ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಬಿರುಸಿನ ಸಿದ್ಧತೆ ಕೈಗೊಂಡು, ಯಾತ್ರೆಗಳನ್ನು ಆರಂಭಿಸುತ್ತಿವೆ. ಬಿಎಸ್ವೈ ನೇತೃತ್ವದಲ್ಲಿ ಬಿಜೆಪಿ, ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಮತ್ತು ಹೆಚ್ಡಿಕೆ ನೇತೃತ್ವದಲ್ಲಿ ಜೆಡಿಎಸ್ ಯಾತ್ರೆ ಮೂಲಕ ಜನರ ಬಳಿ ತೆರಳಲು ಮುಂದಾಗಿದ್ದಾರೆ. ಮೂವರು ಮಾಜಿ ಮುಖ್ಯಮಂತ್ರಿಗಳು ತಮ್ಮ ತಮ್ಮ ಪಕ್ಷವನ್ನು ಅಧಿಕಾರಕ್ಕೆ ತರುವ ಘೋಷಣೆಯೊಂದಿಗೆ ಆತ್ಮವಿಶ್ವಾಸದಿಂದ ಚುನಾವಣಾ ಪ್ರಚಾರದ ಅಖಾಡಕ್ಕೆ ಇಳಿಯುತ್ತಿದ್ದಾರೆ.
2023 ರ ಮೇ ತಿಂಗಳಿನಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ನಡೆಯಲಿದ್ದು, ರಾಜಕೀಯ ಪಕ್ಷಗಳಲ್ಲಿ ಹೊಸ ಉತ್ಸಾಹ ಬಂದಿದೆ. ನಾಯಕರು ಹೊಸ ಹುಮ್ಮಸ್ಸಿನೊಂದಿಗೆ ಪಕ್ಷ ಸಂಘಟಿಸುತ್ತಿದ್ದಾರೆ. ದಾವಣಗೆರೆಯಲ್ಲಿ ಸಿದ್ದರಾಮೋತ್ಸವದ ಮೂಲಕ ಕಾಂಗ್ರೆಸ್ ಭರ್ಜರಿ ಶಕ್ತಿಪ್ರದರ್ಶನದ ಮೂಲಕ ಚುನಾವಣಾ ಕಣಕ್ಕೆ ಧುಮುಕುವ ಸುಳಿವು ನೀಡಿತ್ತು. ನಂತರ ರಾಜ್ಯದಲ್ಲಿ ನಡೆದ ರಾಹುಲ್ ಗಾಂಧಿ ಪಾದಯಾತ್ರೆ ಕಾಂಗ್ರೆಸ್ಗೆ ಹೊಸ ಶಕ್ತಿ ನೀಡಿದೆ. ಈ ಬೆನ್ನಲ್ಲೇ ಜನ ಸ್ಪಂದನ ಕಾರ್ಯಕ್ರಮದ ಮೂಲಕ ಆಡಳಿತಾರೂಢ ಬಿಜೆಪಿ ರಾಜ್ಯದಲ್ಲಿ ಭರ್ಜರಿ ಶಕ್ತಿ ಪ್ರದರ್ಶನ ಮಾಡುವ ಜೊತೆಗೆ ಜಿಲ್ಲಾ ಪ್ರವಾಸ ಕೈಗೊಂಡಿದೆ.
ಈ ಎರಡು ರಾಷ್ಟ್ರೀಯ ಪಕ್ಷಗಳ ಅಬ್ಬರಕ್ಕೆ ಸೆಡ್ಡು ಹೊಡೆದಿರುವ ಪ್ರಾದೇಶಿಕ ಪಕ್ಷ ಜೆಡಿಎಸ್, ಜನತಾ ಜಲಧಾರೆ ಮೂಲಕ ತನ್ನ ಶಕ್ತಿ ಪ್ರದರ್ಶನ ಮಾಡಿದೆ. ಇಷ್ಟಕ್ಕೆ ಸುಮ್ಮನಾಗದೆ ರಾಜ್ಯದಲ್ಲಿ ನ.1ರಿಂದ ಪಂಚರತ್ನ ರಥಯಾತ್ರೆ ಆರಂಭಿಸಿ ಚುನಾವಣಾ ರಣ ಕಹಳೆ ಮೊಳಗಿಸಲು ಸಜ್ಜಾಗಿದೆ.
ಜೆಡಿಎಸ್ನಿಂದ ಪಂಚರತ್ನ ರಥಯಾತ್ರೆ: ನವೆಂಬರ್ 1 ರಂದು ರಾಜ್ಯದಲ್ಲಿ ಜೆಡಿಎಸ್ನ ಪಂಚರತ್ನ ರಥಯಾತ್ರೆ ಆರಂಭವಾಗಲಿದೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕುರುಡುಮಲೆ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ರಥಯಾತ್ರೆಗೆ ಚಾಲನೆ ನೀಡಲಾಗುತ್ತದೆ. ಅದಕ್ಕೂ ಮೊದಲು ಗುರುವಾರ ಬೆಳಗ್ಗೆ ಬೆಂಗಳೂರಿನ ಗವಿಗಂಗಾಧರ ದೇವಸ್ಥಾನದಲ್ಲಿ ಒಂದು ರಥಕ್ಕೆ ಪೂಜೆ ನಡೆಸಲಾಗುತ್ತದೆ. 1994ರಲ್ಲಿ ಹೆಚ್.ಡಿ.ದೇವೇಗೌಡರು ಕುರುಡುಮಲೆಯಿಂದಲೇ ಚುನಾವಣಾ ಪ್ರಚಾರ ಆರಂಭ ಮಾಡಿದ್ದರು. ಆಗ ಅವರು ಅಮೋಘ ಬಹುಮತ ಗಳಿಸಿ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದಿದ್ದರು. ಈಗ ಅಲ್ಲಿಂದಲೇ ಪಂಚರತ್ನ ರಥಯಾತ್ರೆ ಆರಂಭಿಸಿ ಮತ್ತೆ ವಿಜಯ ಪತಾಕೆ ಹಾರಿಸುವ ಸಿದ್ಧತೆಯನ್ನು ದಳಪತಿಗಳು ಸಿದ್ಧತೆ ನಡೆಸಿದ್ದಾರೆ.
