ಬೆಂಗಳೂರು:ವಂಶಪಾರಂಪರ್ಯ ರಾಜಕಾರಣವನ್ನು ಕಟುವಾಗಿ ವಿರೋಧಿಸುತ್ತಲೇ ಬಂದಿರುವ ಬಿಜೆಪಿ ಹೈಕಮಾಂಡ್ ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಆ ನೀತಿಯಲ್ಲಿ ರಾಜಿ ಮಾಡಿಕೊಳ್ಳುತ್ತಿದೆಯೇ ಎನ್ನುವ ಅನುಮಾನ ಇತ್ತೀಚೆಗಿನ ನಿರ್ಧಾರಗಳಿಂದ ವ್ಯಕ್ತವಾಗತೊಡಗಿದೆ.
ರಾಜ್ಯದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಪ್ರಚಾರ ಸಂದರ್ಭಗಳಲ್ಲಿ ಕುಟುಂಬ ರಾಜಕಾರಣಕ್ಕಾಗಿ ಜಾತ್ಯತೀತ ಜನತಾದಳ ಮತ್ತು ಕಾಂಗ್ರೆಸ್ ಪಕ್ಷವನ್ನು ಕಟುವಾಗಿ ಟೀಕಿಸುತ್ತಿದ್ದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಮತ್ತು ಬಿಜೆಪಿಯ ಇತರ ರಾಷ್ಟ್ರಮಟ್ಟದ ನಾಯಕರುಗಳು ಫ್ಯಾಮಿಲಿ ಪಾಲಿಟಿಕ್ಸ್ಗೆ ಜೈ ಎಂದಂತಿದೆ.
ಬರಲಿರುವ ಲೋಕಸಭೆ ಚುನಾವಣೆಯಲ್ಲಿ ಕುಟುಂಬ ರಾಜಕಾರಣದ ಪಕ್ಷ ಎನ್ನುವ ಆರೋಪಕ್ಕೆ ಒಳಗಾಗಿರುವ ಪ್ರಾದೇಶಿಕ ಪಕ್ಷ ಜಾತ್ಯತೀತ ಜನತಾದಳದ ಜೊತೆ ಬಿಜೆಪಿ ಹೈಕಮಾಂಡ್ ಮೈತ್ರಿ ಮಾಡಿಕೊಂಡಿರುವ ಬೆಳವಣಿಗೆಯು ಬಿಜೆಪಿಯ ಕುಟುಂಬ ರಾಜಕಾರಣದ ವಿರೋಧಿ ನಿಲುವನ್ನು ಪ್ರಶ್ನೆ ಮಾಡುವಂತಿದೆ ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಮತವಾಗಿದೆ. ಜೆಡಿಎಸ್ನಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ರಾಜ್ಯಸಭೆ ಸದಸ್ಯರಾದರೆ, ಅವರ ಹಿರಿಯ ಪುತ್ರ ಹೆಚ್ ಡಿ ರೇವಣ್ಣ ಹಾಸನ ಜಿಲ್ಲೆಯ ಹೊಳೆನರಸೀಪುರದ ಶಾಸಕರಾಗಿದ್ದಾರೆ. ಮತ್ತೊಬ್ಬ ಪುತ್ರ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಚನ್ನಪಟ್ಟಣ ಕ್ಷೇತ್ರದ ಶಾಸಕರಾಗಿದ್ದಾರೆ.
ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಕ್ಕಳಾದ ಪ್ರಜ್ವಲ್ ರೇವಣ್ಣ ಹಾಸನ ಕ್ಷೇತ್ರದ ಲೋಕಸಭೆ ಸದಸ್ಯರಾಗಿದ್ದರೆ, ಮತ್ತೊಬ್ಬ ಮೊಮ್ಮಗ ಸೂರಜ್ ರೇವಣ್ಣ ವಿಧಾನಪರಿಷತ್ ಸದಸ್ಯರಾಗಿದ್ದಾರೆ (ಇವರಿಬ್ಬರೂ ಶಾಸಕ ಹೆಚ್ ಡಿ ರೇವಣ್ಣನವರ ಪುತ್ರರು) ಮಾಜಿ ಪ್ರಧಾನಿ ದೇವೇಗೌಡರು, ಮಕ್ಕಳು, ಮೊಮ್ಮಕ್ಕಳಿಗೆ ರಾಜಕೀಯ ಪ್ರಾಧಾನ್ಯತೆ ದೊರೆತಿದ್ದು ಲೋಕಸಭೆ, ರಾಜ್ಯಸಭೆ, ವಿದಾನಸಭೆ ಮತ್ತು ವಿಧಾನಪರಿಷತ್ನಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಕುಡಿಗಳಿವೆ.
