ಬೆಂಗಳೂರು:ಹಿಂದಿನ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಟಿಪ್ಪು ಜಯಂತಿ ಆಚರಣೆಯನ್ನು ರದ್ದುಗೊಳಿಸಿ ಇಂದು ಆದೇಶ ಹೊರಡಿಸಿರುವ ಬಿಜೆಪಿ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅಲ್ಪಸಂಖ್ಯಾತರ ಮೇಲಿನ ದ್ವೇಷ: ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಟಿಪ್ಪು ಜಯಂತಿ ಆಚರಣೆ ಮಾಡುವುದನ್ನು ಬಿಜೆಪಿ ರದ್ದು ಮಾಡಿರುವುದು ಅಪರಾಧ. ಅಲ್ಪಸಂಖ್ಯಾತರು ಮಾತ್ರವಲ್ಲ, ಅಂದಿನ ಮೈಸೂರು ರಾಜ್ಯದಲ್ಲಿ ರಾಜರಾಗಿದ್ದವರು. ಬ್ರಿಟಿಷರ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ವೀರ ಮೈಸೂರು ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಕೆಎಸ್ಆರ್ಗೆ ಫೌಂಡೇಷನ್ ಹಾಕಿದವರೂ ಅವರೇ. ಅಂತಹವರ ಜಯಂತಿ ಆಚರಿಸಲು ತೀರ್ಮಾನಿಸಿದ್ದೆವು. ಬಿಜೆಪಿಯವರು ದುರುದ್ದೇಶ ಮತ್ತು ಅಲ್ಪಸಂಖ್ಯಾತರ ಮೇಲಿನ ದ್ವೇಷದಿಂದ ಈ ರೀತಿ ಮಾಡಿದ್ದಾರೆ. ಅದಕ್ಕೆ ವಿರೋಧಿಸುತ್ತೇನೆ ಎಂದು ಖಾರವಾಗಿ ಹೇಳಿದ್ದಾರೆ.
ಇದಕ್ಕೆ ರೋಷನ್ ಬೇಗ್ ಉತ್ತರಿಸಬೇಕು:ಶಾಸಕ ಜಮೀರ್ ಅಹಮದ್ ಮಾತನಾಡಿ, ಟಿಪ್ಪು ಜಯಂತಿ ನಿಷೇಧಿಸಿದ ಕುರಿತು ಶಾಸಕ ರೋಷನ್ ಬೇಗ್ ಉತ್ತರಿಸಬೇಕು. ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರೋಕೆ ಹೋಗಿ ಅವರ ಬಾಗಿಲಲ್ಲಿ ನಿಂತಿದ್ದಾರೆ. ಈಗ ರೋಷನ್ ಬೇಗ್ ಮಾತಾಡಲೇಬೇಕು. ಬಿಜೆಪಿ ಸರ್ಕಾರ ಬಂದ್ರೆ ನಿಷೇಧ ಮಾಡ್ತಾರೆ ಅಂತಾ ಗೊತ್ತಿತ್ತು. ಆದರೆ ಇಷ್ಟು ಬೇಗ ನಿಷೇಧ ಮಾಡ್ತಾರೆ ಅಂತಾ ಗೊತ್ತಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.