ಬೆಂಗಳೂರು:ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ನಕಲಿ ಗಾಂಧಿ ಕುಟುಂಬ ಈಗ "ಅನುಕಂಪ" ಗಿಟ್ಟಿಸುವ ನಾಟಕವಾಡುತ್ತಿದೆ. ತಾನು ಕಳ್ಳ ಪರರ ನಂಬೆ ಎಂಬ ಧೋರಣೆಯೇ ಕಾಂಗ್ರೆಸ್ ಅಸ್ಮಿತೆ. ನಕಲಿ ಗಾಂಧಿ ಮನೆತನದಿಂದ, ನಕಲಿ ಗಾಂಧಿ ಮನೆತನಕ್ಕಾಗಿ, ನಕಲಿ ಗಾಂಧಿ ಮನೆತನಕ್ಕೋಸ್ಕರ, ಇದು ಕಾಂಗ್ರೆಸ್ ಪಕ್ಷದ ಪ್ರಜಾಪ್ರಭುತ್ವ ಎಂದು ಬಿಜೆಪಿ ಲೇವಡಿ ಮಾಡಿದೆ.
ನಕಲಿ ಗಾಂಧಿ ಕುಟುಂಬದ ಸದಸ್ಯರಿಗೆ ಇಡಿ ನೋಟಿಸ್ ಜಾರಿಯಾಗುತ್ತಿದ್ದಂತೆ, ದೇಶಾದ್ಯಂತ ಅಶಾಂತಿ ಸೃಷ್ಟಿ ಮಾಡಲಾಗುತ್ತಿದೆ. ಇಡಿ ಕಚೇರಿ ಎದುರು ಪ್ರತಿಭಟನೆಯ ಕರೆಯ ಹಿಂದೆ ದೇಶ ವಿರೋಧಿ ಸಂಚು ಅಡಗಿದೆ. ಉತ್ತರದ ರಾಜ್ಯಗಳಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಹೋರಾಟವನ್ನು ಕಾಂಗ್ರೆಸ್ ಕರ್ನಾಟಕಕ್ಕೆ ಆಹ್ವಾನಿಸುತ್ತಿದೆ ಎಂದು ಟ್ವೀಟ್ ಮೂಲಕ ಬಿಜೆಪಿ ಆರೋಪಿಸಿದೆ.
ಸಹಾನುಭೂತಿಗಾಗಿ ಪ್ರತಿಭಟನೆ ನಾಟಕ:ದೇಶಕ್ಕಾಗಿ ಮಡಿವ ಸೈನಿಕರ ಪರವಾಗಿ ಒಮ್ಮೆಯೂ ಕಾಂಗ್ರೆಸ್ ದನಿ ಎತ್ತಲಿಲ್ಲ. ರೈತರು ಆತ್ಮಹತ್ಯೆ ಮಾಡಿಕೊಂಡಾಗಲೂ ಕಾಂಗ್ರೆಸ್ ಬೀದಿಗೆ ಬರಲಿಲ್ಲ. ಆದರೆ ನಕಲಿ ಗಾಂಧಿಗಳಿಗೆ ಜಾರಿ ನಿರ್ದೇಶನಾಲಯ ನೋಟಿಸ್ ನೀಡಿದರೆ ಕಾಂಗ್ರೆಸ್ ರಸ್ತೆಗೆ ಬಂದು ನಿಂತಿದೆ. ಇದು ಸಂವಿಧಾನಕ್ಕೆ ಎಸಗುತ್ತಿರುವ ಅಪಚಾರವಲ್ಲವೇ?ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಇಡಿ ನಕಲಿ ಗಾಂಧಿ ಕುಟುಂಬದ ವಿರುದ್ಧ ಆರೋಪಪಟ್ಟಿ ಸಲ್ಲಿಸಿದೆ. ತಪ್ಪು ಮಾಡದೇ ಇದ್ದರೆ ಭಯವೇಕೆ? ಸಹಾನುಭೂತಿ ಗಿಟ್ಟಿಸುವುದಕ್ಕಾಗಿ ಕಾಂಗ್ರೆಸ್ ಪ್ರತಿಭಟನೆಯ ನಾಟಕ ಹೆಣೆಯುತ್ತಿದೆ. ಇದೊಂದು ಯೋಜಿತ ಸಂಚು ಅಷ್ಟೇ ಎಂದು ಬಿಜೆಪಿ ಟೀಕಿಸಿದೆ.
