ಬೆಂಗಳೂರು: ಮಂಡ್ಯ ಜಿಲ್ಲೆಯ ಬೇವಿನಹಳ್ಳಿಯಲ್ಲಿ ನಿನ್ನೆ ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಯಾತ್ರೆ ವೇಳೆ ಕಲಾವಿದರು ಮತ್ತು ಜನರತ್ತ 500 ರೂ. ಕರೆನ್ಸಿ ನೋಟುಗಳನ್ನು ಎಸೆದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಶಾಸಕ ಅಭ್ಯರ್ಥಿ ರಮೇಶ ಬಂಡಿ ಸಿದ್ದೇಗೌಡರ ವಿರುದ್ಧ ಕ್ರಮ ಕೈಗೊಳ್ಳಲು ಬಿಜೆಪಿ ನಿಯೋಗ ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ದೂರು ನೀಡಿದೆ.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್, ಕಾನೂನು ಪ್ರಕೋಷ್ಠದ ರಾಜ್ಯ ಸಂಚಾಲಕ ಯೋಗೇಂದ್ರ ಹೂಡಾಘಟ್ಟ, ರಾಜ್ಯ ಪ್ಯಾನಲಿಸ್ಟ್ ಮಧು ಎನ್ ರಾವ್, ಜಿಲ್ಲಾ ವಕ್ತಾರ ರಾಘವೇಂದ್ರ ರಾವ್ ಅವರ ನಿಯೋಗ ಶೇಷಾದ್ರಿ ರಸ್ತೆಯಲ್ಲಿರುವ ಚುನಾವಣಾ ಅಧಿಕಾರಿಗಳ ಕಚೇರಿಯಲ್ಲಿ ಈ ಸಂಬಂಧ ದೂರು ಸಲ್ಲಿಸಿತು. ಡಿ.ಕೆ. ಶಿವಕುಮಾರ್ ಮತ್ತು ರಮೇಶ ಬಂಡಿ ಸಿದ್ದೇಗೌಡ ಅವರು ಈ ಮೂಲಕ ಮತದಾರರ ಮೇಲೆ ಪ್ರಭಾವ ಬೀರಲು ಮುಂದಾಗಿದ್ದಾರೆ ಎಂದು ಗಮನ ಸೆಳೆಯಲಾಗಿದೆ.
ಎಸ್‍ಡಿಪಿಐ ಮುಖಂಡ ವಿರುದ್ಧ ದೂರು:ಶಾಂತಿ ಕದಡುವ, ದ್ವೇಷ ಹರಡುವ ಮತ್ತು ಮಾನಹಾನಿ ಮಾಡುವ ಉದ್ದೇಶದ ಹೇಳಿಕೆ ಕೊಟ್ಟ ಚಿತ್ರದುರ್ಗ ಜಿಲ್ಲಾ ಎಸ್‍ಡಿಪಿಐ ಅಧ್ಯಕ್ಷ ಜಾಕೀರ್ ಹುಸೇನ್ ವಿರುದ್ಧ ಇನ್ನೊಂದು ದೂರು ಸಲ್ಲಿಕೆ ಆಗಿದೆ.
ಮುಸ್ಲಿಮರ ಮೀಸಲಾತಿ ರದ್ದು ಮಾಡಿದ ಸಂಬಂಧ ಪ್ರತಿಭಟನೆಯಲ್ಲಿ ಮಾತನಾಡಿದ್ದ ಎಸ್‍ಡಿಪಿಐ ಜಿಲ್ಲಾ ಅಧ್ಯಕ್ಷ ಜಾಕೀರ್ ಹುಸೇನ್ ಅವರು, 'ನಮ್ಮ ಹಕ್ಕನ್ನು ಹೀನಾಯವಾಗಿ ಕಸಿದುಕೊಳ್ಳಲಾಗಿದೆ. ನಮ್ಮ ಹಕ್ಕನ್ನು ನಮಗೆ ವಾಪಸ್ ಕೊಡದಿದ್ದರೆ ಸಿಎಂ ಬಸವರಾಜ ಬೊಮ್ಮಾಯಿ ಅವರ ಬಟ್ಟೆ ಬಿಚ್ಚಿಸುತ್ತೇವೆ; ಹಿಜಾಬ್, ಆಜಾನ್‍ಗೆ ತಲೆ ಕೊಟ್ಟೆವು. ಮೀಸಲಾತಿ ವಿಚಾರದಲ್ಲಿ ತಲೆ ಹೋದರೂ ಚಿಂತೆಯಿಲ್ಲ. ಜೈಲಿಗೆ ಹೋದರೂ ಚಿಂತೆಯಿಲ್ಲ. ನಾವೆಲ್ಲ ಉಗ್ರವಾಗಿ ಹೋರಾಡುತ್ತೇವೆ' ಎಂದಿದ್ದರು. ಸಾಮಾಜಿಕ ಶಾಂತಿಗೆ ಹಾನಿ ಉಂಟು ಮಾಡುವ ಮತ್ತು ದ್ವೇಷ ಹರಡುವ ಉದ್ದೇಶದ ಈ ಮಾತುಗಳನ್ನು ಗಮನಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಈ ಮನವಿಯಲ್ಲಿ ಕೋರಲಾಗಿದೆ.
ಈ ಬಗ್ಗೆ ಮಾತನಾಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿ ಕುಮಾರ್ ಅವರು, ಇವತ್ತು ಬಿಜೆಪಿಯಿಂದ ಡಿಕೆಶಿ ವಿರುದ್ಧ ದೂರು ಕೊಟ್ಟಿದ್ದೇವೆ. ಮೊನ್ನೆ ಡಿಕೆಶಿ ಕಲಾವಿದರ ಮೇಲೆ ಹಣ ಎಸೆದು ಅವಮಾನ ಮಾಡಿದ್ದಾರೆ. ಭಿಕ್ಷುಕರಂತೆ ಕಲಾವಿದರ ಮೇಲೆ ಹಣ ಎಸೆದಿದ್ದಾರೆ. ಡಿಕೆಶಿ ವಿರುದ್ಧ ಜನಪ್ರತಿನಿಧಿಗಳ ಕಾಯ್ದೆ ಅಡಿ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದೇವೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದವರು ತಮ್ಮ ಗ್ಯಾರಂಟಿ ಯೋಜನೆಗಳ ಬಗ್ಗೆ ಸಾರ್ವಜನಿಕ ಸ್ಥಳಗಳಲ್ಲಿ ಪೋಸ್ಟರ್ ಅಂಟಿಸಿದ್ದಾರೆ. ಆಟೋಗಳಲ್ಲಿ ಪ್ರಚಾರ ಮಾಡ್ತಿದಾರೆ. ಆದರೆ ಇದಕ್ಕೆಲ್ಲ ಕಾಂಗ್ರೆಸ್ ಅನುಮತಿ ಪಡೆದಿಲ್ಲ. ಇದರ ವಿರುದ್ಧವೂ ದೂರು ಕೊಟ್ಟಿದ್ದೇವೆ ಎಂದರು.
ಇದನ್ನೂ ಓದಿ:ನೀರಾವರಿ ಯೋಜನೆ ಶಂಕುಸ್ಥಾಪನೆ ಕಾರ್ಯಕ್ರಮ ಅರ್ಧಗಂಟೆಯಲ್ಲೇ ಮುಕ್ತಾಯ.. ನೀತಿ ಸಂಹಿತೆಯಿಂದಾಗಿ ಖಾಸಗಿ ವಾಹನದಲ್ಲಿ ತೆರಳಿದ ಸಚಿವರು