ಬೆಂಗಳೂರು: ಅತ್ತ ಕಾಂಗ್ರೆಸ್ ಮತದಾರರ ಪರಿಷ್ಕರಣೆ ಅಕ್ರಮ ಆರೋಪಿಸಿ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದ್ದರೆ, ಇತ್ತ ಬಿಜೆಪಿ ನಿಯೋಗವೂ ಕಾಂಗ್ರೆಸ್ ವಿರುದ್ಧ ರಾಜ್ಯ ಮುಖ್ಯ ಚುನಾವಾಣಾಧಿಕಾರಿಗೆ ದೂರು ನೀಡಿದೆ.
ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿ ಕುಮಾರ್, ಶಾಸಕ ರವಿ ಸುಬ್ರಮಣ್ಯ, ಎಂಎಲ್‌ಸಿ ಛಲವಾದಿ ನಾರಾಯಣ ಸ್ವಾಮಿ ನಿಯೋಗ ಬೆಂಗಳೂರಿನ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಗೆ ತೆರಳಿ ಕಾಂಗ್ರೆಸ್ ವಿರುದ್ಧ ದೂರು ನೀಡಿದರು. ದೂರಿನಲ್ಲಿ 2017ರಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಚಿಲುಮೆ ಸಂಸ್ಥೆಗೆ ಮತದಾರರ ಪರಿಷ್ಕರಣೆಯ ಅನುಮತಿ ನೀಡಿದ್ದರು.
ಆದರೆ ಕಾಂಗ್ರೆಸ್ ನಾಯಕರು, ಬಿಜೆಪಿಯ ವಿರುದ್ಧ ತಾವು ಕಾರ್ಯಾದೇಶ ನೀಡಿದ್ದನ್ನು ಮರೆತು ಆರೋಪ ಮಾಡುತ್ತಿದ್ದಾರೆ. ಬಿಜೆಪಿ ಇಡೀ ಪ್ರಕರಣದ ಉನ್ನತ ಮಟ್ಟದ ತನಿಖೆಯನ್ನು 2013ರಿಂದ ಕೈಗೊಳ್ಳಲು ಆಯೋಗವನ್ನು ಮನವಿ ಮಾಡಿದೆ.
ಬಿಜೆಪಿ ದೂರಿನಲ್ಲಿನ ಅಂಶಗಳೇನು?:ಮತದಾರರ ಪಟ್ಟಿ ಪರಿಷ್ಕರಣೆಯ ವಿಚಾರದಲ್ಲಿ ಅಕ್ರಮ ನಡೆದಿದೆ ಎನ್ನುವ ಕಾಂಗ್ರೆಸ್ ಪಾರ್ಟಿಯ ಆರೋಪವು ದುರುದ್ದೇಶದಿಂದ ಕೂಡಿದೆ. ಮತದಾರರ ಪಟ್ಟಿಯಲ್ಲಿ 2-3 ಬಾರಿ ಹೆಸರುಗಳು ಪುನರಾವರ್ತನೆಯಾಗಿದ್ದರೆ ಆ ಹೆಸರುಗಳನ್ನು ಕೈ ಬಿಡುವುದು ಚುನಾವಣಾ ಆಯೋಗ ಕಾರ್ಯವಾಗಿದೆ. ಈ ಕಾರ್ಯವನ್ನು ಚುನಾವಣಾ ಆಯೋಗ ಮಾಡುತ್ತಿರುವುದು ಸ್ವಾಗತಾರ್ಹ ಎಂದಿದೆ.