ತಪ್ಪು ಮಾಡದವರು ಯಾರು ಎಂದು ಒಪ್ಪಿಕೊಂಡು ತನಿಖೆ ಎದುರಿಸುವ ಮುಕ್ತ ಮನಸ್ಸು ನಕಲಿ ಗಾಂಧಿ ಕುಟುಂಬಕ್ಕಿಲ್ಲ. ತಪ್ಪು ಮಾಡದೇ ಇದ್ದರೆ ತನಿಖೆಯ ಅಗ್ನಿ ಪರೀಕ್ಷೆ ಎದುರಿಸಲು ಭಯವೇಕೆ?. ಅಷ್ಟಕ್ಕೂ ತನಿಖೆ ಬೇಡ ಎನ್ನಲು, ನಕಲಿ ಗಾಂಧಿ ಕುಟುಂಬವನ್ನು ಹೊರಗಿಟ್ಟು ಭಾರತೀಯ ದಂಡ ಸಂಹಿತೆ ರಚಿಸಲಾಗಿದೆಯೇ? ಎಂದು ಬಿಜೆಪಿ ಪ್ರಶ್ನಿಸಿದೆ.
ನಕಲಿ ಗಾಂಧಿಗಳ ಜಪ:ಕೇವಲ ಒಂದು ಇಡಿ ನೋಟಿಸ್ಗಾಗಿ ರಾಜ್ಯವ್ಯಾಪಿ ಪ್ರತಿಭಟನೆಗೆ ಕರೆ ನೀಡಿರುವ ಡಿಕೆ ಶಿವಕುಮಾರ್ ಅವರೇ, ನೀವೇನು ಸೊಬಗ ಅಂದುಕೊಂಡಿದ್ದೀರಾ? ಒಂದೂವರೆ ತಿಂಗಳಿಗೂ ಹೆಚ್ಚು ತಿಹಾರ್ ಜೈಲಿನಲ್ಲಿ ಕಂಬಿ ಎಣಿಸಿದ್ದು ನ್ಯಾಷನಲ್ ಹೆರಾಲ್ಡ್ ರೀತಿಯ ಪ್ರಕರಣದಲ್ಲಿಯೇ ಎಂಬುದನ್ನು ಮರೆತಿರಾ? ತಮ್ಮ ಪ್ರತಿ ಭಾಷಣದಲ್ಲೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು 'ವ್ಯಕ್ತಿ ಮುಖ್ಯವಲ್ಲ ಪಕ್ಷ ಮುಖ್ಯ' ಎಂಬುದನ್ನು ಪ್ರಸ್ತಾಪಿಸುತ್ತಾರೆ. ಅದೇ ಡಿಕೆಶಿ ಇಂದು ದೇಶದ ಸಾಂವಿಧಾನಿಕ ಮಾನ್ಯತೆ ಇರುವ ಸಂಸ್ಥೆ ನಕಲಿ ಗಾಂಧಿ ಕುಟುಂಬಕ್ಕೆ ನೀಡಿದ ನೋಟಿಸ್‌ಗೆ ನಕಲಿ ಗಾಂಧಿಗಳ ಜಪ ಮಾಡುತ್ತಿರುವುದು ವಿಪರ್ಯಾಸ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಇದನ್ನೂ ಓದಿ:ಕಾಶ್ಮೀರದಂತೆ ನಕಲಿ ಗಾಂಧಿ ಕುಟುಂಬಕ್ಕೂ ವಿಶೇಷ ಸವಲತ್ತು ಕೊಡಬೇಕಾ?: ಛಲವಾದಿ ವಾಗ್ದಾಳಿ
ಕಾಂಗ್ರೆಸ್ಗೆ ಟಾಂಗ್ ನೀಡಿದ ಬಿಜೆಪಿ: ಬಾಲ ಮುದುರಿಕೊಂಡು ಕುಳಿತಿದ್ದ ನಗರ ನಕ್ಸಲರು, ಶಾಂತಿದೂತರು, ಸಿಎಎ ವಿರೋಧಿ ಹೋರಾಟಗಾರರು ಈಗ ಒಮ್ಮೆಲೇ ಎದ್ದು ನಿಂತಿದ್ದಾರೆ. ಇಡಿ ನೋಟಿಸ್ ಬಳಿಕ ಈ ಘಟನೆ ನಡೆಯುತ್ತಿದೆ. ಹಾಗಾದರೆ ಇದು ಕಾಂಗ್ರೆಸ್ ಪ್ರೇರಿತ ರಾಷ್ಟ್ರ ವಿರೋಧಿ ಸಂಚಲ್ಲವೇ? ಮಾತೆತ್ತಿದರೆ ತ್ಯಾಗ-ಬಲಿದಾನದ ಕುಟುಂಬ ಎಂದು ಹೇಳುವ ಕಾಂಗ್ರೆಸ್ ನಾಯಕರೇ, ನಕಲಿ ಗಾಂಧಿಗಳ ವಂಶಸ್ಥರ ಅಕ್ರಮ ಆಸ್ತಿ ದೇಶಸೇವೆಗಾಗಿ ಬರೆದುಕೊಡಲಿ. ಅಕ್ರಮಿಗಳ ಹಣ ದೇಶಸೇವೆಗಾಗಿ ಮೀಸಲಿಟ್ಟಿದ್ದರೆ, ಅಕ್ರಮ ಹಣಗಳಿಕೆಯಲ್ಲಿ ಇಡಿ ಮುಂದೆ ನಿಲ್ಲಬೇಕಾದ ಪರಿಸ್ಥಿತಿ ಉದ್ಭವವಾಗುತ್ತಿರಲಿಲ್ಲ ಎಂದು ಕಾಂಗ್ರೆಸ್ಗೆ ಟಾಂಗ್ ನೀಡಿದೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಗಾಂಧಿ ಕುಟುಂಬ ನಡೆಸಿದ್ದು ಅಕ್ಷರಶಃ ಮನೆಗಳ್ಳತನ. ಕಾಂಗ್ರೆಸ್ ಪಕ್ಷದ 5000 ಸದಸ್ಯರ ಇಡಗಂಟಿನೊಂದಿಗೆ ಆರಂಭವಾದ ಅಸೋಸಿಯೇಟ್ ಜರ್ನಲ್ ಶೇರುಗಳನ್ನು ರಾಹುಲ್ ಗಾಂಧಿ ನೇತೃತ್ವದಲ್ಲಿ ಕಬಳಿಸಲಾಗಿದೆ. ಸ್ವಂತ ಮನೆಗೆ ಕನ್ನ ಹಾಕುವುದೆಂದರೆ ಇದೇ ಅಲ್ಲವೇ? ಉಪ್ಪು ತಿಂದ ಮೇಲೆ ನೀರು ಕುಡಿಯ ಬೇಕು, ತಪ್ಪು ಮಾಡಿದ ಮೇಲೆ ಶಿಕ್ಷೆ ಅನುಭವಿಸಬೇಕು. ರಾಹುಲ್ ಗಾಂಧಿ ನೇತೃತ್ವದ ಯಂಗ್ ಇಂಡಿಯಾ ಸಂಸ್ಥೆ ಅಕ್ರಮ ಹಣ ವರ್ಗಾವಣೆ ಮಾಡಿರುವುದಕ್ಕೆ ಜಾರಿ ನಿರ್ದೇಶನಾಲಯದ ಬಳಿ ಸಾಕಷ್ಟು ಸಾಕ್ಷಿಗಳಿವೆ. ಸತ್ಯ ಅನಾವರಣಗೊಳಿಸುವುದು ಕಾಂಗ್ರೆಸ್ ದೃಷ್ಟಿಯಲ್ಲಿ ಮಾತ್ರ ದ್ವೇಷದ ರಾಜಕಾರಣ ಎಂದು ಬಿಜೆಪಿ ದೂರಿದೆ.‘
ಇದನ್ನೂ ಓದಿ:ಪೊಲೀಸರು ವಶಕ್ಕೆ ಪಡೆಯಲು ಬಂದಾಗ ಓಟಕಿತ್ತ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ: ವಿಡಿಯೋ
ನಕಲಿ ಗಾಂಧಿ ಕುಟುಂಬದ ಬುಡಕ್ಕೆ ಬೆಂಕಿ ಬಿದ್ದಾಗ ಮಾತ್ರ ಪಾದಯಾತ್ರೆಯ ನೆನಪಾಗುತ್ತದೆ. ದೇಶದಲ್ಲಿ ಉಗ್ರರ ದಾಳಿಯಾದಾಗ, ರೈತರ ಸರಣಿ ಆತ್ಮಹತ್ಯೆ ನಡೆದಾಗ, ಶಾಂತಿದೂತರು ಕಲ್ಲು ತೂರಾಟ ನಡೆಸಿದಾಗ ಕಾಂಗ್ರೆಸ್ಸಿಗರಿಗೆ ಪಾದಯಾತ್ರೆಯ ನೆನಪಾಗುವುದಿಲ್ಲ. ಜನವಿರೋಧಿ ನಿಲುವು ಏಕೆ? ಗಾಂಧಿ ಕುಟುಂಬದ ಪರವಾಗಿ ಭ್ರಷ್ಟಾಧ್ಯಕ್ಷ ಡಿಕೆಶಿ ಮಾಡುವ ಭಾಷಣ "ಕಳ್ಳರು, ಕಳ್ಳರು ಸೇರಿ ಸಂತೆಗೆ ಹೋದಂತೆ" ಇದೆ. ಅಕ್ರಮ ಆಸ್ತಿ ಸಂಪಾದನೆ ವಿಚಾರದಲ್ಲಿ ಜಾರಿ ನಿರ್ದೇಶನಾಲಯದ ತನಿಖೆ ಎದುರಿಸುತ್ತಿರುವ ವ್ಯಕ್ತಿಯೇ ಇಡಿ ವಿರುದ್ಧ ಪ್ರತಿಭಟನೆಗೆ ಕರೆ ನೀಡಿರುವುದು ಗೂಂಡಾಗಿರಿಯಲ್ಲದೇ ಮತ್ತೇನು? ಎಂದು ಪ್ರಶ್ನಿಸಿದೆ.
