ಕರ್ನಾಟಕ

karnataka

ETV Bharat / state

ಆರ್.ಆರ್.ನಗರದಲ್ಲಿ ಕೊಲೆಗಳಾಗುವ ಸಾಧ್ಯತೆ ಇದೆ: ಮುನಿರತ್ನ ಹೊಸ ಬಾಂಬ್ - ಚುನಾವಣಾ ಪ್ರಚಾರ

ಉಪ ಚುನಾವಣೆಯಲ್ಲಿ ರಾಜಕೀಯ ದ್ವೇಷ ಕಂಡು ಬರುತ್ತಿಲ್ಲ, ವೈಯಕ್ತಿಕ ದ್ವೇಷ ಹೆಚ್ಚಾಗಿ ಕಂಡು ಬರುತ್ತಿದೆ. ಕ್ಷೇತ್ರದಲ್ಲಿ ಕೊಲೆ ನಡೆದರೂ ಆಶ್ಚರ್ಯ ಇಲ್ಲ ಎಂದು ಆರ್.ಆರ್.ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ಹೇಳಿಕೆ ನೀಡಿದ್ದಾರೆ.

munirathna
munirathna

By

Published : Oct 22, 2020, 9:32 PM IST

Updated : Oct 22, 2020, 10:57 PM IST

ಬೆಂಗಳೂರು: ಈ ಬಾರಿಯ ಉಪ ಚುನಾವಣೆಯಲ್ಲಿ ರಾಜಕೀಯ ದ್ವೇಷ ಕಂಡು ಬರುತ್ತಿಲ್ಲ, ವೈಯಕ್ತಿಕ ದ್ವೇಷ ಹೆಚ್ಚಾಗಿ ಕಂಡು ಬರುತ್ತಿದೆ. ಕ್ಷೇತ್ರದಲ್ಲಿ ಕೊಲೆ ನಡೆದರೂ ಆಶ್ಚರ್ಯ ಇಲ್ಲ. ಹಾಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಆರ್.ಆರ್.ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ಹೇಳಿದ್ದಾರೆ.

ಜೆ.ಪಿ ಪಾರ್ಕ್​ನಲ್ಲಿ ಚುನಾವಣಾ ಪ್ರಚಾರ ಕಾರ್ಯದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ದಿನ ಕ್ಷೇತ್ರದ ಮುಖಂಡರ ಭೇಟಿ ಮಾಡುತ್ತಿದ್ದೇನೆ. ಇವತ್ತಿಗೆ ಜೆಪಿ ಪಾರ್ಕ್ ಪ್ರಚಾರ, ಮುಖಂಡರ ಮನೆಗಳ ಭೇಟಿ ಕಾರ್ಯ ಮುಗಿದಿದೆ. ನಾಳೆಯಿಂದ ಜಾಲಹಳ್ಳಿ ಮತ್ತು ಎಚ್​​​ಎಂಟಿ ವಾರ್ಡ್​ಗಳಲ್ಲಿ ಪ್ರಚಾರ ಆರಂಭಿಸುತ್ತೇನೆ. ಜನರಿಂದ ಉತ್ತಮ ಸ್ಪಂದನೆ ಬರುತ್ತಿದೆ, ಜನರಲ್ಲಿ ಒಳ್ಳೆಯ ಅಭಿಪ್ರಾಯ ಇದೆ ಎಂದರು.

ಮುನಿರತ್ನ ಹೊಸ ಬಾಂಬ್

ನಿಮ್ಮ ವೋಟರ್ ಐಡಿ, ದಾಖಲೆ, ಫೋನ್ ನಂಬರ್ ಕೇಳಿ ಪಡೆದುಕೊಳ್ಳುತ್ತಿದ್ದಾರೆ. ಆಶ್ವಾಸನೆಗಳನ್ನು ನಿಮಗೆ ಕೊಡುತ್ತಿದ್ದಾರೆ. ಆದರೆ, ಬೇರೆಯವರ ಆಶ್ವಾಸನೆ, ಆಮಿಷಗಳಿಗೆ ಬಲಿಯಾಗಬೇಡಿ. ಇದು ಮುಂದೆ ಅನಾಹುತ ಸೃಷ್ಟಿಸಲಿದೆ. ಸುಳ್ಳು ಮಾಹಿತಿ ಸೃಷ್ಟಿಸಿ ಐಟಿ, ಇಡಿ ದಾಳಿಯಾಗುವಂತೆ ಮಾಡಬಹುದು ಎಚ್ಚರವಾಗಿರಿ. ಯಾರೂ ಮಾಹಿತಿ ಕೊಡಲು ಹೋಗಬೇಡಿ ಎಂದು ಮನವಿ ಮಾಡಿದರು.

