ಬೆಂಗಳೂರು :ಮುಂಬರಲಿರುವ ಸಾರ್ವತ್ರಿಕ ಚುನಾವಣೆಗೆ ಅಧಿಕೃತವಾಗಿ ಸಿದ್ಧತೆ ನಡೆಸುವ ಕಾರ್ಯಕ್ಕೆ ಬಿಜೆಪಿ ಚಾಲನೆ ನೀಡುತ್ತಿದೆ. ಇದರ ಮೊದಲ ಹಂತವಾಗಿ ಮೂರು ತಂಡಗಳಿಂದ ಮೂರು ಹಂತದಲ್ಲಿ ವಿಭಾಗಶಃ ಸಭೆಗಳನ್ನು ಆಯೋಜಿಸಿದೆ. ರಾಜ್ಯದ ಎಲ್ಲ ನಾಯಕರು ಈ ಸಭೆಗಳಲ್ಲಿ ಪಾಲ್ಗೊಂಡು ಸಾಮೂಹಿಕ ನಾಯಕತ್ವದ ಪರಿಕಲ್ಪನೆಯಲ್ಲೇ ಚುನಾವಣೆಗೆ ಮುಂದಡಿ ಇಡುವಂತೆ ಸೂಚನೆ ನೀಡಲಾಗಿದೆ.
ಮೂರು ವಿಭಾಗದಲ್ಲಿ ಏಕ ಕಾಲಕ್ಕೆ ಸರಣಿ ಸಭೆ :ನಾಳೆ ರಾಜ್ಯ ಬಿಜೆಪಿ ಮೂರು ವಿಭಾಗದಲ್ಲಿ ಏಕ ಕಾಲಕ್ಕೆ ಸರಣಿ ಸಭೆ ಆಯೋಜನೆ ಮಾಡಿದೆ. ಇದಕ್ಕಾಗಿ ಮೂರು ತಂಡಗಳನ್ನು ರಚಿಸಲಾಗಿದೆ. ಮೊದಲ ತಂಡವನ್ನು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮುನ್ನಡೆಸಿದರೆ, ಎರಡನೇ ತಂಡದ ನೇತೃತ್ವವನ್ನ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಮೂರನೇ ತಂಡದ ನೇತೃತ್ವವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಹಿಸಲಿದ್ದಾರೆ.
ಕಟೀಲ್ ತಂಡದಲ್ಲಿರುವವರು :ನಳಿನ್ ಕುಮಾರ್ ಕಟೀಲ್ ತಂಡದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಸಚಿವರಾದ ಕೆ.ಎಸ್. ಈಶ್ವರಪ್ಪ, ವಿ. ಸೋಮಣ್ಣ, ಸಂಸದ ಪ್ರತಾಪ್ ಸಿಂಹ, ರಾಜ್ಯ ಉಪಾಧ್ಯಕ್ಷರಾದ ತೇಜಸ್ವಿನಿ ಅನಂತ್ ಕುಮಾರ್, ಎಂ. ರಾಜೇಂದ್ರ ಇರಲಿದ್ದಾರೆ. ಏಪ್ರಿಲ್ 12 ಮತ್ತು 13ರಂದು ಮೈಸೂರು ವಿಭಾಗ, 19 ಮತ್ತು 20ರಂದು ಬಳ್ಳಾರಿ ವಿಭಾಗ, 21 ಮತ್ತು 22ರಂದು ಧಾರವಾಡ ವಿಭಾಗ, 23 ಮತ್ತು 24ರಂದು ಬೆಂಗಳೂರು ನಗರ ವಿಭಾಗದ ವಿಭಾಗಶಃ ಸಭೆಗಳನ್ನು ನಡೆಸಲಿದ್ದಾರೆ.
