ಬೆಂಗಳೂರು:ಜಿಂದಾಲ್ ಕಂಪನಿಗೆ ಸರ್ಕಾರಿ ಭೂಮಿ ಮಾರಾಟ ಮಾಡುವ ನಿರ್ಧಾರವನ್ನು ವಿರೋಧಿಸಿ ಆರಂಭಿಸಿದ್ದ ಹೋರಾಟವನ್ನು ಮುಂದುವರೆಸಲು ರಾಜ್ಯ ಬಿಜೆಪಿ ಘಟಕ ನಿರ್ಧರಿಸಿದೆ.
ಹೌದು, ಎರಡು ದಿನಗಳ ಕಾಲ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಿ ಜಿಂದಾಲ್ಗೆ ಸರ್ಕಾರಿ ಭೂಮಿ ನೀಡುವ ಸರ್ಕಾರದ ನಿರ್ಧಾರವನ್ನು ವಾಪಸ್ ಪಡೆಯುವಂತೆ ಆಗ್ರಹಿಸಿದ್ದ ಬಿಜೆಪಿ ನಾಯಕರು ಇದೀಗ ಹೋರಾಟವನ್ನು ರಾಜ್ಯಾದ್ಯಂತ ವಿಸ್ತರಿಸಲು ಮುಂದಾಗಿದ್ದಾರೆ. ಜಿಲ್ಲಾ ಕೇಂದ್ರಗಳಲ್ಲಿಯೂ ಜಿಂದಾಲ್ಗೆ ಭೂಮಿ ಮಾರಾಟ ಮಾಡುವುದನ್ನು ವಿರೋಧಿಸಿ ಬೀದಿಗಿಳಿಯಲು ನಿರ್ಧರಿಸಿದ್ದಾರೆ.
ಅಹೋರಾತ್ರಿ ಧರಣಿ ಎಚ್ಚರಿಕೆಯನ್ನು ಬಿಜೆಪಿ ನೀಡುತ್ತಿದ್ದಂತೆ ಭೂಮಿ ಪರಭಾರೆ ಮಾಡುವ ಕುರಿತು ಸಚಿವ ಸಂಪುಟ ಕೈಗೊಂಡಿದ್ದ ನಿರ್ಧಾರವನ್ನು ಮರುಪರಿಶೀಲನೆ ಮಾಡುವುದಾಗಿ ಸರ್ಕಾರ ಪ್ರಕಟಿಸಿತ್ತು. ನಂತರ ಧರಣಿ ನಡೆಯುವ ಸಂದರ್ಭದಲ್ಲಿ ಸಂಪುಟ ಸಭೆ ನಡೆಸಿ ಸಚಿವ ಸಂಪುಟ ಉಪ ಸಮಿತಿ ರಚಿಸಿ ಪರಿಶೀಲನೆಗೆ ಕಳುಹಿಸಲಾಯಿತು. ಇದು ಬಿಜೆಪಿ ಪಾಲಿಗೆ ಮೊದಲನೇ ಜಯ ಎಂದು ಪರಿಗಣಿಸಿದ್ದ ಕೇಸರಿ ಪಡೆಯ ನಾಯಕರು ಇದೀಗ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಮೂಲಕ ಇದು ಜನವಿರೋಧಿ ಸರ್ಕಾರ ಎಂದು ಬಿಂಬಿಸಿ ರಾಜಕೀಯ ಮೇಲುಗೈ ಸಾಧಿಸುವ ತಂತ್ರ ಹೆಣೆಯುತ್ತಿದ್ದಾರೆ.
ಲೋಕಸಭಾ ಅಧಿವೇಶನ ಆರಂಭಗೊಂಡಿದ್ದು, ಅಧಿವೇಶನದ ಬಿಡುವಿನ ಸಮಯದಲ್ಲಿ ಪಕ್ಷದ ರಾಜ್ಯ ಕೋರ್ ಕಮಿಟಿ ಸಭೆ ನಡೆಸಿ ಈ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಸಭೆಯಲ್ಲಿ ಯಾವ ರೀತಿ ಹೋರಾಟ ಮಾಡಬೇಕೆಂದು ನಿರ್ಧಾರ ಮಾಡಲಾಗುತ್ತದೆ ಎಂದು ಬಿಜೆಪಿ ಆಪ್ತ ಮೂಲಗಳು ಮಾಹಿತಿ ನೀಡಿವೆ.
ಬಳ್ಳಾರಿ ನಾಯಕರಾದ ಆನಂದ್ ಸಿಂಗ್ ಹಾಗೂ ಅನಿಲ್ ಲಾಡ್ ಇಬ್ಬರೂ ಕೂಡ ಜಿಂದಾಲ್ಗೆ ವಿರೋಧಿಸಿದ್ದಾರೆ. ಕಾಂಗ್ರೆಸ್ ನ ಹಿರಿಯ ನಾಯಕ ಹೆಚ್.ಕೆ ಪಾಟೀಲ್ ಕೂಡ ವಿರೋಧಿಸಿದ್ದಾರೆ ಇಂತಹ ಸಮಯದಲ್ಲಿ ಬಿಜೆಪಿ ಹೋರಾಟವನ್ನು ಮುಂದುವರೆಸದೇ ಇರುವುದು ಸರಿಯಲ್ಲ. ನಮ್ಮ ನಿಲುವು ಕೂಡ ಹೋರಾಟ ನಡೆಸಿ ವಿರೋಧ ವ್ಯಕ್ತಪಡಿಸುವುದೇ ಆಗಿರಬೇಕು. ಜಿಂದಾಲ್ಗೆ ಭೂಮಿ ಲೀಸ್ ಕೊಟ್ಟರೆ, ನಮ್ಮ ಅಭ್ಯಂತರ ಇಲ್ಲ. ಆದರೆ ಭೂಮಿ ಮಾರಾಟಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎನ್ನುವ ಬೇಡಿಕೆ ಇಟ್ಟು ಬಿಜೆಪಿ ನಾಯಕರು ಹೋರಾಟ ಮುಂದುವರೆಸಲಿದ್ದಾರೆ ಎಂದು ತಿಳಿದುಬಂದಿದೆ.