ಬೆಂಗಳೂರು : ಸಚಿವ ಉಮೇಶ್ ಕತ್ತಿ ನಿಧನಕ್ಕೆ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿಗಳಾದ ಹೆಚ್ ಡಿ ಕುಮಾರಸ್ವಾಮಿ ಮತ್ತು ಬಿ.ಎಸ್. ಯಡಿಯೂರಪ್ಪ ಸಂತಾಪ ವ್ಯಕ್ತಪಡಿಸಿದ್ದಾರೆ.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸಚಿವರಾದ ಉಮೇಶ್ ಕತ್ತಿ ಅವರ ನಿಧನದಿಂದ ತೀವ್ರ ದುಃಖಿತನಾಗಿದ್ದೇನೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಕುಟುಂಬವರ್ಗಕ್ಕೆ ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಕನ್ಯಾಕುಮಾರಿ ಪ್ರವಾಸ ರದ್ದು: ಎಚ್ ಎ ಎಲ್ ವಿಮಾನ ನಿಲ್ದಾಣಕ್ಕೆ ತೆರಳಿ ಸಚಿವ ಉಮೇಶ್ ಕತ್ತಿಯವರಿಗೆ ಅಂತಿಮ ನಮನ ಸಲ್ಲಿಸಿದರು. ತಮ್ಮ ಕನ್ಯಾಕುಮಾರಿ ಪ್ರವಾಸ ರದ್ದುಪಡಿಸಿರುವ ಸಿದ್ದರಾಮಯ್ಯ ಸಚಿವ ಉಮೇಶ್ ಕತ್ತಿಯವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಮಧ್ಯಾಹ್ನ ಬೆಳಗಾವಿಗೆ ಪ್ರಯಾಣ ಬೆಳೆಸಲಿದ್ದಾರೆ.
ಇದ್ದುದನ್ನು ಇದ್ದಂತೆ ಹೇಳುವ ನೇರ ನಡೆ-ನುಡಿಯ ವ್ಯಕ್ತಿತ್ವ :25ನೇ ವಯಸ್ಸಿಗೆ ವಿಧಾನಸಭೆ ಪ್ರವೇಶಿಸಿದ್ದ ಅವರು ಉತ್ತರ ಕರ್ನಾಟಕದ ಗಟ್ಟಿ ಧ್ವನಿಯಾಗಿದ್ದರು. ಇದ್ದುದನ್ನು ಇದ್ದಂಗೆ ಹೇಳುವ ನೇರ ನಡೆ-ನುಡಿಯ ವ್ಯಕ್ತಿತ್ವ ಹೊಂದಿದ್ದ ಉಮೇಶ್ ಕತ್ತಿ ಅವರು ಜನರ ಸಮಸ್ಯೆ, ಭಾವನೆಗಳಿಗೆ ಧ್ವನಿ ಆಗುವಾಗ ಆಡಳಿತ ಪಕ್ಷ, ಪ್ರತಿ ಪಕ್ಷ ಎಂದು ಭೇದ ಮಾಡುತ್ತಿರಲಿಲ್ಲ. ಸಕ್ಕರೆ ಉದ್ಯಮಕ್ಕೆ ಅವರ ಕೊಡುಗೆ ಮರೆಯುವಂತಿಲ್ಲ. ಕತ್ತಿ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬ ಸದಸ್ಯರು ಹಾಗೂ ಅಭಿಮಾನಿಗಳಿಗೆ ಈ ಅಗಲಿಕೆ ನೋವು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ' ಎಂದು ಡಿ ಕೆ ಶಿವಕುಮಾರ್ ಸಂತಾಪ ವ್ಯಕ್ತಪಡಿಸಿದ್ದಾರೆ.