ಅರುಣ್ ಸಿಂಗ್ ತಂಡದಲ್ಲಿರುವವರು:ಎರಡನೇ ತಂಡದ ನೇತೃತ್ವ ವಹಿಸಿರುವ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ತಂಡದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವರಾದ ಗೋವಿದ ಕಾರಜೋಳ, ಆರ್.ಅಶೋಕ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ, ರಾಜ್ಯ ಉಪಾಧ್ಯಕ್ಷರಾದ ಮಾಲೀಕಯ್ಯ ಗುತ್ತೇದಾರ್, ಎಂ ಶಂಕರಪ್ಪ, ಎಂ.ಬಿ ನಂದೀಶ್ ಇರಲಿದ್ದಾರೆ. ಏಪ್ರಿಲ್ 12 ಮತ್ತು 13ರಂದು ಬೆಳಗಾವಿ ವಿಭಾಗ,19 ಮತ್ತು 20ರಂದು ದಾವಣಗೆರೆ ವಿಭಾಗ, 21 ಮತ್ತು 22ರಂದು ಬೆಂಗಳೂರು ಗ್ರಾಮಾಂತರ ವಿಭಾಗದ ವಿಭಾಗಶಃ ಸಭೆಗಳನ್ನು ನಡೆಸಲಿದ್ದಾರೆ.
ಸಿಎಂ ತಂಡದಲ್ಲಿರುವವರು :ಮೂರನೇ ತಂಡದ ನೇತೃತ್ವವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಹಿಸಿಕೊಂಡಿದ್ದಾರೆ. ಇವರ ತಂಡದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದಗೌಡ, ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ, ಸಚಿವರಾದ ಡಾ.ಅಶ್ವತ್ಥ್ ನಾರಾಯಣ, ಬಿ.ಶ್ರೀರಾಮುಲು, ರಾಜ್ಯ ಉಪಾಧ್ಯಕ್ಷರಾದ ನಿರ್ಮಲ್ ಕುಮಾರ್ ಸುರಾಣಾ, ಲಕ್ಷ್ಮಣ ಸವದಿ, ಬಿ.ವೈ ವಿಜಯೇಂದ್ರ, ನಯನಾ ಗಣೇಶ್ ಇರಲಿದ್ದಾರೆ. ಏಪ್ರಿಲ್ 12 ಮತ್ತು13ರಂದು ಮಂಗಳೂರು ವಿಭಾಗ, 19 ಮತ್ತು 20ರಂದು ಶಿವಮೊಗ್ಗ ವಿಭಾಗ, 21 ಮತ್ತು 22ರಂದು ಕಲಬುರಗಿ ವಿಭಾಗದ ವಿಭಾಗಶಃ ಸಭೆಗಳನ್ನು ನಡೆಸಲಿದ್ದಾರೆ.
ಇದನ್ನೂ ಓದಿ:ಹಿಂದೂ-ಮುಸ್ಲಿಂ ಒಂದೇ ತಾಯಿ ಮಕ್ಕಳು.. ಕಾಂಗ್ರೆಸ್‌ಗೆ ಏನೂ ಚಟುವಟಿಕೆ ಇಲ್ಲದ್ದಕ್ಕೆ ಬೆಲೆ ಏರಿಕೆ ವಿರುದ್ಧ ಪ್ರತಿಭಟಿಸ್ತಿದೆ.. ಬಿಎಸ್ವೈ
ನಾಳಿನ ಸಭೆಯಲ್ಲಿ ಭಾಗವಹಿಸಲು ಎಲ್ಲ ನಾಯಕರು ಇಂದೇ ಅವರವರ ವಿಭಾಗಗಳಿಗೆ ತೆರಳುತ್ತಿದ್ದಾರೆ. ನಾಳೆಯಿಂದ ಎರಡು ದಿನ ಮೊದಲ ಹಂತದ ವಿಭಾಗಶಃ ಸಭೆಗಳು ನಡೆಯಲಿವೆ. ಹೊಸಪೇಟೆಯಲ್ಲಿ ಏಪ್ರಿಲ್ 16 ಮತ್ತು 17ರಂದು ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದೆ. ನಂತರ ಉಳಿದ ಎರಡು ಹಂತದ ವಿಭಾಗಶಃ ಸಭೆಗಳನ್ನು ನಡೆಸಲಾಗುತ್ತದೆ.