ಬೆಂಗಳೂರು: ಬಿಜೆಪಿ ಪಾಳಯದಲ್ಲಿ ತಲೆದೋರಿದ್ದ ನಾಯಕತ್ವ ಬದಲಾವಣೆ ವಿಷಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗೆದ್ದು ಬೀಗಿದ್ದಾರೆ. ಉಸ್ತುವಾರಿ ಮೂಲಕವೇ ಭಿನ್ನರಿಗೆ ಎಚ್ಚರಿಕೆಯ ಸಂದೇಶ ರವಾನಿಸಿ ವಿಕ್ಟರಿ ಚಿಹ್ನೆ ತೋರಿಸುತ್ತಾ ಪಕ್ಷದ ಕಚೇರಿಯಿಂದ ನಗು ನಗುತ್ತಲೇ ನಿರ್ಗಮಿಸಿ ಕುರ್ಚಿ ಭದ್ರ ಎನ್ನುವ ಸಂದೇಶ ನೀಡಿದ್ದಾರೆ.
ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಭಿನ್ನರಿಗೆ ಶಾಕ್ ನೀಡುವ ಗೇಮ್ ಪ್ಲೇ ಮಾಡುವಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಫಲರಾಗಿದ್ದಾರೆ. ಕೊರೊನಾ ನಿರ್ವಹಣೆಯಲ್ಲಿ ತೊಡಗಿಕೊಂಡಿರುವಾಗ ನಾಯಕತ್ವ ಬದಲಾವಣೆ ಹೇಳಿಕೆ ನೀಡಿದರೆ ಹೇಗೆ ಕೆಲಸ ಮಾಡಲು ಸಾಧ್ಯ? ಸಂಯಮವನ್ನೇ ದೌರ್ಬಲ್ಯ ಎಂದುಕೊಂಡು ಪದೇಪದೆ ಅನಗತ್ಯವಾಗಿ ಸ್ವಪಕ್ಷೀಯ ಶಾಸಕರೇ ಆರೋಪ ಮಾಡಿದಾಗಲೂ ಪಕ್ಷ ನೆರವಿಗೆ ಬಾರದಿದ್ದಲ್ಲಿ ಆಡಳಿತ ಹೇಗೆ ನಡೆಸಬೇಕು? ಪ್ರತಿಪಕ್ಷಗಳ ರೀತಿ ಸ್ವಪಕ್ಷೀಯರೇ ಕುಟುಂಬ ರಾಜಕಾರಣ, ಭ್ರಷ್ಟಾಚಾರ, ಇತರ ಪಕ್ಷಗಳ ಜೊತೆ ಹೊಂದಾಣಿಕೆ, ಸಾವಿರಾರು ಕೋಟಿ ಕಿಕ್ ಬ್ಯಾಕ್, ಟೆಲಿಫೋನ್ ಕದ್ದಾಲಿಕೆ ಆರೋಪ ಮಾಡಿದ್ದರೂ ಎಚ್ಚರಿಕೆ ನೀಡದಿದ್ದಲ್ಲಿ ಗೊಂದಲಕ್ಕೆ ತೆರೆ ಬೀಳುವುದಿಲ್ಲ. ಇದನ್ನು ಇಲ್ಲಿಯೇ ಮುಗಿಸಬೇಕು ಎಂದು ಕೋರ್ ಕಮಿಟಿ ಸಭೆಯಲ್ಲಿ ಪ್ರಸ್ತಾಪವಾಗುವಂತೆ ನೋಡಿಕೊಂಡರು.
