ಕರ್ನಾಟಕ

karnataka

ETV Bharat / state

ದಕ್ಷಿಣ ಕರ್ನಾಟಕದಲ್ಲಿ ಬಿಜೆಪಿ ಬಿಗ್ ಪ್ಲಾನ್​​: ಹಿಂದೂ ಅಜೆಂಡಾದ ರ‍್ಯಾಲಿಗಳಿಗೆ ಮೊರೆ? - tippu issue

ದಕ್ಷಿಣ ಕರ್ನಾಟಕದಲ್ಲಿ ಆಪರೇಷನ್ ಕಮಲದ ಮೂಲಕ ಜೆಡಿಎಸ್ ಮತ್ತು ಕಾಂಗ್ರೆಸ್​​ ನಾಯಕರನ್ನು ಪಕ್ಷಕ್ಕೆ ಸೆಳೆಯುವ ಜೊತೆಗೆ ಮತದಾರರ ಆಕರ್ಷಣೆಗೆ ಸಮಾವೇಶ, ರ‍್ಯಾಲಿ, ಕರಸೇವೆ, ಪಾದಯಾತ್ರೆಗಳಂತಹ ಕಾರ್ಯಕ್ರಮ ನಡೆಸಲು ಬಿಜೆಪಿ ಯೋಚಿಸಿದೆ.

bjp-big-election-plan-in-south-karnataka
ದಕ್ಷಿಣ ಕರ್ನಾಟಕದಲ್ಲಿ ಬಿಜೆಪಿ ಬಿಗ್ ಪ್ಲ್ಯಾನ್: ಹಿಂದೂ ಅಜೆಂಡಾದ ರ‍್ಯಾಲಿಗಳಿಗೆ ಮೊರೆ?

By

Published : Nov 30, 2022, 10:35 PM IST

ಬೆಂಗಳೂರು: ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಹೋಲಿಸಿದರೆ ದಕ್ಷಿಣ ಕರ್ನಾಟಕದಲ್ಲಿ ಹೆಚ್ಚು ಶಕ್ತಿ ಹೊಂದಿರದ ಆಡಳಿತ ಪಕ್ಷ ಬಿಜೆಪಿ ಬರುವ ವಿಧಾನಸಭೆ ಚುನಾವಣೆಯಲ್ಲಿ ಹಳೇ ಮೈಸೂರು ಪ್ರದೇಶದಿಂದ ಅಧಿಕ ಕ್ಷೇತ್ರಗಳನ್ನು ಗೆಲ್ಲುವ ನಿಟ್ಟಿನಲ್ಲಿ ರಾಜಕೀಯವಾಗಿ ಲಾಭ ತರುವ ಚಟುವಟಿಕೆಗಳ ಆಯೋಜನೆಗೆ ಬಿಗ್ ಪ್ಲಾನ್ ರೂಪಿಸತೊಡಗಿದೆ.

ದಕ್ಷಿಣ ಕರ್ನಾಟಕದಲ್ಲಿ ಆಪರೇಷನ್ ಕಮಲದ ಮೂಲಕ ಜೆಡಿಎಸ್ ಮತ್ತು ಕಾಂಗ್ರೆಸ್​​ ನಾಯಕರನ್ನು ಪಕ್ಷಕ್ಕೆ ಸೆಳೆಯುವ ಜೊತೆಗೆ ಮತದಾರರ ಆಕರ್ಷಣೆಗೆ ಸಮಾವೇಶ, ರ‍್ಯಾಲಿ, ಕರಸೇವೆ, ಪಾದಯಾತ್ರೆಗಳಂತಹ ಕಾರ್ಯಕ್ರಮ ನಡೆಸಲು ಬಿಜೆಪಿ ಯೋಚಿಸಿದೆ.