ನವೆಂಬರ್ 1 ರಿಂದ 5ರವರೆಗೆ ಕೋಲಾರ ಜಿಲ್ಲೆಯ ಐದು ವಿಧಾನಸಭೆ ಕ್ಷೇತ್ರಗಳಲ್ಲಿ ರಥಯಾತ್ರೆ ನಡೆಯಲಿದೆ. ನ.6 ರಿಂದ 10 ರವರೆಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ, 11 ರಿಂದ 13 ರವರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ, 14 ರಿಂದ 23ರ ವರೆಗೆ ತುಮಕೂರು ಜಿಲ್ಲೆಯಲ್ಲಿ, 24 ರಿಂದ 30ರ ವರೆಗೆ ಹಾಸನ ಜಿಲ್ಲೆಯಲ್ಲಿ, ಡಿಸೆಂಬರ್ 1 ರಂದು ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ ಹಾಗೂ ಡಿಸೆಂಬರ್ 2 ರಿಂದ 5ರ ವರೆಗೆ ರಾಮನಗರ ಜಿಲ್ಲೆಯಲ್ಲಿ ರಥಯಾತ್ರೆ ಸಂಚಾರ ಮಾಡಲಿದೆ. ಒಟ್ಟು 35 ದಿನಗಳ ಕಾಲ ನಡೆಯುವ ಮೊದಲ ಹಂತದ ರಥ ಯಾತ್ರೆಯಲ್ಲಿ ಅನೇಕ ಹಳ್ಳಿ, ಪಟ್ಟಣಗಳನ್ನು ತಲುಪಿ ಉದ್ಯೋಗ, ಶಿಕ್ಷಣ, ನೀರಾವರಿ, ಕೃಷಿ, ಆರೋಗ್ಯ, ಮಹಿಳಾ ಮತ್ತು ಯುವಜನ ಸಬಲೀಕರಣ ಕುರಿತಂತೆ ರೂಪಿಸಿರುವ ಪಂಚರತ್ನ ಯೋಜನೆ ವಿವರ ನೀಡಿ ಜೆಡಿಎಸ್ ನಾಯಕರು, ಜನರನ್ನು ಸೆಳೆಯಲಿದ್ದಾರೆ.
ಕಾಂಗ್ರೆಸ್ನಿಂದ ಬಸ್ ಯಾತ್ರೆ: ಜೆಡಿಎಸ್ ರಥಯಾತ್ರೆ ಬೆನ್ನಲ್ಲೇ ಕಾಂಗ್ರೆಸ್ ಬಸ್ ಯಾತ್ರೆಗೆ ಮುಂದಾಗಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಕೈ ನಾಯಕರು ರಾಜ್ಯ ಪ್ರವಾಸ ಮಾಡಿ ಪಕ್ಷ ಸಂಘಟಿಸಲಿದ್ದಾರೆ. ಇದಕ್ಕಾಗಿ ಎರಡು ಬಸ್ಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದ್ದು, ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಎರಡು ತಂಡಗಳಲ್ಲಿ ಬಸ್ ಮೂಲಕವೇ ರಾಜ್ಯ ಪ್ರವಾಸ ಮಾಡಲಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಜನತೆಯ ಮುಂದಿಟ್ಟು, ಕಾಂಗ್ರೆಸ್ ಸರ್ಕಾರದ ವೇಳೆ ಜಾರಿಗೆ ತರಲಾಗಿದ್ದ ಜನಪರ ಕಾರ್ಯಕ್ರಮಗಳನ್ನು ತಿಳಿಸಿ ಮತಯಾಚನೆ ಮಾಡಲಿದ್ದಾರೆ.
ಐಕ್ಯತಾ ಯಾತ್ರೆಯಿಂದ ಸೃಷ್ಟಿಯಾಗಿರುವ ಸಂಚಲನವನ್ನು ವಿಧಾನಸಭೆ ಚುನಾವಣೆವರೆಗೆ ಕಾಯ್ದಿಟ್ಟುಕೊಂಡು ಹೋಗಲು ಈ ಬಸ್ ಯಾತ್ರೆಗೆ ರಾಜ್ಯ ಕಾಂಗ್ರೆಸಿಗರು ಅಣಿಯಾಗಿದ್ದಾರೆ. ನವೆಂಬರ್ 2ನೇ ವಾರದಲ್ಲಿ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನೇತೃತ್ವದ ಎರಡು ಪ್ರತ್ಯೇಕ ತಂಡಗಳು ರಾಜ್ಯ ಪ್ರವಾಸ ಹೊರಡಲಿದ್ದು, ಪ್ರತಿ ತಂಡದಲ್ಲಿ 15 ಮುಂಚೂಣಿ ನಾಯಕರು ಸಾಥ್ ನೀಡಲಿದ್ದಾರೆ.