ಇದುವರೆಗೆ ಬೆಂಗಳೂರಿನಲ್ಲಿ ಎರಡು ಮೂರು ಬಾರಿ ಪುನರಾವರ್ತಿತ 6,74,422 ಹೆಸರುಗಳನ್ನು ಮತದಾರರ ಪಟ್ಟಿಯಿಂದ ಬೆಂಗಳೂರು ನಗರದಲ್ಲಿ ತೆಗೆದು ಹಾಕಿರುವುದನ್ನು ಚುನಾವಣಾ ಆಯೋಗ ಈಗಾಗಲೇ ಹೇಳಿದೆ. ಕಾಂಗ್ರೆಸ್ ಪಾರ್ಟಿಯ ಆರೋಪದಂತೆ, ಕಾಂಗ್ರೆಸ್ಗೆ ಸೇರಿದ ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ ಎಂದು ತಮ್ಮ ದೂರಿನಲ್ಲಿ ಇಂದು ಹೇಳಿದೆ.
ಈ ಕುರಿತಂತೆ ತನಿಖೆ ನಡೆಯಲಿ ಆದರೆ ಇದರಲ್ಲಿ, ಬಿಜೆಪಿ ಹೆಸರುಗಳನ್ನು ಸೇರಿಸಲಾಗಿದೆ. ಕಾಂಗ್ರೆಸ್‌ನ ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ ಎಂಬುದು ಅತ್ಯಂತ ಕಪೋ ಕಲ್ಪಿತ ಆರೋಪವಾಗಿದೆ ಎಂದು ದೂರಿದೆ.
ಚುನಾವಣಾ ಆಯೋಗ ಒಂದು ಸ್ವಾಯತ್ತ ಸಂಸ್ಥೆ. ಆ ಸಂಸ್ಥೆಗೆ ಮತದಾರರ ಸೇರ್ಪಡೆ ಮತ್ತು ರದ್ದುಪಡಿಸುವ ಅಧಿಕಾರವಿದೆ. ಇದರಲ್ಲಿ ಲೋಪಗಳಾಗಿದ್ದಲ್ಲಿ ಚುನಾವಣಾ ಆಯೋಗ ಕ್ರಮ ತೆಗೆದುಕೊಳ್ಳಬೇಕೆಂದು ಬಿಜೆಪಿ ಮನವಿ ಮಾಡಿಕೊಳ್ಳುತ್ತದೆ. ಚುನಾವಣಾ ಆಯೋಗದ ಕೆಲಸವನ್ನು ಸರ್ಕಾರದ ಕೆಲಸ ಎನ್ನುವಂತೆ ಬಿಂಬಿಸಿ, ತನ್ನ ಭ್ರಷ್ಟಾಚಾರ ಮುಚ್ಚಿಕೊಳ್ಳುವ ಕಾಂಗ್ರೆಸ್ ಪಾರ್ಟಿ ಜನರಿಗೆ ಸುಳ್ಳು ಮಾಹಿತಿ ನೀಡುತ್ತಿರುವುದು ದುರದೃಷ್ಟಕರ ಸಂಗತಿ.
ಆದರೆ ವಿಪರ್ಯಾಸದ ಸಂಗತಿಯೆಂದರೆ ಚಿಲುಮೆ ಸಂಸ್ಥೆಗೆ ಮತದಾರರ ಜಾಗೃತಿ ಮತ್ತು ಪರಿಷ್ಕರಣೆಯ ಕಾರ್ಯಕ್ಕೆ 2017-18ರಲ್ಲಿ ಅನುಮತಿ ನೀಡಿರುವುದು ಕಾಂಗ್ರೇಸ್ ಸರ್ಕಾರವಿದ್ದಾಗಲೇ. ಆಗಿನ ಮುಖ್ಯಮಂತ್ರಿಗಳು ಇಂದಿನ ವಿರೋಧ ಪಕ್ಷದ ನಾಯಕರಾದ ಸಿದ್ಧರಾಮಯ್ಯನವರ ಆಗಿದ್ದರು ಎಂದು ತಿಳಿಸಿದೆ.