ಬಿ ಎಸ್ ಯಡಿಯೂರಪ್ಪನವರ ಜೊತೆ ಶಾಸಕ ಬಿ ವೈ ವಿಜಯೇಂದ್ರ ಕಳೆದ ವಿಧಾನಸಭೆ ಚುನಾವಣೆ ಪ್ರಚಾರದ ಸಂದರ್ಭವೂ ಸೇರಿದಂತೆ ಜೆಡಿಎಸ್ನ್ನು ಕುಟುಂಬ ರಾಜಕಾರಣ ಪಕ್ಷವೆಂದು ಅಪಪ್ರಚಾರ ಮಾಡಿದ್ದ ಬಿಜೆಪಿ ನಾಯಕರುಗಳು ಈಗ ಲೋಕಸಭೆ ಚುನಾವಣೆಯಲ್ಲಿ ಆ ಪಕ್ಷದ ಜೊತೆ ಚುನಾವಣೆ ಹೊಂದಾಣಿಕೆ ಮಾಡಿಕೊಂಡರುವುದು 'ಫ್ಯಾಮಿಲಿ ಪಾಲಿಟಿಕ್ಸ್' ಪ್ರತಿರೋಧಿಸುವ ಬಿಜೆಪಿಯ ನೀತಿಯನ್ನು ವಿಮರ್ಶೆಗೆ ಒಳಪಡಿಸಿದೆ.
ಇದು ಮೈತ್ರಿಯ ಸಂಗತಿಯಾದರೆ.. ಬಿಜೆಪಿ ಹೈಕಮಾಂಡ್ ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಪುತ್ರ ಶಿಕಾರಿಪುರ ಶಾಸಕ ಬಿ ವೈ ವಿಜಯೇಂದ್ರ ಅವರನ್ನು ರಾಜ್ಯ ಬಿಜೆಪಿ ನಾಯಕರನ್ನಾಗಿ ನೇಮಕ ಮಾಡಿರುವ ಕ್ರಮವೂ ಕುಟುಂಬ ರಾಜಕಾರಣಕ್ಕೆ ಪ್ರೋತ್ಸಾಹ ನೀಡಿದಂತೆಯೇ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
ಯಡಿಯೂರಪ್ಪ ಬಿಜೆಪಿ ಪಕ್ಷದಲ್ಲಿ ಶಾಸಕರಾಗಿ, ಉಪ ಮುಖ್ಯಮಂತ್ರಿಗಳಾಗಿ, ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ, ರಾಜ್ಯ ಬಿಜೆಪಿ ಅಧ್ಯಕ್ಷರಾಗಿ, ಲೋಕಸಭೆ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇವರ ಹಿರಿಯ ಪುತ್ರ ಬಿ ವೈ ರಾಘವೇಂದ್ರ ಶಿವಮೊಗ್ಗ ಲೋಕಸಭೆ ಕ್ಷೇತ್ರದ ಹಾಲಿ ಸದಸ್ಯರಾಗಿದ್ದಾರೆ. ಮತ್ತೊಬ್ಬ ಪುತ್ರ ಬಿ ವೈ ವಿಜಯೇಂದ್ರ ಯಡಿಯೂರಪ್ಪ ಅವರ ಉತ್ತರಾಧಿಕಾರಿಯಾಗಿ ಶಿಕಾರಿಪುರ ಕ್ಷೇತ್ರದ ಶಾಸಕರಾಗಿದ್ದಾರೆ. ಕುಟುಂಬ ರಾಜಕಾರಣಕ್ಕೆ ಅವಕಾಶ ನೀಡಬಾರದು ಎನ್ನುವ ಉದ್ದೇಶದಿಂದಲೇ ಈ ಹಿಂದೆ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರನ್ನು ಸಚಿವರನ್ನಾಗಿ ನೇಮಕ ಮಾಡಲು, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲು ಬಿಜೆಪಿಯ ವರಿಷ್ಠರು ನಿರಾಕರಿಸಿದ್ದರು. ಅಷ್ಟೇ ಏಕೆ ವಿಜಯೇಂದ್ರ ಅವರಿಗೆ ಶಿಕಾರಿಪುರದಿಂದ ಸ್ಪರ್ಧೆ ಮಾಡಲು ಟಿಕೆಟ್ ನೀಡುವುದಕ್ಕೂ ಮೀನಮೇಷ ಮಾಡಲಾಗಿತ್ತು. ಯಡಿಯೂರಪ್ಪ ಅವರ ಒತ್ತಡಕ್ಕೆ ಮಣಿದು ಅಂತಿಮವಾಗಿ ವಿಜಯೇಂದ್ರ ಅವರಿಗೆ ಟಿಕೆಟ್ ನೀಡಲಾಗಿತ್ತು.
