ಕರ್ನಾಟಕ

karnataka

ETV Bharat / state

ಬಿಜೆಪಿಗೆ ಸುಳ್ಳು ಮನೆ ದೇವರಾದರೆ, ಭ್ರಷ್ಟಾಚಾರ ಪಕ್ಷದ ಅಧಿಕೃತ ಕಾರ್ಯಕ್ರಮ: ಬಿ.ಕೆ.ಹರಿಪ್ರಸಾದ್ ಲೇವಡಿ - ETV Bharat kannada News

ಭ್ರಷ್ಟ ಬಿಜೆಪಿ ಎಂಬ ಟ್ಯಾಗ್ ಲೈನ್ ಅಡಿಯಲ್ಲಿ ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ.

B K Hariprasad
ಬಿ ಕೆ ಹರಿಪ್ರಸಾದ್

By

Published : Mar 5, 2023, 2:22 PM IST

ಬೆಂಗಳೂರು:ಬಿಜೆಪಿ ಮುಖಂಡ ಮಾಡಾಳ್ ವಿರೂಪಾಕ್ಷಪ್ಪ ಅವರ ಮಗನ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದರು. ಈ ಹಿನ್ನೆಲೆಯಲ್ಲಿ ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧ ಕ್ರಮ ಕೈಗೊಂಡಿಲ್ಲ. ಇದು ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಿದಂತೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಟೀಕಿಸಿದ್ದಾರೆ.

ಭ್ರಷ್ಟ ಬಿಜೆಪಿ ಎಂಬ ಟ್ಯಾಗ್ ಲೈನ್ ಅಡಿ ಸರಣಿ ಟ್ವೀಟ್ ಮಾಡಿರುವ ಅವರು, ಬಿಜೆಪಿಗೆ ಸುಳ್ಳು ಮನೆ ದೇವರಾದರೆ, ಭ್ರಷ್ಟಾಚಾರ ಪಕ್ಷದ ಅಧಿಕೃತ ಕಾರ್ಯಕ್ರಮ. ದಾಖಲೆಸಮೇತ ಕಂತು ಕಂತಿನ ನೋಟುಗಳು ಮಂಚದ ಮೇಲೆ ಸಿಕ್ಕ ಮೇಲೂ ಬಿಜೆಪಿ ಶಾಸಕರ ಮೇಲೆ ಕ್ರಮ ಯಾಕಿಲ್ಲ ಬಸವರಾಜ ಬೊಮ್ಮಾಯಿ ಅವ್ರೇ? ನಾ ಖಾನೇ ದೂಂಗಾವಾಲ ನರೇಂದ್ರ ಮೋದಿ ಅವ್ರೇ, ಶಾಸಕರ ಕಮಿಷನ್ ವ್ಯವಹಾರದಲ್ಲಿ ನಿಮ್ಮ ಮೌನದ ಪಾಲೆಷ್ಟು ಎಂದು ಪ್ರಶ್ನಿಸಿದ್ದಾರೆ.

ದೆಹಲಿ ಬಿಜೆಪಿಯ ಖಜಾನೆ ಭರ್ತಿ:40% ಭ್ರಷ್ಟಾಚಾರದ ಸಾಕ್ಷಿ ಸಿಕ್ಕರೂ ತಾಕತ್ತು, ಧಮ್ಮು, ಹಮ್ಮು, ಬಿಮ್ಮುಗಳು ಯಾವ ಬಿಲದಲ್ಲಿ ಅಡಗಿ ಕುಳಿತಿವೆ? ರಾಜ್ಯವನ್ನು ಗುಡಿಸಿ ಗುಂಡಾಂತರ ಮಾಡಿರುವ ಭ್ರಷ್ಟ ಬಿಜೆಪಿ ಸರ್ಕಾರ, ದೇಶದ ಎದುರು ರಾಜ್ಯದ ಮಾನ ಹರಾಜಿಗಿಟ್ಟಿದೆ. ವಾರಕ್ಕೆ ಎರಡು ಬಾರಿ ಚುನಾವಣಾ ಪ್ರವಾಸಿಗರಾದ ಮೋದಿ ಮತ್ತು ಶಾ ಜೋಡಿ ರಾಜ್ಯಕ್ಕೆ ಭೇಟಿ ನೀಡುತ್ತಿರುವುದು ವಸೂಲಾಗಿರುವ ಪೇ ಸಿಎಂ ಹಣದ ಪಾಲಿಗಾಗಿಯೇ? ರಾಜ್ಯದ ತೆರಿಗೆಯ ಬೊಕ್ಕಸವನ್ನು ಲೂಟಿ ಮಾಡಿ, ದೆಹಲಿ ಬಿಜೆಪಿಯ ಖಜಾನೆ ಭರ್ತಿ ಮಾಡಿದ ಪಾಪದ ಕೊಡ ತುಂಬಿದೆ ಎಂದು ಖಾರವಾಗಿ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಭವಿಷ್ಯ ನುಡಿದ ಬಿ.ಕೆ.ಹರಿಪ್ರಸಾದ್​:ನಾಚಿಕೆ, ಮಾನ, ಮಾರ್ಯಾದೆ ಹಾಗು ಸ್ವಾಭಿಮಾನ ಎನ್ನುವ ಪದಗಳಿಗೆ ಕಿಂಚಿತ್ತಾದರೂ ಗೌರವ ಇದ್ದರೆ ರಾಜ್ಯದ ಜನರಿಗೆ ಕ್ಷಮೆ ಕೇಳಿ. ಪಾಪದ ಪ್ರಾಯಶ್ಚಿತ್ತಕ್ಕೆ ರಾಜೀನಾಮೆ ಕೊಟ್ಟು ತೊಲಗಿ. ಘನತೆಯುತ ರಾಜ್ಯಕ್ಕೆ ಕಮಿಷನ್ ರಾಜ್ಯದ ಮಸಿ ಬಳಿದ ಬಿಜೆಪಿಗೆ ಜನರು ತಕ್ಕ ಪಾಠ ಕಲಿಸುವುದು ನಿಶ್ಚಿತವಾಗಿದೆ ಎಂದು ಹರಿಪ್ರಸಾದ್ ಭವಿಷ್ಯ ನುಡಿದಿದ್ದಾರೆ.

ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧ ಕಾಂಗ್ರೆಸ್ ಹೋರಾಟ ತೀವ್ರವಾಗಿದ್ದು ನಿನ್ನೆ ಸಹ ಬೀದಿಗಿಳಿದು ಹೋರಾಟ ನಡೆಸಿದೆ. ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಿ ಅವರ ರಾಜೀನಾಮೆಗೆ ಕೊಟ್ಟು ಹಿಡಿಯಲು ಮುಂದಾದ ಕಾಂಗ್ರೆಸ್ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾಂಗ್ರೆಸ್ ಹೋರಾಟ ಹತ್ತಿಕ್ಕುವ ಬಿಜೆಪಿ ಸರ್ಕಾರದ ಪ್ರಯತ್ನವನ್ನು ಸಹ ಕಾಂಗ್ರೆಸ್ ಮುಖಂಡರು ತೀವ್ರವಾಗಿ ಖಂಡಿಸಿದ್ದಾರೆ.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿ, ನಿಮ್ಮ ಭ್ರಷ್ಟಾಚಾರದ ವಿರುದ್ಧ ಧ್ವನಿಯೆತ್ತಿದ್ದಕ್ಕೆ ಎಷ್ಟು ದಿನ ನನ್ನನ್ನು ಬಂಧಿಸಿ ಜೈಲಿನಲ್ಲಿಡಲು ಸಾಧ್ಯ? ನಾಳೆ ಇಡೀ ರಾಜ್ಯದ ಜನ ನಿಮ್ಮ ವಿರುದ್ಧ ದಂಗೆಯೇಳುತ್ತಾರೆ, ಎಲ್ಲರನ್ನೂ ಬಂಧಿಸಿ ಜೈಲುಗಟ್ಟಲು ನಿಮ್ಮಿಂದ ಸಾಧ್ಯವೇ ಬಸವರಾಜ ಬೊಮ್ಮಾಯಿ? ರಾಜೀನಾಮೆ ನೀಡಿ ಮನೆಗೆ ಹೋಗುವುದೊಂದೇ ನಿಮಗೆ ಉಳಿದಿರುವ ದಾರಿ ಎಂದು ಹೇಳಿದ್ದಾರೆ.

ಇದೇ ರೀತಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಎಲ್ಲಾ ಕಾಂಗ್ರೆಸ್ ನಾಯಕರು ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಶಾಸಕರ ರಾಜೀನಾಮೆಗೆ ಒತ್ತಾಯಿಸುವ ಜೊತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರ ಸಹ ದೊಡ್ಡ ಮಟ್ಟದ ಭ್ರಷ್ಟಾಚಾರದಲ್ಲಿ ತೊಡಗಿದ್ದು ಸ್ವತಃ ಸಿಎಂ ಅವರೇ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಒತ್ತಾಯಿಸುತ್ತಿದ್ದು ಮುಂಬರುವ ದಿನಗಳಲ್ಲಿ ಈ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲು ತೀರ್ಮಾನಿಸಿದೆ.

ಇದನ್ನೂ ಓದಿ:ಬಿಜೆಪಿ ಎಂದರೆ ಭ್ರಷ್ಟ ಜನತಾ ಪಕ್ಷ: ಸುರ್ಜೇವಾಲಾ ಆಕ್ರೋಶ

ABOUT THE AUTHOR

...view details