ಬೆಂಗಳೂರು:ರಾಜ್ಯದಲ್ಲಿ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿರುವ ಕೊರೊನಾ ಎರಡನೇ ಅಲೆ ನಿಯಂತ್ರಣ ವಿಚಾರದಲ್ಲಿ ಸರ್ಕಾರಕ್ಕೆ ಪಕ್ಷ ಸಾಥ್ ನೀಡಬೇಕು. ಸರ್ಕಾರ ಮತ್ತು ಪಕ್ಷ ಒಟ್ಟಾಗಿ ಕೆಲಸ ಮಾಡಬೇಕು ಎನ್ನುವ ಮಹತ್ವದ ನಿರ್ಧಾರವನ್ನು ಬಿಜೆಪಿ ಕೋರ್ ಕಮಿಟಿ ಸಭೆ ಕೈಗೊಂಡಿದೆ.
ರಾಜ್ಯ ಬಿಜೆಪಿ ಘಟಕದ ಹೊಸ ಕೋರ್ ಕಮಿಟಿ ರಚನೆಯ ನಂತರ ಮೊದಲನೇ ಸಭೆ ಶನಿವಾರ ರಾತ್ರಿ ನಡೆಯಿತು. ವರ್ಚುವಲ್ ಮೂಲಕ ಸತತ ಮೂರು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಹಲವು ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು.
ಕರ್ನಾಟಕದಲ್ಲಿ ನಡೆದ (ಬೆಳಗಾವಿ, ಮಸ್ಕಿ ಮತ್ತು ಬಸವಕಲ್ಯಾಣ) ಉಪಚುನಾವಣೆಯ ಬಗ್ಗೆ ಚರ್ಚಿಸಲಾಯಿತು. ಸೋಲು-ಗೆಲುವಿನ ವಿಚಾರದ ವಿಶ್ಲೇಷಣೆ ನಡೆಯಿತು. ಬೆಳಗಾವಿಯಲ್ಲಿ ಕಳೆದ ಬಾರಿ ನಾಲ್ಕು ಲಕ್ಷಗಳ ಅಂತರದ ಗೆಲುವು ಇದ್ದದ್ದು ಉಪಚುನಾವಣೆಯಲ್ಲಿ ಸಾವಿರಕ್ಕೆ ಇಳಿದಿದ್ದು ಹೇಗೆ?. ಮಸ್ಕಿಯಲ್ಲಿ ಸೋತಿದ್ದು ಯಾಕೆ ಎಂಬೆಲ್ಲಾ ವಿಚಾರದ ಬಗ್ಗೆ ಸಭೆಯಲ್ಲಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಪ್ರಶ್ನಿಸಿದರು.
ಮಸ್ಕಿಯಲ್ಲಿ ಕಳೆದ ಬಾರಿ ನಮ್ಮ ಅಭ್ಯರ್ಥಿ ಕೇವಲ 213 ಮತಗಳ ಅಂತರದಿಂದ ಸೋತಿದ್ದರು. ಈ ಬಾರಿ ಅಂತರ 20 ಸಾವಿರ ದಾಟಿತು. ಈ ಬಾರಿ ಮಸ್ಕಿಯಲ್ಲಿ ನಮ್ಮ ಅಭ್ಯರ್ಥಿಗೆ ವರ್ಚಸ್ಸು ಇರಲಿಲ್ಲ. ಸಾಕಷ್ಟು ಪ್ರಯತ್ನ ನಡೆಸಿದ್ದೆವು. ಅಭ್ಯರ್ಥಿಗೆ ಅವರ ಬಗೆಗೆ ಕ್ಷೇತ್ರದಲ್ಲಿ ಎದುರಾದ ನಕಾರಾತ್ಮಕ ಅಂಶಗಳು ಗೆಲುವಿಗೆ ಅಡ್ಡಿಯಾಯಿತು ಎಂದು ಸಭೆಯಲ್ಲಿ ಸಿಎಂ ಯಡಿಯೂರಪ್ಪ ವಿವರಣೆ ನೀಡಿದರು.