ನವೆಂಬರ್ 17, 2022 ರಂದು ಬಿಬಿಎಂಪಿ ಅಧಿಕಾರಿಯೊಬ್ಬರು ಮತದಾರರ ಜಾಗೃತಿ ಕಾರ್ಯಕ್ರಮಕ್ಕೆ ನಿಯೋಜನೆ ಮಾಡಿರುವ ಚಿಲುಮೆ ಸಂಸ್ಥೆಯು ಮತದಾರರ ಮಾಹಿತಿಯನ್ನು ಕಾನೂನುಬಾಹಿರವಾಗಿ ಸಂಗ್ರಹಿಸುತ್ತಿರುವ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದು ಸ್ವಾಗತಾರ್ಹ ಕ್ರಮವಾಗಿದೆ. ಈ ಕುರಿತು ಏನೇ ಅಕ್ರಮಗಳು ನಡೆದಿದ್ದರೂ ಕ್ರಮ ತೆಗೆದುಕೊಳ್ಳಬೇಕೆಂದು ಬಿಜೆಪಿ ಆಗ್ರಹಿಸುತ್ತಿದೆ.
ಕಾಂಗ್ರೆಸ್ ಪಕ್ಷ ಆರೋಪ ಮಾಡಿದಂತೆ 24 ಲಕ್ಷ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎನ್ನುವುದು ಸತ್ಯಕ್ಕೆ ದೂರವಾಗಿದೆ. ಕೈಬಿಟ್ಟಿರುವುದು ಕೇವಲ 6,73,422 ಮತದಾರರನ್ನು ಮಾತ್ರ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಆರೋಪ ಸತ್ಯಕ್ಕೆ ದೂರವಾಗಿರುವ ಸಂಗತಿ. ಈ ಬಗ್ಗೆ ಚುನಾವಣಾ ಆಯೋಗ ಸ್ಪಷ್ಟಿಕರಣ ನೀಡಬೇಕು ಎಂದು ಮನವಿ ಮಾಡಿದೆ.
ಈ ಹಿನ್ನೆಲೆಯಲ್ಲಿ ಯಾವುದೇ ಖಾಸಗಿ ಸಂಸ್ಥೆ ಅಥವಾ ಯಾವುದೇ ಅಧಿಕಾರಿ ತಪ್ಪು ಮಾಡಿದ್ದರೂ ಅವರ ಬಗ್ಗೆ ಕ್ರಮ ತೆಗೆದುಕೊಳ್ಳಲು ಚುನಾವಣಾ ಆಯೋಗ ಮುಂದಾಗಬೇಕು. ಬೆಂಗಳೂರು ಸೇರಿದಂತೆ ರಾಜ್ಯ ಎಲ್ಲ ಜಿಲ್ಲೆಗಳು ಎಲ್ಲೂ 224 ವಿಧಾನಸಭಾ ಕ್ಷೇತ್ರಗಳನ್ನು ಯಾವುದೇ ಮತದಾರರ ಹೆಸರು 2-3 ಬಾರಿ ಪುನರಾವರ್ತನೆಯಾಗದಂತೆ ಬಿಜೆಪಿ ವಿನಂತಿಸುತ್ತದೆ. ತದನಂತರವೇ ಚುನಾವಣೆ ನಡೆಯಲು ಅನುಕೂಲ ಮಾಡಿಕೊಡಬೇಕೆಂದು ರಾಜ್ಯದ ಜನತೆಗೆ ನ್ಯಾಯ ಸಮ್ಮತ ಚುನಾವಣಾ ಮತದಾರರ ಪಟ್ಟಿಯನ್ನು ನೀಡಬೇಕೆಂದು ಮನವಿ ಮಾಡಿದೆ.
ಇದನ್ನೂ ಓದಿ:ಸಿಎಂ ಹಾಗೂ ಸರ್ಕಾರಕ್ಕೆ ಕಾಂಗ್ರೆಸ್ನಿಂದ 11 ಪ್ರಶ್ನೆ.. ಆ ಪ್ರಶ್ನೆಗಳೇನು?