ಹಿಂದೂ ಧರ್ಮದ ಅಜೆಂಡಾಗಳನ್ನ ಆಧರಿಸಿದ ಕಾರ್ಯಕ್ರಮಗಳನ್ನು ಆಯೋಜಿಸಿ ಮತದಾರರ ಮನಗೆಲ್ಲುವಂತಹ ಚಟುವಟಿಕೆಗಳನ್ನು ನಡೆಸಲು ಬಿಜೆಪಿ ಸಿದ್ಧತೆ ನಡೆಸಿದೆ ಎಂದು ಹೇಳಲಾಗಿದ್ದು, ಸೂಕ್ತ ಸಮಯ ನೋಡಿ ಕಾರ್ಯಗತಗೊಳಿಸಲು ಕಾದು ನೋಡಲಾಗುತ್ತಿದೆ. ಚಿಕ್ಕಮಗಳೂರಿನ ದತ್ತ ಪೀಠದಲ್ಲಿ ಪೂಜೆಗಾಗಿ ನಡೆಸಿದ ಯಾತ್ರೆಗಳಂತೆ ಕರಸೇವೆ ನಡೆಸಿ ಪ್ರಮುಖವಾಗಿ ಯುವ ಮತದಾರರನ್ನು ಆಕರ್ಷಿಸುವ ಉದ್ದೇಶ ಬಿಜೆಪಿ ಹೊಂದಿದೆ ಎಂದು ತಿಳಿದುಬಂದಿದೆ.

ಕರಸೇವೆ ಎಲ್ಲಿ?:ಕನಕಪುರ ತಾಲೂಕಿನಲ್ಲಿ ಕಪಾಲಿ ಬೆಟ್ಟದಲ್ಲಿ ಏಸುಕ್ರಿಸ್ಥ ಪ್ರತಿಮೆ ನಿರ್ಮಾಣದ ವಿರುದ್ಧ ಮತ್ತು ಶ್ರೀರಂಪಟ್ಟಣದ ದರ್ಗಾದಲ್ಲಿ ಇದೆ ಎಂದು ಹೇಳಲಾಗುತ್ತಿರುವ ಆಂಜನೇಯ ಗುಡಿ ವಿಷಯಗಳನ್ನು ಮುಂದಿಟ್ಟುಕೊಂಡು ಕರಸೇವೆ ನಡೆಸುವ ಸಾಧ್ಯತೆಗಳ ಬಗ್ಗೆ ಬಿಜೆಪಿ ಗಂಭೀರ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಕನಕಪುರದ ಕಪಾಲಿ ಬೆಟ್ಟ ಮತ್ತು ಶ್ರೀರಂಗಪಟ್ಟಣದ ದರ್ಗಾ ಪ್ರಕರಣಗಳನ್ನು ಮುಂದಿಟ್ಟುಕೊಂಡು ಪಾದಯಾತ್ರೆ, ಕರಸೇವೆಯಂತಹ ರ‍್ಯಾಲಿಗಳನ್ನು ನಡೆಸಿದರೆ, ದಕ್ಷಿಣ ಕರ್ನಾಟಕದ ರಾಮನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿನ ಮತದಾರರನ್ನು ಹಿಂದೂ ಧರ್ಮದ ಅಜೆಂಡಾಗಳಿಂದ ಸೆಳೆಯಬಹುದೆನ್ನುವ ರಾಜಕೀಯ ಲೆಕ್ಕಾಚಾರವನ್ನು ಬಿಜೆಪಿ ಹೊಂದಿದೆ ಎಂದು ಗೊತ್ತಾಗಿದೆ.