ಬೆಳಗಾವಿಯಲ್ಲಿ ಮತಗಳ ಅಂತರ ತಗ್ಗಿದ ಬಗ್ಗೆ ಸಚಿವ ಜಗದೀಶ್ ಶೆಟ್ಟರ್ ವಿವರಣೆ ನೀಡಿದರು. ಮರಾಠ ಮತಗಳು ಸಮಸ್ಯೆಯಾಯಿತು. ಪಕ್ಷದ ಕೆಲವು ನಾಯಕರು ಸರಿಯಾಗಿ ಜವಾಬ್ದಾರಿ ನಿರ್ವಹಿಸಲಿಲ್ಲ ಎಂದು ಅಸಮಾಧಾನವನ್ನೂ ವ್ಯಕ್ತಪಡಿಸಿದರು ಎನ್ನಲಾಗಿದೆ. ಬೆಳಗಾವಿ ಗೆಲುವು, ಮಸ್ಕಿ ಸೋಲಿನ ಆತ್ಮಾವಲೋಕನ ಅಗತ್ಯ ಎಂದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಬಸವಕಲ್ಯಾಣ ಗೆಲುವಿಗೆ ಸಂತಸ ವ್ಯಕ್ತಪಡಿಸಿದರು.
ನಂತರ ಪಂಚರಾಜ್ಯಗಳ ಚುನಾವಣೆಯ ವಿಶ್ಲೇಷಣೆ ಮತ್ತು ವರದಿಯನ್ನು ತೆಗೆದುಕೊಳ್ಳಲಾಯಿತು. ಪುದುಚೆರಿಯಲ್ಲಿ ಬಿಜೆಪಿ ಸರ್ಕಾರ ರಚನೆ ಹಿನ್ನೆಲೆಯಲ್ಲಿ ಉಸ್ತುವಾರಿ ಆಗಿದ್ದ ಕೋರ್ ಕಮಿಟಿ ಸದಸ್ಯ ನಿರ್ಮಲ್ ಕುಮಾರ್ ಸುರಾನಾ ತಂಡಕ್ಕೆ ಸಭೆಯಲ್ಲಿ ಅಭಿನಂದನೆ ಸಲ್ಲಿಸಲಾಯಿತು. ಅದೇ ರೀತಿ ತಮಿಳುನಾಡಿನಲ್ಲಿ ನಾಲ್ಕು ಸ್ಥಾನಗಳ ಗೆಲುವಿಗೆ ಕಾರಣವಾದ ಬಿಜೆಪಿ ಉಸ್ತುವಾರಿ ಸಿ.ಟಿ. ರವಿಗೆ ಸಭೆಯಲ್ಲಿ ಅಭಿನಂದನೆ ಸಲ್ಲಿಸಲಾಯಿತು.
ಕಡೆಯದಾಗಿ ಕೊರೊನಾ 2.0 ನಿವಾರಣೆ ದಿಕ್ಕಿನಲ್ಲಿ ಸರ್ಕಾರ ಮತ್ತು ಪಕ್ಷ ಒಟ್ಟಾಗಿ ಕೆಲಸ ಮಾಡುವ ದೃಷ್ಟಿಯಿಂದ ಕೆಲವು ಚರ್ಚೆಗಳನ್ನು ನಡೆಸಲಾಯಿತು. ಕೊರೊನಾ ನಿರ್ವಹಣೆ ಇನ್ನಷ್ಟು ಬಲಗೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತವಾಯಿತು. ಆಕ್ಸಿಜನ್ ವ್ಯವಸ್ಥೆ ವಿಚಾರದ ಬಗ್ಗೆ ಕೂಡಾ ಚರ್ಚೆ ನಡೆಯಿತು. ಈ ವೇಳೆ ಆಕ್ಸಿಜನ್ ಸರಬರಾಜು ಬಗ್ಗೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ ಮತ್ತು ಸದಾನಂದ ಗೌಡ ನಿರ್ವಹಣೆ ಮಾಡುತ್ತಾರೆ ಎಂದು ಸಭೆಯಲ್ಲಿ ಸಿಎಂ ಯಡಿಯೂರಪ್ಪ ತಿಳಿಸಿದರು. ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ಸದಾನಂದಗೌಡ, ಹತ್ತು ದಿನಗಳ ಒಳಗೆ ಸ್ಟ್ರೀಮ್ ಲೈನ್ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.