ಗೋಪಾಲಕೃಷ್ಣ ಬೇಳೂರು ತೀವ್ರ ಖಂಡನೆ: ಬಿಜೆಪಿಯು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿರುವುದು ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ಮಾಜಿ ಸಿಎಂ ಯಡಿಯೂರಪ್ಪ ಮಗನನ್ನು ನೇಮಕ ಮಾಡಿರುವ ಕ್ರಮವನ್ನು ಕಾಂಗ್ರೆಸ್ ಹಿರಿಯ ಶಾಸಕ, ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ತೀವ್ರವಾಗಿ ಖಂಡಿಸಿದ್ದಾರೆ. ಈಟಿವಿ ಭಾರತ ಜೊತೆ ಮಾತನಾಡಿದ ಅವರು, ''ಬಿಜೆಪಿಯು ಕುಟುಂಬ ರಾಜಕಾರಣವನ್ನು ಟೀಕಿಸುವ ಹಕ್ಕನ್ನ ಕಳೆದುಕೊಂಡಿದೆ. ಕಾಂಗ್ರೆಸ್ಗೆ ಗಾಂಧಿ ಕುಟುಂಬ, ಜೆಡಿಎಸ್ ನ್ನು ದೇವೇಗೌಡರ ಫ್ಯಾಮಿಲಿ ಪಾರ್ಟಿ ಎಂದು ಜರಿಯುತ್ತಿದ್ದ ಬಿಜೆಪಿ ತನ್ನ ನೈತಿಕತೆ ಉಳಿಸಿಕೊಂಡಿಲ್ಲ. ವಿಜಯೇಂದ್ರ ನೇಮಕದಿಂದಾಗಿ ಕರ್ನಾಟಕದಲ್ಲಿ ಬಿಜೆಪಿಯು 'ಬಿಎಸ್ವೈ ಕುಟುಂಬದ ಪಕ್ಷವಾಗಿದೆ'' ಎಂದು ತಿಳಿಸಿದ್ದಾರೆ.
ಆಯನೂರು ಮಂಜುನಾಥ್ ಟೀಕೆ:ಕಾಂಗ್ರೆಸ್ ಪಕ್ಷದ ವಕ್ತಾರರಾಗಿರುವ ಹಿರಿಯ ರಾಜಕಾರಣಿ ಆಯನೂರು ಮಂಜುನಾಥ್ ಅವರು ಬಿಜೆಪಿಯ ಕುಟುಂಬ ರಾಜಕಾರಣದ ನಿಲುವನ್ನು ಕಟುವಾಗಿ ಟೀಕಿಸಿದ್ದಾರೆ. ''ಕುಟುಂಬ ರಾಜಕಾರಣದ ಪಕ್ಷ ಎನ್ನುವ ಅಪವಾದ ಇರುವ ಜೆಡಿಎಸ್ ಜೊತೆ ಚುನಾವಣೆ ಮೈತ್ರಿ ಮಾಡಿಕೊಂಡಿರುವುದು ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ನೇಮಿಸಿರುವುದು ನಗೆಪಾಟಲಿನ ಸಂಗತಿಯಾಗಿದೆ'' ಎಂದು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ. ''ಕುಟುಂಬ ರಾಜಕಾರಣ ವಿರೋಧಿಸುವ ನೈತಿಕತೆಯನ್ನು ಬಿಜೆಪಿ ಸಂಪೂರ್ಣವಾಗಿ ಕಳೇದುಕೊಂಡಿದೆ. ಕಾಂಗ್ರೆಸ್ಗಿಂತಲೂ ಹೆಚ್ಚು ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಹಿನ್ನೆಲೆ ಇರುವ ಶಾಸಕರು, ಸಂಸದರುಗಳು ಇದ್ದಾರೆ. ಬಿಜೆಪಿಯು ಹಿಂದುತ್ವ ಹೊರತುಪಡಿಸಿ, ಯಾವುದೇ ಸ್ಪಷ್ಟ ಐಡಿಯಾಲಜಿ ಉಳಿಸಿಕೊಂಡಿಲ್ಲ'' ಎಂದಿದ್ದಾರೆ.
ಆದರೆ, ವಿಜಯೇಂದ್ರ ಅವರನ್ನು ಬಿಜೆಪಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದನ್ನು ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಬಲವಾಗಿ ಸಮರ್ಥನೆ ಮಾಡಿಕೊಂಡಿದ್ದಾರೆ. ಇದು ಕುಟುಂಬ ರಾಜಕಾರಣದ ನೇಮಕವಲ್ಲ. ರಾಜ್ಯ ಬಿಜೆಪಿ ಅಧ್ಯಕ್ಷ ಸ್ತಾನಕ್ಕೆ ಸೂಕ್ತ ಅಭ್ಯರ್ಥಿಯ ಆಯ್ಕೆ ಎಂದು ಕುಟುಂಬ ರಾಜಕಾರಣದ ನೇಮಕ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.