ಹಿರಿಯ ಸಚಿವರು ಕೂಡ ಸಿಎಂ ಯಡಿಯೂರಪ್ಪನವರ ಈ ಪ್ರಸ್ತಾಪಕ್ಕೆ ಬೆಂಬಲ ಸೂಚಿಸಿದರು. ಬಹಿರಂಗವಾಗಿ ಹೇಳಿಕೆ ನೀಡಿ ಪಕ್ಷ ಮತ್ತು ಸರ್ಕಾರಕ್ಕೆ ಮುಜುಗರವನ್ನು ತರಲಾಗಿದೆ. ಏನೇ ಇದ್ದರೂ ಪಕ್ಷದ ಚೌಕಟ್ಟಿನಲ್ಲಿ ಚರ್ಚೆ ಮಾಡಬೇಕು. ಪಕ್ಷದ ಶಿಸ್ತು ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಜನತೆಗೆ ಬೇರೆಯ ಸಂದೇಶವೇ ರವಾನೆಯಾಗಲಿದೆ. ಪಕ್ಷದ ವಿರುದ್ಧ ಕೆಲಸ ಮಾಡುವವರ ಸಂಖ್ಯೆ ಹೆಚ್ಚಾಗಲಿದೆ. ಇದಕ್ಕೆ ಕಡಿವಾಣ ಹಾಕಲೇಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇತ್ತೀಚಿನ ದಿನಗಳಲ್ಲಿ ಯಡಿಯೂರಪ್ಪ ವಿರುದ್ಧ ಕೆಲವರು ನೀಡುತ್ತಿರುವ ಹೇಳಿಕೆ, ಇಂದು ಹೆಚ್.ವಿಶ್ವನಾಥ್ ಮಾಡಿರುವ ಕಿಕ್ ಬ್ಯಾಕ್ ಆರೋಪ, ಅರವಿಂದ ಬೆಲ್ಲದ್ ಮಾಡಿದ ದೂರವಾಣಿ ಕದ್ದಾಲಿಕೆ ಆರೋಪವು ಸ್ವತಃ ಅರುಣ್ ಸಿಂಗ್ ಗೂ ಕಸಿವಿಸಿ ಉಂಟು ಮಾಡಿತು. ಇಂತಹ ಗಂಭೀರ ಆರೋಪಗಳನ್ನು ಬಹಿರಂಗವಾಗಿ ಮಾಡಿದ್ದು ಸರಿಯಲ್ಲ ಎನ್ನುವುದನ್ನು ಒಪ್ಪಿಕೊಂಡರು. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ತಿಳಿಸಿ ಅರುಣ್ಸಿಂಗ್ ಕ್ರಮ ಕೈಗೊಳ್ಳಲು ಸೂಚಿಸಿದರು.
ತಮ್ಮ ವಿರುದ್ಧ ಕೆಲವರು ಮಾಡಿದ ಆರೋಪಗಳಿಗೆ ಸಿಎಂ ಸ್ಪಷ್ಟೀಕರಣ ನೀಡಿದರು. ಅನುದಾನ ಹಂಚಿಕೆ ಕುರಿತ ಆರೋಪ ಅಲ್ಲಗಳೆದು ಅನುದಾನ ಬಿಡುಗಡೆ ವಿವರವನ್ನು ಅರುಣ್ ಸಿಂಗ್ಗೆ ನೀಡಿದರು. ಶಾಸಕರ ಕೆಲಸ ನಿರ್ಲಕ್ಷ್ಯ ಮಾಡಲಾಗುತ್ತಿದೆ ಎನ್ನುವುದನ್ನು ತಳ್ಳಿಹಾಕಿ ಇತಿಮಿತಿಯಲ್ಲಿ ಏನೇನು ಮಾಡಿಕೊಡಲಾಗಿದೆ ಎನ್ನುವ ಮಾಹಿತಿ ನೀಡಿದರು. ನಂತರ ಶಾಸಕರ ಕೆಲಸ ಮಾಡಿಕೊಡಲು ಸಂಪುಟ ಸಹೋದ್ಯೋಗಿಗಳಿಗೆ ಮತ್ತೊಮ್ಮೆ ಸಲಹೆ ನೀಡಲಾಗುತ್ತದೆ ಎಂದರು.