ಹೊರಗಿಂದ ನಾಲ್ಕು ಸಾವಿರ ಜನರನ್ನ ಕರೆಸಿದ್ದಾರೆ. ಈ ಸಲ ಚುನಾವಣೆಯಲ್ಲಿ ರಾಜಕೀಯ ದ್ವೇಷ ಕಂಡು ಬರುತ್ತಿಲ್ಲ ವೈಯಕ್ತಿಕ ದ್ವೇಷ ಹೆಚ್ಚಾಗಿ ಕಂಡು ಬರುತ್ತಿದೆ. ವೈಯಕ್ತಿಕ ದ್ವೇಷ ಕಣ್ಮುಂದೆಯೇ ಕಾಣುತ್ತಿದೆ. ಚುನಾವಣೆ‌ ಮುಗಿದ ಬಳಿಕ ರಾಜಕೀಯ ಕೆಸರೆರಚಾಟ ಬೈದಾಟ ಸಹಜ. ಆದರೆ, ಈಗ ಹೊರಗಿಂದ ಬಂದವರಿಂದ ಕ್ಷೇತ್ರದಲ್ಲಿ ಕೊಲೆಗಳೂ ಸಂಭವಿಸುವ ಸಾಧ್ಯತೆಗಳಿವೆ. ಹೊರಗಿಂದ ಬಂದವರು ಮನೆ ಮನೆ ಭೇಟಿ ಕೊಟ್ಟು ದಾಖಲೆ, ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಈ ರೀತಿ ಕ್ಷೇತ್ರದಲ್ಲಿ ಯಾವತ್ತೂ ನಡೆದಿಲ್ಲ. ಇಂಥ ಸಂಸ್ಕೃತಿ ನಮ್ಮ ಕ್ಷೇತ್ರದಲ್ಲಿ ಬೆಳೆಸುವುದು ಬೇಡ. ನಾನು ತುಂಬ ನೊಂದು ಈ ಮಾತುಗಳನ್ನು ಆಡುತ್ತಿದ್ದೇನೆ. ಹೊರಗಿಂದ ಬಂದವರು ಕೊಲೆಗಳನ್ನು ಮಾಡೋವರೆಗೂ ದ್ವೇಷ ಕೊಂಡೊಯ್ಯಲು ಹೋಗಬೇಡಿ ಎಂದು ಮನವಿ ಮಾಡಿದರು.

ಹೊರಗಿಂದ ಕರೆಸಿರುವ ನಾಲ್ಕು ಸಾವಿರ ಜನರ ವಿರುದ್ಧ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ದೂರು ಕೊಡುತ್ತೇನೆ. ಆರ್ ಆರ್ ನಗರದಲ್ಲಿ ಮಿಲಿಟರಿ ತಂದರೆ ಮಾತ್ರ ಇದನ್ನು ತಡೆಗಟ್ಟಲು ಸಾಧ್ಯ. ಮಿಲಿಟರಿ ಇಲ್ಲದಿದ್ದರೆ ಆರ್ ಆರ್ ನಗರ ಬಳ್ಳಾರಿ ಥರ ಆಗಿ ಬಿಡುತ್ತದೆ. ಕ್ಷೇತ್ರ ಗೆಲ್ಲಲು ಅವರು ಏನು ಬೇಕಾದ್ರೂ ಮಾಡೋದಕ್ಕೆ ಸಿದ್ಧವಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಆರೋಪಿಸಿದರು.

ಮಾಜಿ ಸಂಸದ ಆರ್ ಧ್ರುವನಾರಾಯಣ್‌ ವಿರುದ್ಧ ಕಿಡಿ ಕಾರಿದ ಮುನಿರತ್ನ, ಪ್ರತಿ ಮನೆಗಳಿಗೆ ಹೋಗಿ ಮಾಹಿತಿ ಕೇಳುತ್ತಿದ್ದಾರೆ. ಈ ವೇಳೆ ಜನರಿಗೆ ಆಸೆ, ಆಮಿಷ ಒಡ್ಡುತ್ತಿದ್ದಾರೆ. ನಿಮಗೆ ಧ್ರುವನಾರಾಯಣ್ ಆಮಿಷ ಒಡ್ಡುತ್ತಿದ್ದಾರೆ. ಈ ರೀತಿ ಕೇಳುವ ಸಂದರ್ಭದಲ್ಲಿ ನಮ್ಮ‌ ಪಾಲಿಕೆ ಸದಸ್ಯರು ಅದನ್ನು ಪ್ರಶ್ನಿಸಿದ್ದಾರೆ. ಆಗ ಧ್ರುವನಾರಾಯಣ್ ನಾವು ಮಾಡೋದೇ ಹೀಗೆ ಬಿಜೆಪಿ ಮೇಲೆ ಕೆಟ್ಟ ಹೆಸರು ತರುವುದೇ ನಮ್ಮ ಉದ್ದೇಶ ಅಂದಿದ್ದಾರೆ.

ಕೆಟ್ಟ ಹೆಸರು ತರಬೇಕು, ಗೊಂದಲ ಸೃಷ್ಟಿಸಿ, ಮುನಿರತ್ನಗೆ ತೊಂದರೆ ಮಾಡಿ ಗೆಲ್ಲಬೇಕು ಅಂತಾ ಮಾಡುತ್ತಿದ್ದೇವೆ ಎಂದು ನೇರವಾಗಿಯೇ ಹೇಳಿದ್ದಾರೆ. ಮೊನ್ನೆ ನಾರಾಯಣಸ್ವಾಮಿ ಇಂದು ಧ್ರುವನಾರಾಯಣ ಇಂತಹ ಕೆಲಸ ಮಾಡುತ್ತಿದ್ದಾರೆ. ಇದನ್ನು ತಡೆಯಲು ಹೋಗಿದ್ದಕ್ಕೆ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ದೂರು ಪ್ರತಿ ದೂರು ದಾಖಲಾಗಿವೆ. ಅವರು ನಾಲ್ಕು ಸಾವಿರ ಜನ ಬಂದಿದ್ದಾರೆ. ಯಾರು ಯಾರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನುವುದಕ್ಕೆ ಇಷ್ಟು ಸಾಲದೇ ಎಂದು ಪ್ರಶ್ನಿಸಿದರು.

Last Updated : Oct 22, 2020, 10:57 PM IST

ABOUT THE AUTHOR

...view details