ಬೆಂಗಳೂರು: ಬಿಜೆಪಿಯ ಹತ್ತು ಶಾಸಕರನ್ನು ಪ್ರಸಕ್ತ ಬಜೆಟ್ ಅಧಿವೇಶನದಿಂದ ಅಮಾನತು ಮಾಡಿದ ಸ್ಪೀಕರ್ ನಿರ್ಧಾರ ಖಂಡಿಸಿ ಉಭಯ ಸದನಗಳ ಕಲಾಪ ಬಹಿಷ್ಕಾರ ಮಾಡುವ ನಿರ್ಧಾರವನ್ನು ರಾಜ್ಯ ಬಿಜೆಪಿ ಕೈಗೊಂಡಿದ್ದು, ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಧರಣಿ ನಡೆಸಿ ನಂತರ ರಾಜಭವನಕ್ಕೆ ಪಾದಯಾತ್ರೆ ಮೂಲಕ ತೆರಳಿ ದೂರು ನೀಡಲು ನಿರ್ಧರಿಸಲಾಯಿತು.
ಬುಧವಾರ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯರ ಅಮಾನತು ಹಿನ್ನೆಲೆಯಲ್ಲಿ ಇಂದು ಬಿಜೆಪಿ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಮಲ್ಲೇಶ್ವರದ ಜಗನ್ನಾಥ ಭವನದಲ್ಲಿ ನಡೆದ ಸಭೆಯಲ್ಲಿ ಬಿಜೆಪಿಯ ಮುಂದಿನ ನಿಲುವು, ಹೋರಾಟ ಬಗ್ಗೆ ಚರ್ಚೆ ನಡೆಸಲಾಯಿತು. ಸಭೆಯಲ್ಲಿ ಸ್ಪೀಕರ್ ನಿರ್ಧಾರ ವಿರೋಧಿಸಿ ಪ್ರತಿಭಟನೆ ಮಾಡಿ ಗವರ್ನರ್ಗೆ ದೂರು ಕೊಡಲು ನಿರ್ಧಾರ ಮಾಡಲಾಯಿತು. ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಧರಣಿ ನಡೆಸಿ ಆ ನಂತರ ಪಾದಯಾತ್ರೆ ಮೂಲಕ ಹೊರಟು ಗವರ್ನರ್ಗೆ ದೂರು ಕೊಡಲು ತೀರ್ಮಾನ ಕೈಗೊಳ್ಳಲಾಯಿತು.
ಸಭೆ ನಂತರ ಮಾಹಿತಿ ನೀಡಿದ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ, ನಿನ್ನೆ ವಿಧಾನಸಭೆಯಲ್ಲಿ ನಡೆದ ಘಟನೆ ಬಗ್ಗೆ ಚರ್ಚೆ ಮಾಡಿದ್ದೇವೆ, ಗಾಂಧಿ ಪ್ರತಿಮೆ ಎದುರು ಧರಣಿ ಮಾಡಿ, ಆ ನಂತರ ರಾಜ್ಯಪಾಲರಿಗೆ ದೂರು ಕೊಡುತ್ತೇವೆ. ವಿಧಾನಸಭೆ ಸದಸ್ಯರು ಎಲ್ಲರೂ ನಿನ್ನೆಯ ಘಟನೆ ಬಗ್ಗೆ ಅಭಿಪ್ರಾಯ ತಿಳಿಸಿದ್ದಾರೆ. ನಾವು ಯಾರು ಸದನಕ್ಕೆ ಹೋಗೋದಿಲ್ಲ ಎಂದು ತೀರ್ಮಾನ ಮಾಡಿದ್ದೇವೆ, ರಾಜ್ಯಾದ್ಯಂತ ಹೋರಾಟದ ಬಗ್ಗೆ ನಾಳೆ ತೀರ್ಮಾನ ಮಾಡುತ್ತೇವೆ ಎಂದರು.