ತಾಯ್ನೆಲವನ್ನು ಅಗೌರವಿಸುತ್ತಿರುವ ಕಾಂಗ್ರೆಸ್: ಡಿಕೆಶಿ ಅವರೇ, ಕೇವಲ ಇಬ್ಬರು ವ್ಯಕ್ತಿಗಳಿಗಾಗಿ, ಕೇವಲ ಒಂದು ಕುಟುಂಬಕ್ಕಾಗಿ ಕೆಲಸ ಕಾರ್ಯ ಬಿಟ್ಟು, ಜನಸಾಮಾನ್ಯರ ಕೆಲಸಕ್ಕೂ ಅಡ್ಡಿ ಮಾಡಿಕೊಂಡು, ರಸ್ತೆಗಿಳಿದರೆ ಜನರು ನಿಮ್ಮನ್ನು ಕ್ಷಮಿಸುವರೇ? ಅಲ್ಲೆಲ್ಲೋ ಬೆಂಕಿ ಬಿದ್ದರೆ, ನಮ್ಮ ನಾಡಿನಲ್ಲಿ ಏಕೆ ಬಾವಿ ತೋಡುತ್ತೀರಿ? ವಾರದ ಮೊದಲ ದಿನ ಕಾಂಗ್ರೆಸ್ ಕರ್ನಾಟಕದ ಜನತೆಯ ಮೇಲೆ ಹೊರೆ ಹೇರುತ್ತಿದೆ. ಶಾಂತಿಯ ನಾಡಿನಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಸುತ್ತಿದೆ ಕಾಂಗ್ರೆಸ್. ರಾಹುಶಾಂತಿಗೋಸ್ಕರ ಸಮಾಜದ ಶಾಂತಿ ಕದಡುತ್ತಿರುವುದು ಖಂಡನೀಯ. ಸ್ವಾಮಿನಿಷ್ಠೆ ಪಾಲಿಸಲು, ತಾಯ್ನೆಲವನ್ನು ಕಾಂಗ್ರೆಸ್ ಅಗೌರವಿಸುತ್ತಿದೆ ಎಂದು ಟೀಕಿಸಿದೆ.
ಡಿಕೆಶಿಯನ್ನು ಪ್ರಶ್ನಿಸಿದ ಬಿಜೆಪಿ: ಕಾಂಗ್ರೆಸಿಗರ ವೀರೋಚಿತ ಹೋರಾಟದ ಪರಿಯಿದು.ಇಡಿ ವಿರುದ್ಧ ಪ್ರತಿಭಟನೆಯ ಪೋಸು ಕೊಡಲು ಬಂದ ಐವೈಸಿ ಅಧ್ಯಕ್ಷ ಪೊಲೀಸರಿಂದ ತಪ್ಪಿಸಿಕೊಳ್ಳಲು ಕಾಲಿಗೆ ಬುದ್ಧಿ ಹೇಳುತ್ತಿದ್ದಾರೆ. ಪಲಾಯವಾದವೇ ಇವರ ಬಂಡವಾಳ! ಎಂದು ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ ಪೊಲೀಸರಿಂದ ತಪ್ಪಿಸಿಕೊಂಡು ಓಡಿ ಹೋಗುತ್ತಿರುವ ವೀಡಿಯೋ ಟ್ಯಾಗ್ ಮಾಡಿ ವ್ಯಂಗ್ಯವಾಡಿದೆ. ನಕಲಿ ಗಾಂಧಿಗಳ ಪರವಾಗಿ ಬೀದಿಗೆ ಬರಲು ಹೈದರಾಬಾದಿನಲ್ಲಿ ಬಾಡಿಗೆ ಪ್ರತಿಭಟನಾಕಾರರಿಗೆ 500 ರೂಪಾಯಿ ಭತ್ಯೆ ನೀಡಲಾಗಿದೆ. ಬೆಂಗಳೂರಿನಲ್ಲಿ ಎಷ್ಟು ಕೊಟ್ಟಿದ್ದೀರಿ ಡಿಕೆಶಿ ಅವರೇ ಎಂದು ಪ್ರಶ್ನಿಸಿದೆ.