ಬೆಂಗಳೂರು:ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ರಚನೆಯಾಗಿರುವ ಬಿಜೆಪಿ ಚುನಾವಣಾ ಪ್ರಚಾರ ಸಮಿತಿ ಹಾಗು ಚುನಾವಣಾ ನಿರ್ವಹಣಾ ಸಮಿತಿಗಳ ಮೊದಲ ಸಭೆ ಇಂದು ನಡೆದಿದ್ದು,ಪ್ರಚಾರ ಕಾರ್ಯ, ತಾರಾ ಪ್ರಚಾರಕರ ಪಟ್ಟಿ,ಸಮಾವೇಶಗಳ ಆಯೋಜನೆ ಕುರಿತು ಮಹತ್ವದ ಸಮಾಲೋಚನೆ ಮಾಡಲಾಯಿತು.
ಪ್ರಚಾರ,ನಿರ್ವಹಣಾ ಸಮಿತಿ ಸಭೆ:ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಪಕ್ಷದ ಚುನಾವಣಾ ಪ್ರಚಾರ ಸಮಿತಿ ಮತ್ತು ಚುನಾವಣಾ ನಿರ್ವಹಣಾ ಸಮಿತಿ ಸಭೆ ನಡೆಯಿತು. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕಿ ಶೋಭಾ ಕರಂದ್ಲಾಜೆ, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್, ಕೇಂದ್ರ ಸಚಿವ ಭಗವಂತ್ ಖೂಬಾ, ಪರಿಷತ್ ಸದಸ್ಯರಾದ ಎನ್ ರವಿಕುಮಾರ್, ಚಲವಾದಿ ನಾರಾಯಣ ಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾದ ಅಶ್ವಥ್ ನಾರಾಯಣ, ಮಹೇಶ್ ಟೆಂಗಿನಕಾಯಿ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಬಿಜೆಪಿ ಚುನಾವಣಾ ಪ್ರಚಾರ ಸಮಿತಿ ಮತ್ತು ನಿರ್ವಹಣಾ ಸಮಿತಿಗಳು ನಿನ್ನೆಯಷ್ಟೇ ರಚನೆಯಾಗಿದ್ದು, ಇಂದು ಉಭಯ ಸಮಿತಿಗಳ ಮೊದಲ ಜಂಟಿ ಸಭೆ ನಡೆಯಿತು.ರಾಜಕೀಯ ನಾಯಕರ ಮತ್ತು ಸಂಘಟನಾತ್ಮಕ ಜವಾಬ್ದಾರಿ ಹೊತ್ತ ನಾಯಕರ ಪ್ರತ್ಯೇಕ ಸಮಿತಿ ರಚನೆಯಾಗಿ ಜಂಟಿಯಾಗಿ ಮುಂದುವರೆಯಬೇಕಿರುವ ಹಿನ್ನಲೆಯಲ್ಲಿ ಇಂದು ಮಹತ್ವದ ಸಮಾಲೋಚನೆ ನಡೆಸಲಾಯಿತು.
ಚುನಾವಣಾ ಪ್ರಚಾರ ತಂಡ ಯಾವ ರೀತಿ ಕಾರ್ಯ ನಿರ್ವಹಿಸಬೇಕು. ಹೇಗೆ ಜವಾಬ್ದಾರಿ ನಿರ್ವಹಣೆ ಮಾಡಬೇಕು. ಸ್ಟಾರ್ ಕ್ಯಾಂಪೆನರ್ ಗಳ ಪಟ್ಟಿ ತಯಾರಿಕೆ, ಯಾರಿಗೆಲ್ಲಾ ತಾರಾ ಪ್ರಚಾರಕರ ಪಟ್ಟಿಯಲ್ಲಿ ಅವಕಾಶ ಕಲ್ಪಿಸಬೇಕು. ಎಷ್ಟು ಜನರಿಗ ಅವಕಾಶ ಕೊಡಬೇಕು. ಪ್ರಾಂತ್ಯವಾರು ಪ್ರಚಾರ ಕಾರ್ಯ ಹೇಗಿರಬೇಕು ಎನ್ನುವ ಕುರಿತು ಪ್ರಾಥಮಿಕ ಹಂತದ ಚರ್ಚೆ ನಡೆಸಲಾಯಿತು ಎನ್ನಲಾಗಿದೆ.
ಪೂರ್ವಭಾವಿ ಸಭೆಗೆ ಬಿಎಸ್ವೈ ,ಸಿಎಂ ಬೊಮ್ಮಾಯಿ ಗೈರು:ಇನ್ನು ಈಗಾಗಲೇ ವಿಜಯ ಸಂಕಲ್ಪ ಯಾತ್ರೆ ನಾಲ್ಕು ದಿಕ್ಕಿನಿಂದ ನಡೆಯುತ್ತಿದ್ದು, ಅಲ್ಲಲ್ಲಿ ಸಮಾವೇಶಗಳನ್ನು ನಡೆಸಲಾಗುತ್ತಿದೆ ಇದರ ಮುಂದುವರೆದ ಭಾಗ ಯಾವ ರೀತಿ ಇರಬೇಕು, ಮಾರ್ಚ್ 23ಕ್ಕೆ ರಥಯಾತ್ರೆ ಮುಗಿಯಲಿದ್ದು ನಂತರದ ಪ್ರಚಾರ ಕಾರ್ಯ ಯಾವ ರೀತಿ ಇರಬೇಕು ಎನ್ನುವ ಕುರಿತು ಮೊದಲ ಹಂತದ ಸಮಾಲೋಚನೆ ನಡೆಸಲಾಯಿತು.