ಕರ್ನಾಟಕ

karnataka

ETV Bharat / state

ಜನರು ಚಿಂತೆಯಲ್ಲಿರುವಾಗ ಕಾಂಗ್ರೆಸ್​ನವರು ಕೇಕ್ ಕತ್ತರಿಸಿ ವಿಕೃತಿ ಮೆರೆಯುತ್ತಿದ್ದಾರೆ: ಸಿದ್ದರಾಮೋತ್ಸವಕ್ಕೆ ಬಿಜೆಪಿ ಟೀಕೆ - ಸಿದ್ದರಾಮೋತ್ಸವ

ದಾವಣಗೆರೆಯಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹುಟ್ಟುಹಬ್ಬದ ಪ್ರಯುಕ್ತ, ಸಿದ್ದರಾಮೋತ್ಸವವನ್ನು ಆಚರಿಸಲಾಗುತ್ತಿದೆ. ಈ ಸಿದ್ದರಾಮೋತ್ಸವವನ್ನು ಬಿಜೆಪಿ ಟ್ವೀಟ್​ ಮೂಲಕ ಟೀಕಿಸಿದೆ.

BJP criticized the Siddaramostava
ಸಿದ್ದರಾಮೋತ್ಸವಕ್ಕೆ ಬಿಜೆಪಿ ಟೀಕೆ

By

Published : Aug 3, 2022, 5:48 PM IST

ಬೆಂಗಳೂರು: ರಾಜ್ಯದ ಜನರು ಚಿಂತೆಯಲ್ಲಿರುವಾಗಲೂ ಕಾಂಗ್ರೆಸ್ ಮಾತ್ರ ಕೇಕ್ ಕತ್ತರಿಸಿ ಸಂಭ್ರಮಿಸುವ ವಿಕೃತಿಯನ್ನು ತೋರಿಸುತ್ತಿದೆ. ಕುರ್ಚಿ ಮೇಲೆ ಕಣ್ಣಿಟ್ಟಿರುವ ಸಿದ್ದರಾಮಯ್ಯ ತಮ್ಮನ್ನು ತಾವೇ ಮೆರೆಸಿಕೊಳ್ಳುತ್ತ ಅಮಾನುಷತೆಯನ್ನು ನಿರ್ಲಜ್ಜವಾಗಿ ಪ್ರದರ್ಶಿಸುತ್ತಿದ್ದಾರೆ ಎಂದು ಬಿಜೆಪಿ ಟ್ವೀಟ್ ಮೂಲಕ ಕಿಡಿಕಾರಿದೆ.

ರಾಜ್ಯದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಹಾಮಳೆಗೆ 11 ಜನ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಪ್ರವಾಹದಿಂದಾಗಿ ಸಾವಿರಾರು ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರವು ಜನರ ನೆರವಿಗೆ ಧಾವಿಸಿದ್ದು, ಅವರ ಕಣ್ಣೀರು ಒರೆಸುತ್ತಿದೆ. ಆದರೆ ಕಾಂಗ್ರೆಸ್​ನವರು ಸಿದ್ದರಾಮೋತ್ಸವದಲ್ಲಿ ಕಾರ್ಯನಿರತವಾಗಿದ್ದಾರೆ ಎಂದು ಬಿಜೆಪಿ ಹರಿಹಾಯ್ದಿದೆ.

ಕಳೆದೆರಡು ದಿನಗಳಲ್ಲಿ ಆರ್ಭಟಿಸುತ್ತಿರುವ ಮಳೆಗೆ ಸಾವು ನೋವುಗಳಿಂದ ರಾಜ್ಯದ ಜನರು ತತ್ತರಿಸುತ್ತಿದ್ದಾರೆ. ಆದರೆ ಮಜಾವಾದಿ ಸಿದ್ದರಾಮಯ್ಯ ಮಾತ್ರ ಮಹೋತ್ಸವದ ಜನ್ಮದಿನೋತ್ಸವದಲ್ಲಿ ಬೀಗುತ್ತಿದ್ದಾರೆ. ರಾಜ್ಯದ ಜನರು ಚಿಂತೆಯಲ್ಲಿರುವಾಗಲೂ ರಾಜ್ಯ ಕಾಂಗ್ರೆಸ್ ಮಾತ್ರ ಕೇಕ್ ಕತ್ತರಿಸಿ ಸಂಭ್ರಮಿಸುವ ವಿಕೃತಿಯನ್ನು ತೋರಿಸುತ್ತಿದೆ ಎಂದು ಬಿಜೆಪಿ ಟೀಕಿಸಿದೆ.

ಇದನ್ನೂ ಓದಿ:ಸಿದ್ದರಾಮಯ್ಯ ಅಮೃತಮಹೋತ್ಸವ.. ಮಾಜಿ ಸಿಎಂಗೆ ರೇಷ್ಮೆ ಶಾಲು ಹೊದಿಸಿ ಶುಭಾಶಯ ಕೋರಿದ ಡಿಕೆಶಿ

ಕಾಂಗ್ರೆಸ್ಸಿನಲ್ಲಿ ಗಾಂಧಿ ಕುಟುಂಬದ ವೈಭವೀಕರಣವೇ ಬಂಡವಾಳ. ಇದರಿಂದ ಹೊರತಾಗಿ ಯಾವೊಬ್ಬ ನಾಯಕನ ಉತ್ಸವವನ್ನೂ ಹೈಕಮಾಂಡ್ ಸಹಿಸುವುದಿಲ್ಲ. ದೇವರಾಜ ಅರಸು, ಬಂಗಾರಪ್ಪ ಅವರ ರಾಜಕೀಯ ಜೀವನವನ್ನು ಕಾಂಗ್ರೆಸ್ ಹೇಗೆ ಮುಗಿಸಿತು ಎನ್ನುವುದನ್ನು ಸಿದ್ದರಾಮಯ್ಯ ಮರೆಯಬಾರದು. ನಕಲಿ ಗಾಂಧಿ ಕುಟುಂಬವನ್ನೇ ಧಿಕ್ಕರಿಸಿ, ವ್ಯಕ್ತಿ ಪೂಜೆಗಾಗಿ ಕೋಟ್ಯಂತರ ರೂಪಾಯಿ ಸುರಿದು ಸಿದ್ದರಾಮಯ್ಯ ತಮ್ಮ ಹಠ ಸಾಧಿಸಿದ್ದಾರೆ. ಇದರ ಪರಿಣಾಮ ಏನಾಗುತ್ತದೆಂದು ಯಾರೂ ಬೇಕಾದರೂ ಊಹಿಸಬಹುದು ಎಂದಿದೆ ಬಿಜೆಪಿ.

ABOUT THE AUTHOR

...view details