ಬೆಂಗಳೂರು :ಕುಟುಂಬಕ್ಕೊಂದೇ ಟಿಕೆಟ್ ಎನ್ನುವ ಕಾಂಗ್ರೆಸ್ ಚಿಂತನಾ ಸಭೆಯ ನಿರ್ಧಾರವನ್ನು ಬಿಜೆಪಿ ಟೀಕಿಸಿದೆ. ಗಾಂಧಿ ಕುಟುಂಬ ಮತ್ತವರ ನಿಷ್ಟರನ್ನು ಈ ನಿಯಮದಿಂದ ಹೊರಗಿಟ್ಟು, ಕುಟುಂಬ ರಾಜಕಾರಣ ಪೋಷಣೆ ಮುಂದುವರೆಸಲು ಕಾಂಗ್ರೆಸ್ ಮುಂದಾಗಿದೆ ಎಂದು ಬಿಜೆಪಿ ಲೇವಡಿ ಮಾಡಿದೆ.
ಟ್ವೀಟ್ ಮೂಲಕ ಟೀಕೆ : ಕಾಂಗ್ರೆಸ್ ಚಿಂತನಾ ಸಭೆಯಿಂದ ದೇಶಕ್ಕೆ ಲಭ್ಯವಾದ ವಿಶೇಷ ವಾರ್ತೆಯಾದರೂ ಏನು? ಬೆಳಗ್ಗೆ ಒಂದು ಕುಟುಂಬಕ್ಕೆ ಒಂದು ಟಿಕೆಟ್ ಎಂಬ ಪ್ರಸ್ತಾಪ. ಸಂಜೆಯಾಗುತ್ತಲೇ ಈ ನಿಯಮ ಗಾಂಧಿ ಕುಟುಂಬಕ್ಕೆ ಅನ್ವಯವಾಗದು ಎಂಬ ಘೋಷಣೆ. ರಾತ್ರಿಯಾಗುತ್ತಲೇ, ಈ ನಿಯಮ ಗಾಂಧಿ ನಿಷ್ಠ ಕೆಲವು ಕುಟುಂಬಗಳಿಗೆ ಅನ್ವಯವಿಲ್ಲ ಎಂದು ರಾಜಿ ಮಾಡಿಕೊಳ್ಳಲಾಯಿತು ಎಂದು ಟ್ವೀಟ್ ಮೂಲಕ ಬಿಜೆಪಿ ಟೀಕಿಸಿದೆ.
ಕೆಲವು ಕುಟುಂಬಗಳಿಗೆ ಕಾಂಗ್ರೆಸ್ ನಿಯಮ ಅನ್ವಯವಾಗುವುದಿಲ್ಲ ಎಂಬ ಮಾತಿನ ಅರ್ಥವೇನು? ಯಾವುದು ಆ ಕುಟುಂಬಗಳು? ಇಡೀ ದೇಶಕ್ಕೆ ಕುಟುಂಬ ರಾಜಕಾರಣವನ್ನು ಪರಿಚಯಿಸಿದ ಕಾಂಗ್ರೆಸ್ ಪಕ್ಷಕ್ಕೆ ಈಗ ಅದನ್ನು ಪೋಷಿಸುವುದು ಅನಿವಾರ್ಯವಾಗಿದೆ. ಕಾಂಗ್ರೆಸ್ ನೀತಿಯ ಬಗ್ಗೆ ದೇಶಾದ್ಯಂತ ವಿರೋಧ ವ್ಯಕ್ತವಾಗುತ್ತಿದ್ದರೂ ವಂಶವಾದವನ್ನು ಮಾತ್ರ ಬಿಡುವುದಿಲ್ಲ ಎಂದು ಬಿಜೆಪಿ ವ್ಯಂಗ್ಯವಾಡಿದೆ.