ಬೆಂಗಳೂರು:ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ಪ್ರಕ್ರಿಯೆಯನ್ನು ಉದ್ದೇಶಪೂರ್ವಕವಾಗಿ ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿ ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದ ಬಿಜೆಪಿ ಇಂದು ರೆಸಾರ್ಟ್ ಗೆ ತೆರಳಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ರಾಜ್ಯಪಾಲರು ಸೂಚನೆ ನೀಡಿದರೂ ವಿಶ್ವಾಸಮತ ಯಾಚನೆ ಮಾಡದ ಸರ್ಕಾರದ ನಡೆ ಖಂಡಿಸಿ ನಿನ್ನೆ ವಿಧಾನಸಭೆಯಲ್ಲೇ ರಾತ್ರಿ ಧರಣಿ ನಡೆಸಿ ಸದನದಲ್ಲೇ ವಾಸ್ತವ್ಯ ಹೂಡಿದ್ದ ಬಿಜೆಪಿ ನಾಯಕರು ಇಂದು ವಿಧಾನಸೌಧದ ಬದಲು ರೆಸಾರ್ಟ್ ಗೆ ಮರಳುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗ್ತಿದೆ.
ಎರಡು ದಿನ ಸದನದಲ್ಲಿರುವ ಬದಲು ರೆಸಾರ್ಟ್ ನಲ್ಲಿ ಶಾಸಕರನ್ನು ಇರಿಸಿ ಅವರ ಜೊತೆ ನಿರಂತರವಾಗಿ ಸಮಾಲೋಚನೆ ಮಾಡಬಹುದು. ಅಲ್ಲದೇ, ಸದನದಲ್ಲೇ ಇದ್ದರೆ, ಮೈತ್ರಿ ಪಕ್ಷದ ನಾಯಕರು ಬಿಜೆಪಿ ಶಾಸಕರ ಜೊತೆ ಮಾತುಕತೆ ನಡೆಸಲು ಅವಕಾಶ ಮಾಡಿಕೊಟ್ಟು ಸಮಸ್ಯೆ ಸೃಷ್ಠಿಸಿಕೊಳ್ಳುವುದು ಬೇಡವೆಂದು ರೆಸಾರ್ಟ್ ಕಡೆ ತೆರಳಲು ನಿರ್ಧರಿಸಿದ್ದಾರೆ ಎಂದು ಹೇಳಲಾಗ್ತಿದೆ.
ಈಗಾಗಲೇ ವಿಧಾನಸೌಧದ ಆವರಣದಲ್ಲಿ ಎರಡು ಬಸ್ಗಳು ಸಿದ್ಧವಾಗಿ ನಿಂತಿದ್ದು, ಸದನ ಮುಂದೂಡಿಕೆ ಆಗುತ್ತಿದ್ದಂತೆ ಶಾಸಕರನ್ನೆಲ್ಲಾ ರಮಡ ರೆಸಾರ್ಟ್ ಗೆ ಕರೆದೊಯ್ಯಲಾಗುತ್ತದೆ. ಮುಂದಿನ ನಡೆ ಕುರಿತು ರೆಸಾರ್ಟ್ ನಲ್ಲಿಯೇ ಬಿಜೆಪಿ ಸಭೆ ನಡೆಸಲಿದೆ ಎಂದು ತಿಳಿದುಬಂದಿದೆ.