ಬೆಂಗಳೂರು:ರಾಜ್ಯ ಬಿಜೆಪಿಯ ಮಹತ್ವದ ಕೋರ್ ಕಮಿಟಿ ಸಭೆ ಇಂದು ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ನಡೆಯಲಿದೆ.
ಮಧ್ಯಾಹ್ನ 2 ಗಂಟೆಗೆ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸಭೆ ನಡೆಯಲಿದೆ. ಈ ವೇಳೆ ಸಿಎಂ ಬಿ.ಎಸ್. ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಡಿಸಿಎಂ ಗೋವಿಂದ ಕಾರಜೋಳ, ಆರ್ ಅಶೋಕ್, ಈಶ್ವರಪ್ಪ, ಸಿ.ಟಿ. ರವಿ, ಶಾಸಕ ಸಿ.ಎಂ ಉದಾಸಿ, ಅರವಿಂದ ಲಿಂಬಾವಳಿ, ಪ್ರಹ್ಲಾದ ಜೋಷಿ, ಸದಾನಂದಗೌಡ ಭಾಗಿಯಾಗಲಿದ್ದಾರೆ.
ನೂತನ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ನೇಮಕದ ಬಳಿಕ ನಡೆಯುತ್ತಿರುವ ಮೊದಲ ಮಹತ್ವದ ಕೋರ್ ಕಮಿಟಿ ಸಭೆ ಇದಾಗಿದೆ. ಪಕ್ಷ ಹಾಗೂ ಸರ್ಕಾರದ ನಡುವೆ ಸಮನ್ವಯತೆ ಕಾಯ್ದುಕೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ. ಪಕ್ಷ ಸಂಘಟನೆ, ಪಕ್ಷದ ಆಂತರಿಕ ಚುನಾವಣೆಗಳು, ಹೊಸ ಪದಾಧಿಕಾರಿಗಳ ನೇಮಕ ವಿಚಾರದ ಬಗ್ಗೆಯೂ ಮಾತುಕತೆ ನಡೆಯಲಿದೆ.
ಸಂಪುಟ ವಿಸ್ತರಣೆಯಿಂದಾಗಿ ಉಂಟಾದ ಅಸಮಾಧಾನದಿಂದ ಪಕ್ಷದ ಮೇಲಾಗಿರುವ ದುಷ್ಪರಿಣಾಮಗಳು, ಸಚಿವ ಸ್ಥಾನ ವಂಚಿತರಿಂದಾಗಿ ಪಕ್ಷಕ್ಕಾಗಿರುವ ಬಾಧೆಗಳ ಸಭೆಯಲ್ಲಿ ಮಹತ್ವದ ಚರ್ಚೆ ಸಾಧ್ಯತೆ ಇದ್ದು, ಅನರ್ಹ ಶಾಸಕರ ಮುಂದಿನ ಭವಿಷ್ಯದ ಕುರಿತು ಅಭಿಪ್ರಾಯ ವಿನಿಮಯವಾಗಲಿದೆ.