ಹಿಜಾಬ್ ವಿವಾದದ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯಲ್ಲಿ ಕೆಲವು ಕಾಲೇಜಗಳಲ್ಲಿ ಯುವಕರು 'ಜೈ ಶ್ರೀರಾಮ್' ಎಂದು ಘೋಷಣೆ ಕೂಗಿದುದನ್ನೇ ಪ್ರೇರಣೆಯನ್ನಾಗಿಸಿಕೊಂಡು ಕರಸೇವೆ ನಡೆಸಿ ಬಿಜೆಪಿ ಪರ ಮತಗಳನ್ನಾಗಿ ಪರಿವರ್ತಿಸುವ ಚುನಾವಣೆ ತಂತ್ರಗಾರಿಕೆ ರೂಪಿಸಲಾಗುತ್ತಿದೆ ಎನ್ನಲಾಗಿದೆ. ಗುಜರಾತ್ ಚುನಾವಣೆ ನಂತರ ಕರಸೇವೆಯ ದಾಳವನ್ನು ಪ್ರಯೋಗಿಸಲು ಯೋಚಿಸಲಾಗುತ್ತಿದೆ.

ಟಿಪ್ಪು ವಿರೋಧಿ ಹೋರಾಟ:ಕನಕಪುರದಲ್ಲಿ ಕಪಾಲಿ ಬೆಟ್ಟದಲ್ಲಿ ಏಸು ಕ್ರಿಸ್ಥ ಪ್ರತಿಮೆ ನಿರ್ಮಾಣದ ವಿರುದ್ಧ ಕರಸೇವೆ ನಡೆಸಿ ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳನ್ನು ಪರಾಭವಗೊಳಿಸುವುದು ಹಾಗೆಯೇ ಶ್ರೀರಂಗಪಟ್ಟಣದಲ್ಲಿ ದರ್ಗಾದಲ್ಲಿನ ಆಂಜನೇಯ ಗುಡಿಯ ಹಕ್ಕಿಗಾಗಿ ಕರಸೇವೆ ನಡೆಸಿ ಮಂಡ್ಯ ಮತ್ತು ಮೈಸೂರು ಭಾಗದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್​ಗಿಂತ ಹೆಚ್ಚಿನ ಮತಗಳನ್ನು ಬಿಜೆಪಿಗೆ ಪಡೆಯುವ ಪ್ಲಾನ್​ ಇದೆ ಎನ್ನಲಾಗಿದೆ.

ಮೈಸೂರು ಭಾಗದಲ್ಲಿ ಟಿಪ್ಪು ವಿರೋಧಿ ಹೋರಾಟ ನಡೆಸಿ ಅತಿ ಹೆಚ್ಚಿನ ಹಿಂದೂ ಮತಗಳು ಪಕ್ಷಕ್ಕೆ ಬೀಳುವಂತೆ ನೋಡಿಕೊಳ್ಳುವುದು ಬಿಜೆಪಿಯ ಮತ ರಾಜಕಾರಣದ ಮತ್ತೊಂದು ಭಾಗವಾಗಿದೆ. ರಾಜ್ಯ ಸರ್ಕಾರದಿಂದ ಟಿಪ್ಪುವಿನ ಜಯಂತಿ ಆಚರಣೆ ರದ್ದುಪಡಿಸಿರುವ ಬಿಜೆಪಿಯು ರೈಲಿಗೆ ಇಡಲಾಗಿದ್ದ ಟಿಪ್ಪು ಹೆಸರನ್ನು ಬದಲಿಸಿ ಮೈಸೂರಿನ ಒಡೆಯರ್ ಹೆಸರನ್ನು ನಾಮಕರಣ ಮಾಡಿದೆ. ಅಷ್ಟೇ ಅಲ್ಲದೆ ಟಿಪ್ಪುವಿನ ಕುರಿತ ಪಠ್ಯಕ್ಕೂ ಬಿಜೆಪಿ ಕತ್ತರಿ ಹಾಕಿದೆ.

ಇದನ್ನೂ ಓದಿ:ಸಚಿವಾಕಾಂಕ್ಷಿಗಳ ಪಟ್ಟಿ ಬಿಡಿ, ಕ್ಷೇತ್ರವಾರು ಮಾಹಿತಿ ನೀಡಿ: ರಾಜ್ಯ ಬಿಜೆಪಿಗೆ ಹೈಕಮಾಂಡ್ ಮಹತ್ವದ ಸಂದೇಶ

ABOUT THE AUTHOR

...view details