ಬೆಂಗಳೂರು:ರಾಜ್ಯ ವಿಧಾನಸಭಾ ಚುನಾವಣೆಗೆ ಈಗಾಗಲೇ ಕಾಂಗ್ರೆಸ್ನಿಂದ ಎರಡು ಪಟ್ಟಿಗಳ ಮೂಲಕ 166 ಅಭ್ಯರ್ಥಿಗಳ ಹೆಸರು ಘೋಷಣೆ ಆಗಿದ್ದು, ಜೆಡಿಎಸ್ನಿಂದ 93 ಆಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಆಗಿದೆ. ಆದರೆ ಬಿಜೆಪಿಯಿಂದ ಇನ್ನೂ ಸಹ ಅಭ್ಯರ್ಥಿಗಳ ಘೋಷಣೆ ಆಗಬೇಕಿದ್ದು, ಆಯ್ಕೆ ಪ್ರಕ್ರಿಯೆಯು ರಾಜ್ಯದ ಹಂತವನ್ನು ಮುಗಿಸಿ ಇದೀಗ ದೆಹಲಿ ಅಂಗಳ ತಲುಪಿದೆ. ರಾಜ್ಯ ಚುನಾವಣಾ ಸಮಿತಿಯಿಂದ ಪರಿಶೀಲನೆ ಪೂರ್ಣಗೊಂಡಿದ್ದು, ಕೋರ್ ಕಮಿಟಿಯ ಒಮ್ಮತದ ನಿರ್ಧಾರದೊಂದಿಗೆ ಪಟ್ಟಿಯನ್ನು ದೆಹಲಿಗೆ ಕಳುಹಿಸಿ ಕೊಡಲಾಗಿದೆ. ಏಪ್ರಿಲ್ 8ರಂದು ನಡೆಯುವ ಕೇಂದ್ರ ಸಂಸದೀಯ ಮಂಡಳಿ ಸಭೆಗೂ ಮೊದಲೇ ಪೂರ್ವಭಾವಿಯಾಗಿ ನಾಳೆಯೇ ಮೊದಲ ಹಂತದ ಸಭೆ ನಡೆಯಲಿದೆ ಎಂದು ಬಿಜೆಪಿ ಮೂಲಗಳಿಂದ ತಿಳಿದುಬಂದಿದೆ.
ನಗರದ ಹೊರವಲಯದ ಖಾಸಗಿ ರೆಸಾರ್ಟ್ನಲ್ಲಿ ಎರಡು ದಿನಗಳ ಕಾಲ ನಡೆದ ರಾಜ್ಯ ಚುನಾವಣಾ ಸಮಿತಿ ಸಭೆ ಪೂರ್ಣಗೊಂಡಿದ್ದು, ಅಪೂರ್ಣಗೊಂಡಿದ್ದ 6-8 ಕ್ಷೇತ್ರಗಳಿಗೂ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿ ರಾಜ್ಯ ಸಮಿತಿ ಕೇಂದ್ರಕ್ಕೆ ಕಳುಹಿಸಿಕೊಟ್ಟಿದೆ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೂ ರಾಜ್ಯ ಬಿಜೆಪಿಯಿಂದ ಅಭ್ಯರ್ಥಿಗಳ ಆಯ್ಕೆ ಮುಗಿದಿದೆ. ಪ್ರತಿ ಕ್ಷೇತ್ರಗಳಿಗೂ ಮೂವರು ಹೆಸರು ಫೈನಲ್ ಮಾಡಿದ ರಾಜ್ಯ ಕೋರ್ ಕಮಿಟಿ ನಾಯಕರು ಪಟ್ಟಿಯನ್ನು ಅಂತಿಮಗೊಳಿಸಿದ್ದಾರೆ.
ಮೊದಲ ಹೆಸರು ಯಾವುದೇ ವಿವಾದ ಇಲ್ಲದ, ಆರೋಪ ಇಲ್ಲದ, ವಯೋಮಿತಿ ಮೀರದ ಹಾಲಿ ಶಾಸಕರು ಮತ್ತು ಸೋತ ಕ್ಷೇತ್ರಗಳ ಸಮರ್ಥ ಅಭ್ಯರ್ಥಿ ಹೆಸರನ್ನು ಪ್ರಸ್ತಾಪಿಸಿದ್ದು, ಪ್ರಬಲ ಆಕಾಂಕ್ಷಿಯಾಗಿರುವ ಜಿಲ್ಲಾ ಸಮಿತಿಗಳಿಂದ ಮನ್ನಣೆ ಪಡೆದ ಹೆಸರು ಎರಡನೆಯದ್ದಾಗಿದ್ದು, ತೀವ್ರ ಪೈಪೋಟಿ ಇರುವ ಕಡೆ ಜಿಲ್ಲಾ ಸಮಿತಿಗಳು ಹಾಗು ಸಮೀಕ್ಷೆ ಆಧರಿಸಿ ಮೂರನೇ ಹೆಸರನ್ನು ನಮೂದಿಸಲಾಗಿದೆ.
ರಾಜ್ಯ ಚುನಾವಣಾ ಸಮಿತಿ ಫೈನಲ್ ಮಾಡಿದ ಪಟ್ಟಿಯನ್ನು ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ದೆಹಲಿಗೆ ತೆಗೆದುಕೊಂಡು ಹೋಗಿದ್ದಾರೆ. ನಾಳೆ ಮಧ್ಯಾಹ್ನ ಕೇಂದ್ರ ಸಂಸದೀಯ ಮಂಡಳಿ ಸದಸ್ಯರು ದೆಹಲಿಗೆ ತೆರಳಲಿದ್ದು, ನಾಳೆ ಸಂಜೆಯೇ ಅಭ್ಯರ್ಥಿಗಳ ಪಟ್ಟಿ ಬಗ್ಗೆ ಮೊದಲ ಹಂತದಲ್ಲಿ ಸಭೆ ನಡೆಯಲಿದೆ. ಮೊದಲ ಹಂತದ ಸಭೆ ಬಳಿಕ ಏಪ್ರಿಲ್ 8 ರಂದು ಕೇಂದ್ರ ಸಂಸದೀಯ ಮಂಡಲಿ ಸಭೆಯಲ್ಲಿ ಚರ್ಚೆ ನಡೆಯಲಿದೆ.
ಪ್ರಧಾನಿ ಮೋದಿ ಚೆನ್ನೈ ಪ್ರವಾಸ: ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್ 8 ರಂದು ಮಧ್ಯಾಹ್ನ ಚೆನ್ನೈ ಪ್ರವಾಸಕ್ಕೆ ತೆರಳಲಿರುವ ಹಿನ್ನೆಲೆಯಲ್ಲಿ ಅಂದು ಬೆಳಗ್ಗೆಯೇ ಸಂಸದೀಯ ಮಂಡಳಿ ಸಭೆ ನಡೆಸಲಿ ರಾಜ್ಯ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚಿಸಲಾಗುತ್ತದೆ ಎಂದು ಬಿಜೆಪಿ ಪದಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಒಂದು ವೇಳೆ ಅಂದು ಚರ್ಚೆ ಅಪೂರ್ಣವಾದಲ್ಲಿ ಏಪ್ರಿಲ್ 9 ರಂದು ಕರ್ನಾಟಕ ಪ್ರವಾಸ ಮುಗಿಸಿ ದೆಹಲಿಗೆ ಪ್ರಧಾನಿ ಮೋದಿ ವಾಪಸಾಗಲಿದ್ದು, ಅಂದು ಮತ್ತೊಂದು ಸುತ್ತಿನ ಸಭೆ ನಡೆಸಲಿದ್ದಾರೆ.