ಬೆಂಗಳೂರು:ಕನಕ ವೃತ್ತ ನಾಮಕರಣ ವಿವಾದಕ್ಕೆ ಸಿಲುಕಿದ ಪರಿಣಾಮ ಕೆ.ಆರ್. ಪೇಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣಾ ಉಸ್ತುವಾರಿ ಜವಾಬ್ದಾರಿಯನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಬದಲು ಉಪ ಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ್ ಅವರಿಗೆ ವಹಿಸಲಾಗಿದೆ.
ಬಿಜೆಪಿ ಕಚೇರಿಯಲ್ಲಿ ನಡೆದ ಪಕ್ಷದ ಪ್ರಮುಖರ ಸಭೆಯಲ್ಲಿ ಮಾಧುಸ್ವಾಮಿ ವಿಷಯ ಪ್ರಸ್ತಾಪವಾಗಿದೆ. ಕೆ.ಆರ್. ಪೇಟೆಯ ಹುಳಿಯಾರು ವೃತ್ತಕ್ಕೆ ಕನಕ ವೃತ್ತ ಎಂದು ನಾಮಕರಣ ಮಾಡುವ ವಿಷಯ ಸಂಬಂಧ ಕನಕ ಗುರುಪೀಠದ ಶ್ರೀಗಳ ಬಗ್ಗೆ ಲಘುವಾಗಿ ಮಾತನಾಡಿದ ಆರೋಪಕ್ಕೆ ಕಾನೂನು ಸಚಿವ ಮಾಧುಸ್ವಾಮಿ ಸಿಲುಕಿದ್ದು, ವಿವಾದದ ನಂತರ ಕ್ಷಮೆ ಕೇಳಿಲ್ಲ.
ಸ್ವತಃ ಸಿಎಂ ಯಡಿಯೂರಪ್ಪ ಮಾಧುಸ್ವಾಮಿ ಅವರ ಪರ ಕ್ಷಮೆ ಕೇಳಬೇಕಾಯಿತು. ಇದರಿಂದಾಗಿ ಕ್ಷೇತ್ರದಲ್ಲಿ ಮಾಧುಸ್ವಾಮಿ ಅವರ ಉಸ್ತುವಾರಿಯಲ್ಲಿ ಚುನಾವಣೆ ನಡೆಸಿದರೆ ಪಕ್ಷಕ್ಕೆ ಹಿನ್ನಡೆ ಸಾಧ್ಯತೆ ಹೆಚ್ಚಿದೆ. ಕುರುಬ ಸಮುದಾಯ ಮಾಧುಸ್ವಾಮಿ ವಿರುದ್ಧ ನಿಂತಿದ್ದು ಅನಗತ್ಯವಾಗಿ ಸಮಸ್ಯೆ ಸೃಷ್ಟಿಸಿಕೊಂಡಂತಾಗಲಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಯಿತು ಎನ್ನಲಾಗ್ತಿದೆ.