ, ಟಿಕೆಟ್ ಹಂಚಿಕೆಯಲ್ಲಿ ವಿಳಂಬ, ಸ್ವಪಕ್ಷೀಯರ ಪಕ್ಷ ವಿರೋಧಿ ಕೆಲಸ, ಪಿತೂರಿ, ಬಿಜೆಪಿ ಬಂಡಾಯ ಅಭ್ಯರ್ಥಿಗಳ ಎಫೆಕ್ಟ್, ಹೈಕಮಾಂಡ್ ನಾಯಕರ ಮೇಲೆ ಹೆಚ್ಚಿನ ಅವಲಂಬನೆ, ಲಿಂಗಾಯತ ಸಮುದಾಯದ ಅಸಮಾಧಾನದ ಬಗ್ಗೆ ಚರ್ಚೆ ನಡೆಸಲಾಯಿತು.
ಎಂ.ಟಿ.ಬಿ ನಾಗರಾಜ್ ಗರಂ :ಈ ಸಭೆಯಲ್ಲಿ ಬಿಜೆಪಿ ನಾಯಕರ ವಿರುದ್ಧವೇ ಎಂಟಿಬಿ ನಾಗರಾಜ್ ಗರಂ ಆದರು. ತಮ್ಮ ಡಬಲ್ ಸೋಲಿನ ಬಗ್ಗೆ ಸಭೆಯಲ್ಲಿ ಎಂಟಿಬಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ನಲ್ಲಿದ್ದಾಗ ನಾನು ಮೂರು ಸಲ ಗೆದ್ದಿದ್ದೆ. ಬಿಜೆಪಿಗೆ ಬಂದ ಮೇಲೆ ಎರಡೂ ಸಲ ಸೋಲಬೇಕಾಯ್ತು ಎಂದು ಅಸಮಾಧಾನ ಹೊರಹಾಕಿದರು. ನಾನು ಬಿಜೆಪಿಗೆ ಬಂದಿದ್ದು ಹಣದ, ಸಚಿವ ಸ್ಥಾನದ, ಅಧಿಕಾರದ ಆಮಿಷಕ್ಕಾಗಿ ಅಲ್ಲ ಎಂದರು. ಮಾಜಿ ಸಚಿವ ಡಾ.ಕೆ.ಸುಧಾಕರ್ ಮೇಲೂ ಸಿಟ್ಟಾದ ಎಂಟಿಬಿ, ಸುಧಾಕರ್‌ನಿಂದಾಗಿಯೇ ನಾನು ಸೋತಿದ್ದು, ಸುಧಾಕರ್ ತಾವೂ ಸೋತು, ನಮ್ಮನ್ನೂ ಸೋಲಿಸಿದರು. ನಾನು ಮತ್ತು ಚಿಂತಾಮಣಿ ಅಭ್ಯರ್ಥಿ ಸೋಲಲು ಸುಧಾಕರ್ ಸಹ ಕಾರಣ ಎಂದು ಆರೋಪಿಸಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್‌ನವರು ಹತ್ತು ಕೆಜಿ ಅಕ್ಕಿ ಕೊಡ್ತಿದ್ರು. ನೀವು ಆರು ಕೆಜಿ ಅಕ್ಕಿ ಕೊಟ್ರಿ, ಬಡವರು ಇದರಿಂದ ಸಿಟ್ಟಾಗಿದ್ರು. ನನ್ನ ಕ್ಷೇತ್ರದಲ್ಲಿ ಹತ್ತು ಕೆಜಿ ಉಚಿತ ಅಕ್ಕಿ ಗ್ಯಾರಂಟಿಯೂ ನನ್ನ ಸೋಲಿಗೆ ಕಾರಣ ಎಂದು ಆಕ್ರೋಶ ಹೊರಹಾಕಿದ್ದಾರೆ.
ಸುಧಾಕರ್, ಮಾಧುಸ್ವಾಮಿ, ಸೋಮಣ್ಣ ಗೈರು :ಪರಾಭವಗೊಂಡ ಅಭ್ಯರ್ಥಿಗಳ ಸಭೆಗೆ ವಿ.ಸೋಮಣ್ಣ, ಡಾ.ಕೆ.ಸುಧಾಕರ್, ಜೆ.ಸಿ.ಮಾಧುಸ್ವಾಮಿ ಹಾಗೂ ರೇಣುಕಾಚಾರ್ಯ ಗೈರಾಗಿರುವುದು ಅಚ್ಚರಿ ಮೂಡಿಸಿತು. ಸೋಲಿನಿಂದ ಮುಜುಗರಕ್ಕೊಳಗಾಗಿರುವ ಈ ಪ್ರಮುಖ ನಾಯಕರು ಸಭೆಗೆ ಹಾಜರಾಗಿಲ್ಲ. ಉಳಿದಂತೆ ಬಹುತೇಕ ಪರಾಜಿತ ಅಭ್ಯರ್ಥಿಗಳು ಸಭೆಯಲ್ಲಿ ಭಾಗಿಯಾಗಿ ತಮ್ಮ ಅಭಿಪ್ರಾಯ ಮುಂದಿಟ್ಟರು. ಪರಾಜಿತರಾದ ಬಿ.ಸಿ.ನಾಗೇಶ್, ಎಂಟಿಬಿ ನಾಗರಾಜ್, ಸಿ.ಪಿ.ಯೋಗೇಶ್ವರ್, ಪ್ರೀತಮ್ ಗೌಡ, ವರ್ತೂರು ಪ್ರಕಾಶ್, ಮುರುಗೇಶ್ ನಿರಾಣಿ , ನಾರಾಯಣ್ ಗೌಡ, ಬಿ.ಸಿ ಪಾಟೀಲ್, ಜೀವರಾಜ್, ವಿಜಯಶಂಕರ್, ಮಹೇಶ್ ಕುಮಠಳ್ಳಿ, ಪಿ.ರಾಜೀವ್, ರಾಜ್ಕುಮಾರ್ ಪಾಟೀಲ್ ತೇಲ್ಕೂರು, ರೂಪಾಲಿ ನಾಯಕ್, ಉಮೇಶ್ ಶೆಟ್ಟಿ, ಪದ್ಮನಾಭ ರೆಡ್ಡಿ, ಕುಮಾರ ಬಂಗಾರಪ್ಪ, ಹರತಾಳು ಹಾಲಪ್ಪ, ನಾಗೇಂದ್ರ, ಹಾಲಪ್ಪ ಆಚಾರ್, ತಮ್ಮೇಶ್ ಗೌಡ, ಸಪ್ತಗಿರಿ ಗೌಡ, ಪೂರ್ಣಿಮಾ ಶ್ರೀನಿವಾಸ್ , ಅಪ್ಪಚ್ಚು ರಂಜನ್, ಭಾಸ್ಕರ್ ರಾವ್, ಗೋವಿಂದಕಾರಜೋಳ ಸುನಿಲ್ ನಾಯಕ್, ಹರ್ಷವರ್ಧನ್ ಸೇರಿ ಹಲವರು ಸಭೆಯಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ :Basavaraja Bommai: ಲೋಕಸಭೆ ಚುನಾವಣೆಗೆ ಶಾಸಕರಿಗೆ ಗುರಿ ನೀಡುವ ಕುರಿತು ಚರ್ಚೆ- ಬಸವರಾಜ ಬೊಮ್ಮಾಯಿ