ಬೆಂಗಳೂರು : ಹೆಡ್ಗೇವಾರ್, ಸಾವರ್ಕರ್ ಪಠ್ಯ ಕೈಬಿಟ್ಟು ಟಿಪ್ಪು ಮತ್ತು ನೆಹರೂ ಪತ್ರವನ್ನು ಪಠ್ಯದಲ್ಲಿ ಸೇರಿಸುವ ರಾಜ್ಯ ಸಚಿವ ಸಂಪುಟದ ನಿರ್ಧಾರವನ್ನು ಬಿಜೆಪಿ ಖಂಡಿಸಿದೆ. ಈ ಸಂಬಂಧ ಬಿಜೆಪಿ ಸಾವರ್ಕರ್ ಪಾಠ ತೆರವು ವಿಷಯವನ್ನು ನಾವು ಜನರ ಬಳಿ ತೆಗೆದುಕೊಂಡು ಹೋಗುತ್ತೇವೆ. ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್, ಲೋಕಸಭೆ ಚುನಾವಣೆಗೆ ತೆಗೆದುಕೊಂಡು ಹೋಗುತ್ತೇವೆ. ಪೋಷಕರ ಬಳಿ ತೆಗೆದುಕೊಂಡು ಹೋಗುತ್ತೇವೆ, ವಿದ್ಯಾರ್ಥಿಗಳ ಮುಂದೆಯೂ ಇಡುತ್ತೇವೆ ಎಂದು ಬಿಜೆಪಿ ಹೇಳಿದೆ.
ಸಚಿವ ಸಂಪುಟ ನಿರ್ಣಯದ ನಂತರ ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ಸಿದ್ದರಾಮಯ್ಯ ಹಿರಿಯ ರಾಜಕಾರಣಿ, ಅನುಭವಿ ರಾಜಕಾರಣಿ, ಈ ರೀತಿ ದ್ವೇಷದ ರಾಜಕಾರಣ ಮಾಡಬಾರದು, ಸಾವರ್ಕರ್ ಪಾಠ ಓದುವುದರಿಂದ ವಿದ್ಯಾರ್ಥಿಗಳು ದೇಶದ್ರೋಹಿಗಳಾಗುತ್ತಾರಾ? ಎಂದು ಪ್ರಶ್ನಿಸಿದರು. ವಿದೇಶಗಳಿಗೆ ಹೋಗಿ ಭಾರತೀಯ ವಿದ್ಯಾರ್ಥಿಗಳನ್ನು ಸಂಘಟಿಸಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹತ್ತಿಸಿ ಬಹಳ ಬೇಗ ಸ್ವಾತಂತ್ರ್ಯ ಸಿಗಬೇಕು ಎನ್ನುವ ಪ್ರಯತ್ನ ನಡೆಸಿದರು. ಇಂತಹ ಮುಂಚೂಣಿ ನಾಯಕ ಸಾವರ್ಕರ್ ಅವರ ಪಾಠ ತೆಗೆದದ್ದಕ್ಕಿಂತ ದೇಶದ್ರೋಹದ ಕೆಲಸ ಬೇರೊಂದಿಲ್ಲ ಎಂದು ಅವರು ಟೀಕಿಸಿದರು.
ದೇಶದ ಎಲ್ಲ ಸ್ವಾತಂತ್ರ್ಯ ಹೋರಾಟಗಾರರಿಗೆ ಮುಂಚೂಣಿ ನಾಯಕರಾಗಿ ಸಾವರ್ಕರ್ ಕೆಲಸ ಮಾಡಿದ್ದರು. ಮದನ್ ಲಾಲ್ ದಿಂಗ್ರ ವಿದೇಶದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿ ದೇಶದ ಬೀದಿಯಲ್ಲಿ ನೃತ್ಯ ಮಾಡುತ್ತ ಕಾಲ ಹರಣ ಮಾಡುವಾಗ ಅವರ ಕೆನ್ನೆಗೆ ಬಾರಿಸಿ ಸ್ವಾತಂತ್ರ್ಯ ಹೋರಾಟದ ಬದಲು ನೃತ್ಯ ಮಾಡುತ್ತಾ ಕಾಲ ಹರಣ ಕಳೆಯುತ್ತೀಯಾ ಎಂದು ತಿಳಿ ಹೇಳಿ ಮನಪರಿವರ್ತನೆ ಮಾಡಿದ ವ್ಯಕ್ತಿ. ಈ ರೀತಿ ಸಾವಿರಾರು ಜನರ ಮನ ಪರಿವರ್ತನೆ ಮಾಡಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಚ್ಚಿದ್ದರು. ಸಮುದ್ರದಲ್ಲಿ ಮೂರು ಕಿಲೋಮೀಟರ್ ಈಜಿ ಬ್ರಿಟಿಷರಿಂದ ತಪ್ಪಿಸಿಕೊಂಡು ಸ್ವಾತಂತ್ರ್ಯ ಹೋರಾಟ ಮಾಡಿದ್ದ ಸಾವರ್ಕರ್ ಅವರನ್ನು ಹೇಡಿ ಎಂದು ಕರೆಯುವ ನೀವು ಹೇಡಿಗಳು ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಟಿಪ್ಪು ಸುಲ್ತಾನ್ ಪಾಠ ಓದಿ ಎನ್ನುತ್ತಿದ್ದಾರೆ. ಮುಸ್ಲಿಂರೇನು ಟಿಪ್ಪು ಪಾಠ ಓದಿ ಎನ್ನುವ ಬೇಡಿಕೆ ಇಟ್ಟಿದ್ದಾರಾ? ಇವರೇ ಬೇಕು ಎಂದು ತುಷ್ಟೀಕರಣ ಮಾಡುತ್ತಿದ್ದಾರೆ, ಬೇಡವಾದ ವಿಷಯ ಇಡುತ್ತಿದ್ದಾರೆ. ಟಿಪ್ಪು ದೇವಾಲಯ ದ್ವಂಸ ಮಾಡಲಿಲ್ಲವಾ, ಮತಾಂತರ ಮಾಡಲಿಲ್ಲವಾ? ಮಂಡ್ಯದ ಮೇಲುಕೋಟೆಯಲ್ಲಿ ಇಂದಿಗೂ ಯಾಕೆ ದೀಪಾವಳಿ ಆಚರಿಸುತ್ತಿಲ್ಲ ಗೊತ್ತಾ? ದೀಪಾವಳಿ ವೇಳೆ ಮತಾಂತರಕ್ಕಾಗಿ ರಕ್ತದ ಕೋಡಿ ಹರಿಸಿದ್ದ ಆ ಕಾರಣಕ್ಕೆ ಇಂದೂ ಅಲ್ಲಿ ದೀಪಾವಳಿ ಮಾಡುತ್ತಿಲ್ಲ. ಅಂತಹ ವ್ಯಕ್ತಿಯ ಪಾಠವನ್ನು ಓದಬೇಕಾ, ಪಠ್ಯದಲ್ಲಿ ಇಡುತ್ತೇವೆ ಎನ್ನುತ್ತಿದ್ದೀರಲ್ಲ ನಿಮಗೆ ಏನನ್ನಬೇಕು ಎಂದು ಕಿಡಿಕಾರಿದರು.